ಬಳ್ಳಾರಿ: ಸಂಡೂರಿನ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ (ಆರಂಭಿಕ ಪ್ರಸ್ತಾವ 484 ಹೆಕ್ಟೇರ್) ಕುದುರೆಮುಖ ಐರನ್ ಓರ್ ಕಂಪನಿ (ಕೆಐಒಸಿಎಲ್) ಕೈಗೊಳ್ಳುವ ಗಣಿಗಾರಿಕೆಗೆ ಅರಣ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿ ವರದಿ ನೀಡಿದ್ದರೂ, ರಾಜ್ಯ ಸರ್ಕಾರ ಅದನ್ನೆಲ್ಲ ಬದಿಗೊತ್ತಿ ಕೇಂದ್ರ ಸರ್ಕಾರಕ್ಕೆ ಬೇರೆಯದೇ ವರದಿ ಕೊಟ್ಟಿತ್ತು.
ದೇವದಾರಿ ಗಣಿಗೆ ‘ಸ್ಟೇಜ್–1’ ಅನುಮತಿ ಕೋರಿ ರಾಜ್ಯ ಸರ್ಕಾರ 2020ರ ಅಕ್ಟೋಬರ್ 9ರಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಕೆಐಒಸಿಎಲ್ ಅನ್ನು ಕೊಂಡಾಡಿದ್ದ ರಾಜ್ಯ ಸರ್ಕಾರ, ಆಗ ಅರಣ್ಯ ಇಲಾಖೆಯ ವಿರೋಧಗಳನ್ನೆಲ್ಲ ಮರೆಮಾಚಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.
2020ರ ಅಕ್ಟೋಬರ್‌ನಲ್ಲಿ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿ ಇತ್ತು. ಹೊಸಪೇಟೆ ಶಾಸಕರಾಗಿದ್ದ ಆನಂದ್ ಸಿಂಗ್ ಅರಣ್ಯ ಸಚಿವರಾಗಿದ್ದರು.
ಸರ್ಕಾರದ ಸಮರ್ಥನೆ: ಕರ್ನಾಟಕದಲ್ಲಿ ಪ್ರಾಣಿಗಳ ಅದರಲ್ಲೂ ಆನೆಗಳ ಸುಲಭ ಸಂಚಾರಕ್ಕೆ ಅರಣ್ಯ ಕಾರಿಡಾರ್ ಅಭಿವೃದ್ಧಿಪಡಿಸಲು ಕೆಐಒಸಿಎಲ್ ಉತ್ಸುಕವಾಗಿದೆ. ಅದಕ್ಕಾಗಿ ಕಂಪನಿಯು 10 ವರ್ಷಗಳಲ್ಲಿ ₹50 ಕೋಟಿ ಖರ್ಚು ಮಾಡಲಿದೆ. ಯೋಜನಾ ಸ್ಥಳದಲ್ಲಿ ಅರಣ್ಯ ಇಲಾಖೆಯ ಮಾರ್ಗದರ್ಶನದಂತೆ ಸಸಿಗಳನ್ನು ನೆಡಲು ಒಪ್ಪಿದೆ. ‘ಕಾಂಪನ್ಸೇಟರಿ ಅಫ್ಫಾರ್‌ಸ್ಟೇಷನ್‌ಗೆ (ಹಾನಿಗೀಡಾದ ಅರಣ್ಯಕ್ಕೆ ಪ್ರತಿಯಾಗಿ ಬೇರೆಡೆ ಬೆಳೆಸಲಾಗುವ ಅರಣ್ಯ) ಸಂಸ್ಥೆ ಹಣ ಪಾವತಿಸಲಿದೆ.
‘ಕೆಐಒಸಿಎಲ್ ಸಾರ್ವಜನಿಕ ಉದ್ದಿಮೆ. ಸಂಸ್ಥೆಯು ರಾಜ್ಯದಲ್ಲಿ ₹3,500 ಕೋಟಿ ಹೂಡಿಕೆ ಮಾಡಲಿದ್ದು, 1,500 ಮಂದಿಗೆ ಉದ್ಯೋಗ ಕೊಡಲಿದೆ. ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯಿಂದ ರಾಜ್ಯದ ಒಟ್ಟು ದೇಶೀಯ ಉತ್ಪನ್ನ ಹೆಚ್ಚಳ ಆಗುತ್ತದೆ. ರಾಜ್ಯಕ್ಕೆ ಆದಾಯ ಸಿಗುತ್ತದೆ. ಕಂಪನಿಯು ಪ್ರಸ್ತಾವಿತ 484 ಹೆಕ್ಟೇರ್ ಪ್ರದೇಶದ ಯೋಜನೆಯಲ್ಲಿ 82 ಹೆಕ್ಟೇರ್ ಕಡಿತ ಮಾಡಲು ಒಪ್ಪಿದೆ’ ಎಂದು ಕೇಂದ್ರಕ್ಕೆ ಸಲ್ಲಿಸಿದ್ದ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು.
ಆದರೆ, ಅರಣ್ಯ ಇಲಾಖೆ ವರದಿಗೆ ವ್ಯತಿರಿಕ್ತವಾದ ವರದಿಯನ್ನು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದನ್ನು ಕೇಂದ್ರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅರಣ್ಯ ಉಪ ಮಹಾನಿರೀಕ್ಷಕ ಬ್ರಿಜೇಂದರ್ ಸ್ವರೂಪ್ ಗಮನಿಸಿದ್ದರು. ಈ ಹಿನ್ನೆಲೆಯಲ್ಲಿ 2020ರ ನವೆಂಬರ್ 26ರಂದು ಕರ್ನಾಟಕದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ (ಅರಣ್ಯ) ಪತ್ರ ಬರೆದಿದ್ದ ಅವರು, ಸರ್ಕಾರದಿಂದ ಸ್ಪಷ್ಟನೆ ಕೇಳಿದ್ದರು.
ದೇವದಾರಿ ಗಣಿ ಗುತ್ತಿಗೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ನೀಡಿದ್ದ ವರದಿಗೆ ವ್ಯತಿರಿಕ್ತವಾದ ವರದಿ ನೀಡುತ್ತಿರುವುದಕ್ಕೆ ರಾಜ್ಯ ಸರ್ಕಾರ ಉತ್ತರಿಸಬೇಕು. ಯೋಜನೆಯ ಅನುಷ್ಠಾನದ ವಿವಿಧ ಹಂತಗಳಲ್ಲಿ ಸುಮಾರು 99,330 ಮರಗಳು ಉರುಳಲಿವೆ ಎಂದು ಡಿಸಿಎಫ್ ವರದಿಯಲ್ಲಿದೆ. ಇದನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದಿದ್ದರು.
ಸದ್ಯ ಇರುವ ಗಣಿ ಗುತ್ತಿಗೆಗಳ ಅವಧಿ ಮುಗಿಯುವುದಕ್ಕೆ ಮೊದಲೇ ಮತ್ತೊಂದು ಗಣಿಗೆ ಗುತ್ತಿಗೆಗೆ ಅನುಮತಿ ನೀಡುವುದರ ಬಗ್ಗೆ ಸ್ಪಷ್ಟೀಕರಣ ಕೊಡಬೇಕು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಬಳ್ಳಾರಿ ಜಿಲ್ಲೆಯಲ್ಲಿ ಅನುಮತಿಸಲಾಗಿರುವ ವಾರ್ಷಿಕ ಅದಿರು ಉತ್ಪಾದನೆ 28 ದಶಲಕ್ಷ ಮೆಟ್ರಿಕ್ ಟನ್ (ಎಂಎಂಟಿ). ಆದರೆ, ಇದಕ್ಕಿಂತಲೂ ಅಧಿಕ ಉತ್ಪಾದನೆಗೆ ಅವಕಾಶ ನೀಡುತ್ತಿರುವುದಕ್ಕೆ ಸ್ಪಷ್ಟನೆ ಬೇಕು ಎಂದು ಸೂಚಿಸಿದ್ದರು.
ಬಳ್ಳಾರಿಯಲ್ಲಿ ವಿವಿಧ ವರ್ಗದ ಒಟ್ಟು 67 ಗಣಿಗಳು ಗುತ್ತಿಗೆಗೆ ಲಭ್ಯವಿವೆ. ಈ ಪೈಕಿ, ಯಾವುದೇ ಗಣಿಯನ್ನು ಕೆಐಒಸಿಎಲ್‌ಗೆ ನೀಡಬಹುದು ಎಂದು ಡಿಸಿಎಫ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಕೆಐಒಸಿಎಲ್ ಗಣಿಗಾರಿಕೆಗೆ ಅರಣ್ಯ ಭೂಮಿಯನ್ನೇ ಕೇಳುತ್ತಿರುವುದಕ್ಕೆ ರಾಜ್ಯ ಸರ್ಕಾರ ಸಮಜಾಯಿಷಿ ನೀಡಬೇಕು ಎಂದು ಇನ್ಸ್‌ಪೆಕ್ಟರ್ ಜನರಲ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.
ಸಂಡೂರಿನ ಅರಣ್ಯದಲ್ಲಿ ಕೆಐಒಸಿಎಲ್‌ಗೆ ದೇವದಾರಿ ಗಣಿಗಾರಿಕೆಗೆ ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದ ರಿಟ್ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಇದರ ಹೊರತಾಗಿಯೂ ದೇವದಾರಿಗೆ ಸಂಬಂಧಿಸಿದಂತೆ ರಾಜ್ಯ, ಕೇಂದ್ರ ಸರ್ಕಾರದ ಹಂತದಲ್ಲಿ ಹಲವು ಬೆಳವಣಿಗೆ, ನಿರ್ಧಾರಗಳಾಗಿವೆ. ಗಣಿಗಾರಿಕೆಗೆ ಸ್ಟೇಜ್–2 ಅನುಮತಿಯೂ ಸಿಕ್ಕಿದೆ.
‘ಕೇಂದ್ರದ ಕ್ಯಾಬಿನೆಟ್ ಮಂತ್ರಿಯಾಗಿ ಎಚ್.ಡಿ ಕುಮಾರಸ್ವಾಮಿ ಅವರು ಶಪಥ ತೆಗೆದುಕೊಂಡಿದ್ದಾರೆ. ಮೊದಲ ದಿನ ಅವರು ಸೌಜನ್ಯಕ್ಕೆ ಇಲಾಖೆಗೆ ಭೇಟಿ ಕೊಟ್ಟಿರಬಹುದು. ಆದರೆ, ಮೊದಲ ಭೇಟಿಯಲ್ಲೇ ದೇವದಾರಿ ಗಣಿಗೆ ಸಹಿ ಹಾಕುವ ಅವಸರ ಏನಿತ್ತು?’ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಪ್ರಶ್ನಿಸಿದ್ದಾರೆ.
‘ಪ್ರಜಾವಾಣಿ’ಯೊಂದಿಗೆ ಮಾತನಾಡಿರುವ ಅವರು, ‘ಕುಮಾರಸ್ವಾಮಿ ಸ್ಥಳೀಯರೊಂದಿಗೆ ಮಾತನಾಡಿ, ಸಹಿ ಹಾಕುತ್ತೇನೆ ಎಂದು ಅಧಿಕಾರಿಗಳಿಗೆ ಹೇಳಬಹುದಿತ್ತು. ಅವರಿಗೆ ಅರಣ್ಯದ ಬಗ್ಗೆ ಕಳಕಳಿ ಇದೆಯೇ? ಅರಣ್ಯ ಭೂಮಿ ಕಬಳಿಸಲು ಕೇಂದ್ರ ಸರ್ಕಾರ ಈ ವರೆಗೆ ಏನು ಮಾಡಿದೆ ಎಂಬುದು ಗೊತ್ತಿದೆಯೇ. ಇದನ್ನು ತಡೆಯಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳ ಬಗ್ಗೆ ಕುಮಾರಸ್ವಾಮಿ ಅವರಿಗೆ ಗೊತ್ತಿದೆಯೇ ಎಂದು ಕೇಳಿದ್ದಾರೆ. ಕೋರ್ಟ್‌ನಲ್ಲಿ ನಮ್ಮ ದಾಖಲೆಗಳನ್ನು ಇಡುತ್ತೇವೆ. ಅಲ್ಲಿ ಅವರೂ ದಾಖಲೆ ಇಡಲಿ. ಅವರ ಆತುರದ ನಿರ್ಧಾರಗಳ ಬಗ್ಗೆ ನಾವು ಬಹಿರಂಗವಾಗಿ ಮಾತನಾಡುವುದು ಏನಿದೆ? ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.