ಹೂವಿನಹಡಗಲಿ: ತಾಲ್ಲೂಕಿನ ಐತಿಹಾಸಿಕ ಸುಪ್ರಸಿದ್ಧ ಮೈಲಾರ ಸುಕ್ಷೇತ್ರದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿದೆ.
ಫೆ. 22ರಂದು ಜರುಗಲಿರುವ ಕಾರಣಿಕ ಮಹೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಮೈಲಾರದ ಎಲ್ಲ ದಿಕ್ಕುಗಳಲ್ಲೂ ‘ಏಳುಕೋಟಿ, ಏಳು ಕೋಟಿ ಚಾಂಗ್‌ಬಲೋ’ ಎನ್ನುವ ಮೈಲಾರಲಿಂಗಸ್ವಾಮಿಯ ಜಯಘೋಷ ಮಾರ್ದನಿಸುತ್ತಿದೆ.
ಪೌರಾಣಿಕ, ಐತಿಹಾಸಿಕ ಮಹತ್ವ ಹೊಂದಿರುವ ಮೈಲಾರಲಿಂಗನ ಪರಂಪರೆ ನಾಡಿನಲ್ಲೇ ವಿಶಿಷ್ಟವಾಗಿದೆ. ರಾಜ್ಯದ ಹಲವು ಕಡೆಗಳಲ್ಲಿ ಮೈಲಾರಲಿಂಗಸ್ವಾಮಿಯ ದೇವಸ್ಥಾನಗಳಿದ್ದರೂ ತಾಲ್ಲೂಕಿನ ಮೈಲಾರ ಸುಕ್ಷೇತ್ರವೇ ಸ್ವಾಮಿಯ ಮೂಲ ನೆಲೆಯಾಗಿದೆ. ಇಲ್ಲಿ ವರ್ಷವಿಡೀ ವಿವಿಧ ಧಾರ್ಮಿಕ ಆಚರಣೆಗಳು ಜರುಗಿದರೂ ಕಾರಣಿಕ ಮಹೋತ್ಸವ ಪ್ರಮುಖ ಆಕರ್ಷಣೆಯಾಗಿದೆ.
ಶತಮಾನಗಳ ಇತಿಹಾಸವಿರುವ ಮೈಲಾರಲಿಂಗಸ್ವಾಮಿಯ ಕಾರಣೀಕೋತ್ಸವ ಇದೇ 22ರಂದು ಸಂಜೆ 5.30ಕ್ಕೆ ಜರುಗಲಿದೆ. ಭಕ್ತರ ಇಷ್ಟಾರ್ಥ ನೆರವೇರಿಸುವ ಭಂಡಾರದ ಒಡೆಯ ಮೈಲಾರಲಿಂಗಸ್ವಾಮಿಯನ್ನು ನಾಡಿನ ಭಕ್ತರು ಜಾತ್ಯತೀತವಾಗಿ ಆರಾಧಿಸುತ್ತಾರೆ. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಿಂದಲೂ ಭಕ್ತರು ಸುಕ್ಷೇತ್ರಕ್ಕೆ ಬಂದು ಸ್ವಾಮಿಯ ದರ್ಶನಾಶೀರ್ವಾದ ಪಡೆಯುತ್ತಾರೆ.
ಮೈಲಾರಲಿಂಗ ಸ್ವಾಮಿಯನ್ನು ಹಿಂದುಳಿದ ಸಮುದಾಯಗಳು ಸೇರಿದಂತೆ ವೀರಶೈವರು, ಬ್ರಾಹ್ಮಣರು ಮನೆ ದೇವರರೆಂದು ಪೂಜಿಸುತ್ತಾರೆ. ಮುಸಲ್ಮಾನರು, ಲಂಬಾಣಿಗರು ಸ್ವಾಮಿಯ ಭಕ್ತರಾಗಿರುವುದರಿಂದ ಮೈಲಾರಲಿಂಗ ಸ್ವಾಮಿಯನ್ನು ಜಾತಿ, ಮತ, ಪಂಥ ಮೀರಿದ ‘ಜಾತ್ಯತೀತ ದೇವರು’ ಎಂದು ಕರೆಯುತ್ತಾರೆ.
ಕಾರಣಿಕ ಮಹೋತ್ಸವದ ಮಹತ್ವ:ಭಾರತ ಹುಣ್ಣಿಮೆಯ ಮೂರನೇ ದಿನದಂದು ಇಳಿಸಂಜೆ ಮೈಲಾರದ ಡೆಂಕನ ಮರಡಿಯಲ್ಲಿ ಲಕ್ಷಾಂತರ ಜನರು ಸೇರಿರುತ್ತಾರೆ. 11 ದಿನ ವ್ರತಾಚರಣೆಯಲ್ಲಿರುವ ಗೊರವಯ್ಯ ಧರ್ಮಕರ್ತರಿಂದ ಭಂಡಾರದ ಆಶೀರ್ವಾದ ಪಡೆದು ಬಿಲ್ಲು ಏರುತ್ತಾರೆ. ಗೊರವಯ್ಯ ‘ಸದ್ದಲೇ’ ಎಂದು ಉದ್ಗರಿಸುತ್ತಿದ್ದಂತೆ ಭಕ್ತ ಪರಿಷೆ, ಜೀವ ಸಂಕುಲ ಸ್ತಬ್ದಗೊಳ್ಳುತ್ತದೆ. ಕೌತುಕ ಸೃಷ್ಟಿಸುವ ಈ ಕ್ಷಣದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿ ಮೊಳಗುತ್ತದೆ.
ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿಗೆ ನಾಡಿನ ‘ಭವಿಷ್ಯ ವಾಣಿ’ ಎಂಬ ಪ್ರತೀತಿ ಇದೆ. ಸ್ವಾಮಿಯ ಕಾರಣಿಕ ನುಡಿ ಭವಿಷ್ಯದ ದಿಕ್ಸೂಚಿ ಎಂಬುದು ಜನಪದರ ಬಲವಾದ ನಂಬಿಕೆ. ಗೂಡಾರ್ಥದಿಂದ ಕೂಡಿರುವ ಕಾರಣಿಕ ಉಕ್ತಿಯನ್ನು ಭಕ್ತರು ಈ ವರ್ಷದ ಕೃಷಿ, ರಾಜಕೀಯ, ವಾಣಿಜ್ಯ ಕ್ಷೇತ್ರಗಳಿಗೆ ತಾಳೆ ಹಾಕಿ ಅರ್ಥೈಸುತ್ತಾರೆ.
ಪೌರಾಣಿಕ ಹಿನ್ನೆಲೆ:ಭೂಲೋಕದಲ್ಲಿ ಹಿಂದೆ ರಾಕ್ಷಸರ ಉಪಟಳ ಹೆಚ್ಚಾದಾಗ ಋಷಿಮುನಿಗಳು, ದೇವತೆಗಳು ರಕ್ಷಣೆಗಾಗಿ ಶಿವನ ಮೊರೆ ಹೋಗಿದ್ದರಂತೆ. ಆಗ ಮಣಿಕಾಸರು, ಮಲ್ಲಾಸುರರೆಂಬ ಬಲಾಢ್ಯ ರಕ್ಕಸ ಸಹೋದರರನ್ನು ಸಂಹರಿಸಲು ಶಿವನು ಮೈಲಾರಲಿಂಗನ ಅವತಾರವೆತ್ತಿ ಧರೆಗೆ ಇಳಿದಿದ್ದನೆಂಬ ಪ್ರತೀತಿ ಇದೆ. ಈಗಿನ ಡೆಂಕನ ಮರಡಿಯ ಸ್ಥಳದಲ್ಲೇ ಶಿವ ತನ್ನ ಏಳುಕೋಟಿ ಶಿವಸೈನ್ಯದೊಂದಿಗೆ ಯುದ್ಧ ಮಾಡಿ ರಾಕ್ಷಸರ ಮರ್ದನ ಮಾಡಿದ ವಿಜಯೋತ್ಸವ ಸಂಕೇತವಾಗಿ ಕಾರಣಿಕೋತ್ಸವ ಸಾಗಿ ಬಂದಿದೆ ಎಂದು ಹಿರಿಯರು ಪೌರಾಣಿಕ ಮಹತ್ವವನ್ನು ತಿಳಿಸುತ್ತಾರೆ.
ಗ್ರಾಮೀಣ ಸೊಗಡಿನ ಮೈಲಾರ ಜಾತ್ರೆಯಲ್ಲಿ ರೈತರು ಎತ್ತಿನ ಬಂಡಿ ಕಟ್ಟಿಕೊಂಡು ಇಡೀ ಪರಿವಾದೊಂದಿಗೆ ಭಾಗವಹಿಸುತ್ತಾರೆ. ಕುರುವತ್ತಿ ರಸ್ತೆಯ ಜಾತ್ರಾ ಮೈದಾನ ಸೇರಿದಂತೆ ಮೈಲಾರ ತುಂಬೆಲ್ಲಾ ಬರೀ ಎತ್ತಿನ ಬಂಡಿ, ಟ್ರಾಕ್ಟರ್‌ಗಳು ಕಾಣಸಿಗುತ್ತವೆ.
ವರ್ಷವಿಡೀ ದಣಿವರಿಯದೇ ದುಡಿದ ಕೃಷಿ ಪರಿವಾರಗಳು ಮೂರ್ನಾಲ್ಕು ದಿನ ಸುಕ್ಷೇತ್ರದಲ್ಲೇ ಬಿಡಾರ ಹೂಡುತ್ತಾರೆ. ಮೈಲಾರಲಿಂಗ ಸ್ವಾಮಿಗೆ ಧಾರ್ಮಿಕ ಇಷ್ಟಾರ್ಥ ನೆರವೇರಿಸುವ ಜತೆಗೆ ನಾಟಕ, ಮನರಂಜನೆ ಕಾರ್ಯಕ್ರಮಗಳನ್ನು ವೀಕ್ಷಿಸಿ ದಣಿವಾರಿಸಿಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.