ಬಳ್ಳಾರಿ: ಬಳ್ಳಾರಿಯಲ್ಲಿ ‘ಅಪರೆಲ್ ಪಾರ್ಕ್’ ಸ್ಥಾಪನೆಗೆ ಸರ್ಕಾರ ಚಿಂತನೆ ನಡೆಸಿರುವಾಗಲೇ, ‘ಹೊಸ ಸಿದ್ಧ ಉಡುಪು ಪಾರ್ಕ್ ಬೇಡ; ಮುಂಡ್ರಗಿ ಕೈಗಾರಿಕಾ ಪ್ರದೇಶದಲ್ಲಿರುವ ಉದ್ಯಮಗಳಿಗೇ ಸೌಲಭ್ಯ ಕೊಟ್ಟು ಅಭಿವೃದ್ಧಿಪಡಿಸಿ’ ಎಂಬ ಒತ್ತಾಯ ಕೇಳಿಬರುತ್ತಿದೆ.
‘ಭಾರತ್ ಜೋಡೋ ಯಾತ್ರೆ’ ಕೈಗೊಂಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಳ್ಳಾರಿ ಕೌಲ್‌ಬಜಾರ್ ಪ್ರದೇಶದಲ್ಲಿ ಜೀನ್ಸ್ ಪ್ಯಾಂಟ್ ಸಿದ್ಧಪಡಿಸುವ ಕೆಲ ಮನೆಗಳಿಗೆ ಭೇಟಿ ನೀಡಿದ್ದರು. ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ₹ 5,000 ಕೋಟಿಯಲ್ಲಿ ಬಳ್ಳಾರಿಯನ್ನು ಜೀನ್ಸ್ ರಾಜಧಾನಿ ಮಾಡುವುದಾಗಿ ಪ್ರಕಟಿಸಿದ್ದರು.
ಜಿಲ್ಲಾಡಳಿತಕ್ಕೆ ಅಪರೆಲ್ ಪಾರ್ಕ್ ಸ್ಥಾಪನೆ ಸಂಬಂಧ ಇದುವರೆಗೆ ಸರ್ಕಾರದಿಂದ ಯಾವುದೇ ಅಧಿಕೃತ ಸಂದೇಶ ಬಂದಿಲ್ಲ. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಜೀನ್ಸ್ ಸೇರಿದಂತೆ ಸಿದ್ಧ ಉಡುಪು ಉದ್ಯಮಗಳನ್ನು ಬಲಪಡಿಸುವ ಕುರಿತು ಖುದ್ದು ಜವಳಿ ಇಲಾಖೆ ಅಧಿಕಾರಿಗಳ ಜತೆ ಪ್ರಾಥಮಿಕ ಚರ್ಚೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ನಾಗೇಂದ್ರ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತ ಬಳಿಕ ಜೀನ್ಸ್ ಪಾರ್ಕ್ ಸ್ಥಾಪನೆಗೆ ಸೂಕ್ತ ಸ್ಥಳ ಹುಡುಕುವಂತೆ ಜವಳಿ ಅಧಿಕಾರಿಗಳಿಗೆ ಸೂಚಿಸಿದ್ದರು. ಜವಳಿ ಅಧಿಕಾರಿಗಳು ಸೂಕ್ತ ಸ್ಥಳ ನಿಗದಿಪಡಿಸಲು ಮನವಿ ಮಾಡಿ ಪವನ್ ಕುಮಾರ್ ಮಾಲಪಾಟಿ ಜಿಲ್ಲಾಧಿಕಾರಿ ಆಗಿದ್ದಾಗಲೇ ಪತ್ರ ಬರೆದಿದ್ದರು ಎಂದೂ ಮೂಲಗಳು ಹೇಳಿವೆ.
ಈಗಾಗಲೇ ಬಳ್ಳಾರಿಯ ಮುಂಡ್ರಗಿಯಲ್ಲಿ 302 ಎಕರೆಯಲ್ಲಿ ನಾಲ್ಕು ಹಂತದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲಾಗಿದೆ. 2005ರ ಬಳಿಕ ನಿರ್ಮಿಸಿರುವ 4ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಹೊಟೇಲ್‌ಗೆ ಮಂಜೂರಾದ ಒಂದು ನಿವೇಶನ ಹೊರತುಪಡಿಸಿ, ಉಳಿದಂತೆ 83 ಜೀನ್ಸ್ ಮತ್ತು ಸಿದ್ಧ ಉಡುಪು ತಯಾರಿಕಾ ಘಟಕಗಳಿಗೆ 64.26 ಎಕರೆ ಹಂಚಿಕೆ ಮಾಡಲಾಗಿದೆ.
ನಾಲ್ಕನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಅಡ್ಡಾಡಿದರೆ ಇಡೀ ಪ್ರದೇಶ ನಿರ್ಜನವಾಗಿ, ನಿರ್ಜೀವವಾದಂತೆ ಕಂಡುಬರುತ್ತದೆ. ಉದ್ಯಮಗಳು ರೋಗಗ್ರಸ್ಥವಾಗಿರುವುದು ರಾಚುತ್ತದೆ. ಅಲ್ಲೊಂದು, ಇಲ್ಲೊಂದು ಜೀನ್ಸ್ ವಾಷಿಂಗ್ ಯೂನಿಟ್‌ಗಳು, ಡೈಯಿಂಗ್ ಮತ್ತು ಪ್ರೊಸೆಸಿಂಗ್ ಯೂನಿಟ್, ಸಿದ್ಧ ಉಡುಪು ಘಟಕಗಳು ಕೆಲಸ ಮಾಡುತ್ತಿವೆ.
‘ಹೊಸ ಅಪರೆಲ್ ಪಾರ್ಕ್ ಬೇಡ. ಈಗಿರುವ ಪ್ರದೇಶವನ್ನೇ ಉತ್ತಮವಾಗಿ ಅಭಿವೃದ್ಧಿಪಡಿಸಿದರೆ ಸಾಕು. ಇದರಿಂದ ಸರ್ಕಾರಕ್ಕೆ ಹಣವೂ ಉಳಿಯಲಿದೆ. ಉದ್ಯಮಗಳೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿವೆ. ಹೊಸ ಅಪರೆಲ್ ಪಾರ್ಕ್ ಆದರೆ ಅಲ್ಲಿಗೆ ಹೋಗುವವರು ಯಾರು? ಹೊಸ ಉದ್ಯಮಿಗಳಂತೂ ಬರುವುದಿಲ್ಲ’ ಎಂಬುದು ಬಳ್ಳಾರಿ ಅಪರೆಲ್ ಪಾರ್ಕ್ ಅಸೋಸಿಯೇಷನ್ ಅಧ್ಯಕ್ಷ ಜೆ. ವೇಣುಗೋಪಾಲ್ ಅಭಿಪ್ರಾಯ.
‘ಈಗಾಗಲೇ ಶೇ 30ಕ್ಕೂ ಹೆಚ್ಚು ಸಿದ್ಧ ಉಡುಪು ಘಟಕಗಳು ಬಳ್ಳಾರಿ ತೊರೆದು ಗುಜರಾತ್ ಮತ್ತು ರಾಜಸ್ಥಾನಕ್ಕೆ ವಲಸೆ ಹೋಗಿವೆ. ಪರಿಸರ ನಿಯಮಗಳನ್ನು ಪಾಲಿಸದ ಕಾರಣಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲವು ಘಟಕಗಳನ್ನು ಬಂದ್ ಮಾಡಿಸಿದೆ. ಇನ್ನೂ ಕೆಲವು ಘಟಕಗಳಿಗೆ ಬಂದ್ ಮಾಡುವಂತೆ ನೋಟಿಸ್ ಬಂದಿದೆ. ಇಂಥ ಸಂದಿಗ್ಧದಲ್ಲಿ ಸಾಯಲೂ ಆಗದ, ಬದುಕಲೂ ಆಗದ ಸ್ಥಿತಿಯಲ್ಲಿ ಸಿದ್ಧ ಉಡುಪು ತಯಾರಕರಿದ್ದಾರೆ. ಇದರಿಂದ ಪಾರಾಗಲು ಸರ್ಕಾರ ನೆರವಿಗೆ ಬರಬೇಕು’ ಎಂದು ವೇಣುಗೋಪಾಲ್ ಮನವಿ ಮಾಡಿದರು.
Highlights - ಅಸೋಸಿಯೇಷನ್ ಬೇಡಿಕೆಗಳು * ₹20ಕೋಟಿ ವೆಚ್ಚದಲ್ಲಿ ಸಾಮಾನ್ಯ ಕಲುಷಿತ ನೀರು ಶುದ್ಧೀಕರಣ ಘಟಕ ಸ್ಥಾಪನೆ * ನೀರಿನ ಸೌಲಭ್ಯ ಒದಗಿಸುವುದು * ರಿಯಾಯ್ತಿ ದರದ ವಿದ್ಯುತ್ ಪೂರೈಕೆ * ಸಬ್ಸಿಡಿ ಸಹಿತ, ಬಡ್ಡಿ ರಹಿತ ಸಾಲ
Quote - ರಸ್ತೆ ರೈಲು ವಿಮಾನ ಸಂಪರ್ಕ ಹಾಗೂ ಸತತ ವಿದ್ಯುತ್ ನೀರಿನ ಸೌಲಭ್ಯ ಕಲ್ಪಿಸದಿದ್ದರೆ ಅಪರೆಲ್ ಪಾರ್ಕ್ ಮಾಡಿ ಪ್ರಯೋಜನವಿಲ್ಲ ಭರತ್ ಜೈನ್ ಮೂತಾ ಜೀನ್ಸ್ ಕಾರ್ಖಾನೆ ಮಾಲೀಕ
Cut-off box - ಕೋವಿಡ್ ತಂದೊಡ್ಡಿದ ಸಂಕಷ್ಟ... 2018–19ರವರೆಗೆ ಜೀನ್ಸ್ ಉದ್ಯಮ ಆರ್ಥಿಕವಾಗಿ ಸದೃಢವಾಗಿತ್ತು. 2020ರಲ್ಲಿ ಬಂದೆರಗಿದ ಕೋವಿಡ್ ಎಲ್ಲ ಉದ್ಯಮಗಳಂತೆ ಇದನ್ನೂ ಸಂಕಷ್ಟಕ್ಕೆ ದೂಡಿತು. ಆನಂತರ ಚೇತರಿಸಿಕೊಳ್ಳಲೇ ಇಲ್ಲ. ‘ಕೋವಿಡ್‌ಗೆ ಮುನ್ನ ಪ್ರತಿ ದಿನ ಬಳ್ಳಾರಿಯಲ್ಲಿ 1.5 ಲಕ್ಷ ಜೀನ್ಸ್ ಪ್ಯಾಂಟ್‌ಗಳು ತಯಾರಾಗುತ್ತಿದ್ದವು. ಆನಂತರ ಕೇವಲ 60 ಸಾವಿರಕ್ಕೆ ಕುಸಿದಿದೆ. ಪ್ರತ್ಯಕ್ಷವಾಗಿ ಪರೋಕ್ಷವಾಗಿ 2 ಲಕ್ಷ ಕಾರ್ಮಿಕರು ಜೀನ್ಸ್ ಉದ್ಯಮಗಳನ್ನು ನಂಬಿದ್ದಾರೆ’ ಎಂದು ವೇಣುಗೋಪಾಲ್ ವಿವರಿಸಿದರು. ‘60 ಸಾವಿರ ಪ್ಯಾಂಟ್‌ಗಳಿಗೆ 20 ಡೈಯಿಂಗ್ ಮತ್ತು ಪ್ರೊಸೆಸಿಂಗ್ ಘಟಕಗಳು ಸಾಕು. 50ಕ್ಕೂ ಹೆಚ್ಚು ಘಟಕಗಳಿವೆ. ಪ್ರತಿ ಪ್ಯಾಂಟ್‌ಗೆ ಬಣ್ಣ ಹಾಕಲು ₹ 30 ವೆಚ್ಚವಾಗಲಿದೆ. ವಿಪರೀತ ಪೈಪೋಟಿಯಿಂದ ಈ ವೆಚ್ಚ ಈಗ ₹ 15ರಿಂದ 18ಕ್ಕೆ ಇಳಿದಿದೆ. ಉದ್ಯಮಿಗಳಿಗೂ ಊಟ ಬಟ್ಟೆ ಸಂಬಳ ಸಿಕ್ಕರೆ ಸಾಕು ಎಂಬ ಪರಿಸ್ಥಿತಿ ಎದುರಾಗಿದೆ’ ಎಂದು ಸಂಕಷ್ಟದ ಬದುಕಿಗೆ ಅವರು ಕನ್ನಡಿ ಹಿಡಿದರು.
Cut-off box - ನೀರು ವಿದ್ಯುತ್ ದುಬಾರಿ! ‘ನಾವು ಪ್ರತಿದಿನ 500 ಪ್ಯಾಂಟ್‌ಗಳಿಗೆ ಬಣ್ಣ ಹಾಕುತ್ತೇವೆ. ಮೊದಲು 18 ಜನ ದುಡಿಯುತ್ತಿದ್ದರು. ಸದ್ಯ ನಾಲ್ವರು ಇದ್ದಾರೆ. ಪ್ರತಿ ತಿಂಗಳು ನೀರಿಗೆ (ರೈತರಿಂದ ಖರೀದಿ) ₹ 20 ಸಾವಿರ ವಿದ್ಯುತ್‌ಗೆ ₹ 45 ಸಾವಿರ ಕಟ್ಟುತ್ತೇವೆ’ ಎಂದು ಮುಂಡ್ರಗಿ ಕೈಗಾರಿಕಾ ಪ್ರದೇಶದಲ್ಲಿರುವ ರಾಘವೇಂದ್ರ ಜೀನ್ಸ್ ವಾಷರ್ಸ್ ಮಾಲೀಕ ರಾಘವೇಂದ್ರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.