ADVERTISEMENT

ದೇವದಾರಿ ಗಣಿ‌: ನಿರಪೇಕ್ಷಣಾ ಪತ್ರ ನೀಡದಂತೆ ಮನವಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 16:05 IST
Last Updated 18 ಜೂನ್ 2024, 16:05 IST
18 ಎಸ್ ಎ ಎನ್ 01 : ಕುದುರೆಮುಖ ಕಂಪನಿಗೆ ದೇವದಾರಿ ಗಣಿ ಆರಂಭಿಸಲು‌ ನಿರಪೇಕ್ಷಣಾ ಪತ್ರವನ್ನು ನೀಡಬಾರದೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ನರಸಿಂಗಾಪುರ ಗ್ರಾಮ ಪಂಚಾಯ್ತಿಗೆ ಅಧ್ಯಕ್ಷೆ ಶಿಲ್ಪಾ‌ಶ್ರೀನಿವಾಸ್, ಪಿಡಿಒ ಹನುಮಂತಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
18 ಎಸ್ ಎ ಎನ್ 01 : ಕುದುರೆಮುಖ ಕಂಪನಿಗೆ ದೇವದಾರಿ ಗಣಿ ಆರಂಭಿಸಲು‌ ನಿರಪೇಕ್ಷಣಾ ಪತ್ರವನ್ನು ನೀಡಬಾರದೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ನರಸಿಂಗಾಪುರ ಗ್ರಾಮ ಪಂಚಾಯ್ತಿಗೆ ಅಧ್ಯಕ್ಷೆ ಶಿಲ್ಪಾ‌ಶ್ರೀನಿವಾಸ್, ಪಿಡಿಒ ಹನುಮಂತಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.   

ಸಂಡೂರು: ಕುದುರೆಮುಖ ಕಂಪನಿಗೆ ದೇವದಾರಿ ಗಣಿ ಆರಂಭಿಸಲು ಗ್ರಾಮ ಪಂಚಾಯ್ತಿಯಿಂದ ನಿರಪೇಕ್ಷಣಾ ಪತ್ರ ನೀಡಬಾರದು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದಿಂದ ನರಸಿಂಗಾಪುರ ಗ್ರಾಮ ಪಂಚಾಯ್ತಿಗೆ ಮನವಿ ಸಲ್ಲಿಸಲಾಗಿದೆ.

ರೈತ ಮುಖಂಡ ಜಿ.ಕೆ.ನಾಗರಾಜ ಮಾತನಾಡಿ, ಗ್ರಾಮದ ನಾಲ್ಕು ದಿಕ್ಕುಗಳಲ್ಲಿ ಈಗಾಗಲೇ ಗಣಿಗಾರಿಕೆ ನಡೆಯುತ್ತಿದೆ. ಪಶ್ಚಿಮ ದಿಕ್ಕಿನಲ್ಲಿ ದೇವದಾರಿ ಬೆಟ್ಟ ಮಾತ್ರ ಉಳಿದಿದೆ. ಅರಣ್ಯ ನಾಶದಿಂದ ಕಳೆದ ಬೇಸಿಗೆಯಲ್ಲಿ ದಾಖಲೆ ತಾಪಮಾನ ಅನುಭವಿಸಿದ್ದೇವೆ. ಇದೀಗ ಮತ್ತೆ ದೇವದಾರಿ ಗಣಿಯನ್ನು ಸರ್ಕಾರ ಕುದುರೆಮುಖ ಕಂಪನಿಗೆ ನೀಡಿರುವುದು ಯಾವ ನ್ಯಾಯ? ಅರಣ್ಯದಲ್ಲಿ ಗಣಿಗಾರಿಕೆ ನಡೆದರೆ ಕಾಡುಪ್ರಾಣಿಗಳು ಊರಿಗೆ ಮತ್ತು ರೈತರ ಜಮೀನುಗಳಿಗೆ ನುಗ್ಗಿ ಮಾನವ, ಕಾಡು ಪ್ರಾಣಿ ಸಂಘರ್ಷಕ್ಕೆ ಕಾರಣವಾಗುವುದಿಲವೇ ಎಂದು ಪ್ರಶ್ನಿಸಿದ್ದಾರೆ.

ಈ ಭಾಗದ ರೈತರು ತೆಂಗು, ಅಡಿಕೆ, ಮಹಾಗನಿ, ತೇಗ, ಶ್ರೀಗಂಧ ಮುಂತಾದ ಬಹುವಾರ್ಷಿಕ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಗಣಿಗಾರಿಕೆ ಚಟುವಟಿಕೆಗಳು ಹೆಚ್ಚಾದರೆ ರೈತರ ಬಹುವಾರ್ಷಿಕ ಬೆಳೆಗಳಿಗೂ ಉಳಿಗಾಲವಿರುವುದಿಲ್ಲ. ಈಗಾಗಲೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆರ್.ಐ.ಪಿ.ಎಲ್ ಕಾರ್ಖಾನೆಗೆ ಸ್ಥಳೀಯರು ಆಕ್ಷೇಪಣೆ ಸಲ್ಲಿಸಿದ್ದರೂ ಕಾರ್ಖಾನೆ ಸ್ಥಾಪನೆಗೊಂಡು ಜನ, ಜಾನುವಾರು, ಗಿಡಮರಗಳಿಗೆ ಹಾನಿಯುಂಟಾಗುತ್ತಿದೆ.

ADVERTISEMENT

ಕುದುರೆ ಮುಖ ಕಂಪನಿಗೆ ಅರಣ್ಯ ಇಲಾಖೆ ಪರವಾನಿಗೆ ನೀಡಿರುವುದಲ್ಲದೆ. ಸುಮಾರು 99 ಸಾವಿರ ಮರಗಳ ಕಟಾವು ವಿಷಯವನ್ನು ಮುಚ್ಚಿಟ್ಟಿದೆ. ಕುದುರೆ ಮುಖ ಕಂಪನಿಗೆ 'ಸಿ' ಕೆಟಗರಿಯ ಗಣಿ ನೀಡಬಹುದಾಗಿತ್ತು. ಬದಲಿಗೆ ಹೊಸ ಗಣಿಯನ್ನು ನೀಡಲು ನಮ್ಮ ಆಕ್ಷೇಪಣೆಯಿದೆ. ಸ್ಥಳೀಯ ನಿವಾಸಿಗಳ‌ ಹಿತದೃಷ್ಠಿಯಿಂದ ಹಾಗೂ ಅರಣ್ಯ ನಾಶ ಮಾಡದಂತೆ ತಡೆಯಲು ಕಂಪನಿಗೆ ಪರವಾನಿಗೆ ನೀಡಬಾರದು. ಯಾವುದೇ ಕಾರಣಕ್ಕೂ ಬೆಟ್ಟದಲ್ಲಿ ಗಣಿಗಾರಿಕೆ ನಡೆಯಬಾರದು ಎಂದು ಒತ್ತಾಯಿಸಿದರು.

ಜೊತೆಗೆ ಮುಂದಿನ ಗ್ರಾಮ ಸಭೆಯಲ್ಲಿಯೂ ಈ ಕುರಿತು ಚರ್ಚೆ ನಡೆಸಿ ಪರವಾನಿಗೆ ನೀಡಬಾರದು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.