ಬಳ್ಳಾರಿ: ನಗರದ ಪ್ರತಿಷ್ಠಿತ ಅವ್ವಂಬಾವಿಯಲ್ಲಿನ ನೂರಾರು ಕೋಟಿ ರೂಪಾಯಿ ಮೌಲ್ಯದ 11.59 ಎಕರೆ ಸರ್ಕಾರಿ ಜಮೀನನ್ನು ಬಳ್ಳಾರಿ ತಾಲ್ಲೂಕು ತಹಶೀಲ್ದಾರ್ ಗುರುರಾಜ್ ಛಲುವಾದಿ ನಿಯಮಬಾಹಿರವಾಗಿ ಬೇರೊಬ್ಬರಿಗೆ ಹಕ್ಕು ಬದಲಾವಣೆ ಮಾಡಿಕೊಟ್ಟಿದ್ದಾರೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೆಪ್ಟೆಂಬರ್ 26ರಂದೇ ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದಾರೆ.
ಜಿಲ್ಲೆಯ ಪ್ರಮುಖ ರಾಜಕಾರಣಿಗಳ ಮನೆಗಳು ಇರುವ ಅವ್ವಂಬಾವಿಯಲ್ಲಿ ಮಾರ್ಗಸೂಚಿ ದರವೇ ಎಕರೆಗೆ ₹3 ಕೋಟಿ ಇದೆ. ಅದರಂತೆ ಜಮೀನಿನ ಒಟ್ಟು ಬೆಲೆ ₹34.77 ಕೋಟಿಗೂ ಹೆಚ್ಚು. ಆದರೆ, ಇಲ್ಲಿನ ಮಾರುಕಟ್ಟೆ ದರ ಚದರಡಿಗೆ ₹3,300ಕ್ಕೂ ಅಧಿಕವಿದ್ದು, ಒಟ್ಟು ಜಮೀನಿನ ಬೆಲೆ ಕನಿಷ್ಠ ₹150 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಮೂಲತಃ ಇನಾಂ ಜಮೀನಾಗಿದ್ದ ಇದು ಪ್ಯಾಟೆ ಬಸವೇಶ್ವರ ಸ್ವಾಮಿ ದೇವಾಲಯಕ್ಕೆ ಸೇರಿತ್ತು. ಆದರೆ, ಪಾರ್ವತಮ್ಮ ಎಂಬುವವರು ಈ ಜಮೀನು ತಮ್ಮದೆಂದು ವಾದಿಸಿದ್ದರು. 1972ರಲ್ಲಿ ತಮಗೆ ಹಕ್ಕುಪತ್ರ ಸಿಕ್ಕಿರುವುದಾಗಿ 1981ರಲ್ಲಿ ಭೂ ನ್ಯಾಯ ಮಂಡಳಿಯಿಂದ ಗೇಣಿ ಮಂಜೂರಾತಿ ದೊರೆತಿದೆ ಎಂದು ದಾಖಲೆ ಸಲ್ಲಿಸಿದ್ದರು. ‘ಗೇಣಿ ಹಕ್ಕು ಮಂಜೂರಾದ ಬಗ್ಗೆ ಯಾವುದೇ ಮೂಲ ಕಡತಗಳು ಇಲ್ಲ’ ಎಂದು ಹಿಂದಿನ ತಹಶೀಲ್ದಾರರು ಜಿಲ್ಲಾಡಳಿತಕ್ಕೆ ವರದಿ ನೀಡಿದ್ದರು. ಹೀಗಾಗಿ ದಾಖಲೆಗಳು ನಕಲಿ ಎಂದು ಎಫ್‌ಐಆರ್ ಕೂಡ ದಾಖಲಾಗಿದೆ.
ಇದಿಷ್ಟೇ ಅಲ್ಲದೇ, ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ಅಂದಿನ ವಿಭಾಗೀಯ ಅಧಿಕಾರಿ ಹೇಮಂತ್ ಅವರು ಮೇ 25ರಲ್ಲಿ ಆದೇಶಿಸಿದ್ದರು ಎಂಬುದು ದಾಖಲೆಗಳಿಂದ ಗೊತ್ತಾಗಿದೆ.
ಈ ಮಧ್ಯೆ, ಪಾರ್ವತಮ್ಮ ಸಲ್ಲಿಸಿದ್ದ ರಿಟ್ ಅರ್ಜಿಯೊಂದಕ್ಕೆ ತೀರ್ಪು ನೀಡಿದ್ದ ಹೈಕೋರ್ಟ್‌ನ ಧಾರವಾಡ ಪೀಠ, ದಾಖಲೆಗಳನ್ನು ಪರಾಮರ್ಶಿಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಹೇಳಿತ್ತು. ತಹಶೀಲ್ದಾರ್ ಗುರುರಾಜ್ ಅವರು ಜುಲೈ 9ರಂದು ಜಮೀನನ್ನು ಪಾರ್ವತಮ್ಮಗೆ ಹಕ್ಕು ಬದಲಾವಣೆ ಮಾಡಿ ಆದೇಶಿಸಿದ್ದರು.
‘ತಹಶೀಲ್ದಾರ್ ನಿರ್ಧಾರದಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ಕೈತಪ್ಪಿದೆ’ ಎಂದು ಜಿಲ್ಲಾಧಿಕಾರಿ ತಮ್ಮ ವರದಿಯಲ್ಲಿ ಸರ್ಕಾರಕ್ಕೆ ಸ್ಪಷ್ಟವಾಗಿ ವಿವರಿಸಿದ್ದಾರೆ. ತಹಶೀಲ್ದಾರ್ ಮಾಡಿದ ಆದೇಶದ ವಿರುದ್ಧ ಲೋಕಾಯುಕ್ತದಲ್ಲೂ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.