ಹರಪನಹಳ್ಳಿ: ತಾಲ್ಲೂಕಿನ ನಿಚ್ಚವ್ವನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕಲ್ಲುಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿ ಕನಕನಬಸಾಪುರ, ನಿಚ್ಚವ್ವನಹಳ್ಳಿ ಗ್ರಾಮಸ್ಥರು ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಅವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.
ತಾಲ್ಲೂಕಿನ ಚಿಗಟೇರಿ ಹೋಬಳಿ ವ್ಯಾಪ್ತಿಯ ನಿಚ್ಚವ್ವನಹಳ್ಳಿ ಗ್ರಾಮದ ಸರ್ವೆ ನಂಬರ್ 278/5ರಲ್ಲಿ 17.50 ಎಕರೆ ಪ್ರದೇಶ ಸರ್ಕಾರಿ ಜಮೀನಿನಲ್ಲಿ ಕಲ್ಲುಗಣಿಗಾರಿಕೆ ನಡೆಸಲು ದಾವಣಗೆರೆಯ ಗಿರೀಶ್ ಮತ್ತು ಜೀತೇಂದ್ರ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. ಈ ಸ್ಥಳದಲ್ಲಿ ಕಲ್ಲುಗಣಿಗಾರಿಕೆಗೆ ಅವಕಾಶ ಕಲ್ಪಿಸಿದರೆ, ಅಕ್ಕಪಕ್ಕದ ಸಾವಿರಾರು ಎಕರೆ ಜಮೀನುಗಳಿಗೆ ಹಾನಿಯಾಗುತ್ತದೆ ಎಂದು ದೂರಿದರು.
ಈಗಾಗಲೇ ನ. 5ರಂದು ಚಿಗಟೇರಿ ಹೋಬಳಿಯ ಉಪತಹಶೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿ ತಂಡ ಸ್ಥಳ ಪರಿಶೀಲನೆಗೆ ಬಂದಿದ್ದಾಗ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಲ್ಲುಗಣಿಗಾರಿಕೆಯಿಂದ ಪಕ್ಕದಲ್ಲಿರುವ ಕೆರೆ ನೀರು ಕಲುಷಿತಗೊಳ್ಳುತ್ತದೆ. ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗುತ್ತದೆ. ಬೀಜ ಉತ್ಪಾದನೆ ಮಾಡುವ ರೈತರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗುತ್ತದೆ ಎಂದು ಕನಕನಬಸಾಪುರ ಗ್ರಾಮದ ಮಂಜುನಾಥ, ಪುತ್ರೇಶ್ ಹಾಗೂ ರೈತರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.