ADVERTISEMENT

ಸಂಡೂರು | ತುರ್ತು ಚಿಕಿತ್ಸೆಗೆ ಜಿಲ್ಲಾಕೇಂದ್ರವೇ ಗತಿ

ಸಂಡೂರಿನ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ; ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 6:08 IST
Last Updated 10 ಜುಲೈ 2024, 6:08 IST
ಸಂಡೂರಿನ ಸಾರ್ವಜನಿಕ ಆಸ್ಪತ್ರೆ
ಸಂಡೂರಿನ ಸಾರ್ವಜನಿಕ ಆಸ್ಪತ್ರೆ   

ಸಂಡೂರು: ಪಟ್ಟಣದ 100 ಹಾಸಿಗೆ ಸಾರ್ವಜನಿಕ ಆಸ್ಪತ್ರೆ ಹೆಸರಿಗಷ್ಟೆ ಎಂಬಂತಾಗಿದೆ. ಸಾವಿರಾರು ಕೋಟಿ ಗಣಿ ಚಟುವಟಿಕೆ ನಡೆಯುವ ಊರಲ್ಲಿ ಆರೋಗ್ಯಕ್ಕಾಗಿ ಜನ ಪರದಾಡುವಂತಾಗಿದ್ದು, ಜಿಲ್ಲಾ ಕೇಂದ್ರ ಬಳ್ಳಾರಿ, ಇಲ್ಲವೇ ಪಕ್ಕದ ಹೊಸಪೇಟೆಗೆ ಹೋಗುವಂತಾಗಿದೆ. 

ತಿಂಗಳಿಗೆ ಸುಮಾರು 100ರಿಂದ 150 ಹೆರಿಗಳಾಗುತ್ತಿದ್ದ ಆಸ್ಪತ್ರೆಯಲ್ಲಿ ಸದ್ಯ ವೈದ್ಯರ ಕೊರತೆಯಿಂದಾಗಿ 30–40 ಹೆರಿಗೆಗಳಾಗುತ್ತವೆ. ಉಳಿದ ಪ್ರಕರಣಗಳಲ್ಲಿ ಜಿಲ್ಲಾ ಕೇಂದ್ರಕ್ಕೆ ಸಾಗಿಹಾಕಲಾಗುತ್ತಿದೆ.

ಶುಶ್ರೂಕರೇ ಹೆರಿಗೆ ಮಾಡಿಸುತ್ತಿದ್ದು, ಗಂಭೀರ ಪ್ರಕರಣಗಳಲ್ಲಿ ಆಂಬುಲೆನ್ಸ್‌ಗಳಲ್ಲಿ ಬೇರೆಡೆ ಕಳುಹಿಸಲಾಗುತ್ತಿದೆ. ಸುಮಾರು ವರುಷಗಳಿಂದ ಇಲ್ಲಿ ಮಕ್ಕಳ‌ ತಜ್ಞರೇ ನಿಲ್ಲುತ್ತಿಲ್ಲ. ಮಕ್ಕಳ ಚಿಕಿತ್ಸೆಗೆ ತಾಲ್ಲೂಕಿನಲ್ಲೇ ವೈದ್ಯರಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ.

ADVERTISEMENT

ಗಣಿಗಾರಿಕೆ ಪ್ರದೇಶವಾದ್ದರಿಂದ ಚರ್ಮ, ಕಣ್ಣಿನ ಸಮಸ್ಯೆಗಳು ಹೆಚ್ಚು. ಆದಾಗ್ಯೂ ಈ ಎರಡೂ ಸಮಸ್ಯೆಗಳಿಗೆ ತಜ್ಞ ವೈದ್ಯರೇ ಇಲ್ಲ. 

ಸ್ಕ್ಯಾನಿಂಗ್ ಯಂತ್ರ ಉಪಯೋಗ ಶೂನ್ಯ: ಒಂದೂವರೆ ವರ್ಷದ ಹಿಂದೆ ಲಕ್ಷಾಂತರ ರೂಪಾಯಿ ವ್ಯಯಿಸಿ ಸ್ಥಳೀಯ ಕಂಪನಿಯೊಂದರ ಸಹಾಯದಿಂದ ಒಂದು ಸ್ಕ್ಯಾನಿಂಗ್ ಯಂತ್ರವನ್ನು ಖರೀದಿಸಲಾಗಿದೆ. ಈವರೆಗೂ ಅದರ ಉಪಯೋಗವೇ ಆಗಿಲ್ಲ.

ತಜ್ಞ ರೇಡಿಯೋಲಾಜಿಸ್ಟ್ ಒಬ್ಬರನ್ನು ನೇಮಿಸಲು ಸಂಸದ ಇ.ತುಕಾರಾಂ ಹಾಗೂ ಜಿಲ್ಲಾಡಳಿತ ಪ್ರಯತ್ನ ನಡೆಸಿತು. ಆಸ್ಪತ್ರೆಯ ಎಕ್ಸ್-ರೇ ಯಂತ್ರದಲ್ಲಿ ಫಿಲ್ಮ್ ಪ್ರಿಂಟ್ ದೊರೆಯುವುದಿಲ್ಲ. ಯಂತ್ರದ ದೋಷದಿಂದ ಪರೀಕ್ಷೆಗಳ ಫಲಿತಾಂಶ ವೈದ್ಯರ ಮೊಬೈಲ್‌ಗಳಿಗೆ ಕಳಿಸಿಕೊಂಡು ಚಿಕಿತ್ಸೆ ನೀಡಬೇಕಾದ ಸ್ಥಿತಿ ಇದೆ.

ಇಲ್ಲಿನ ಆಂಬುಲೆನ್ಸ್‌ಗಳು  ಪದೇ ಪದೇ ಕೆಟ್ಟು ನಿಲ್ಲುತ್ತವೆ. ಕರ್ತವ್ಯ ನಿರತ ವೈದ್ಯರೂ, ಸಿಬ್ಬಂದಿಗೆ ಜವಾಬ್ದಾರಿ ವಹಿಸಿ ಮನೆಯಲ್ಲಿ ಉಳಿಯುತ್ತಾರೆ ಎಂಬ ದೂರುಗಳಿದ್ದು, ಈ ಬಗ್ಗೆ ಸಂಬಂಧಪಟ್ಟವರು ಕ್ರಮವಹಿಸಿ ಆಸ್ಪತ್ರೆಯ ವ್ಯವಸ್ಥೆಯನ್ನು ಸುಧಾರಿಸಬೇಕಿದೆ.

ಹೊಟ್ಟೆಯಲ್ಲೇ ಅಸುನೀಗಿತ್ತು ಮಗು

ಇತ್ತೀಚೆಗೆ ಬಕ್ರೀದ್ ಸಂದರ್ಭದಲ್ಲಿ ಇಲ್ಲಿನ ಕೃಷ್ಣಾನಗರದ ಗರ್ಭಿಣಿಯೊಬ್ಬರು ಹೆರಿಗೆಗೆಂದು ಆಸ್ಪತ್ರೆಗೆ ಬಂದಿದ್ದರು. ಹೆರಿಗೆ ತಜ್ಞರಿಲ್ಲದೇ ತುರ್ತಾಗಿ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿಂದ ವಿಮ್ಸ್‌ಗೆ ದಾಖಲಿಸುವ ವೇಳೆಗೆ ಹೊಟ್ಟೆಯಲ್ಲಿದ್ದ ಮಗುವೇ ಮೃತಪಟ್ಟಿತ್ತು. ಇದರಿಂದ ಬೇಸರಗೊಂಡ ಗರ್ಭಿಣಿ ಕಡೆಯವರು ವ್ಯವಸ್ಥೆಯ ವಿರುದ್ಧ ಹಿಡಿಶಾಪ ಹಾಕಿ ಜಿಲ್ಲಾಡಳಿತಕ್ಕೂ ದೂರು ನೀಡಿದ್ದರು. ಇಂತಹ ಘಟನೆ ಮರುಕಳಿಸುತ್ತಿದ್ದರೂ ವ್ಯವಸ್ಥೆ ಮಾತ್ರ ಸುಧಾರಿಸುತ್ತಿಲ್ಲ.

ಹೆರಿಗೆ ಹಾಗೂ ಇತರೆ ವೈದ್ಯರ ಕೊರತೆ ಇರುವುದು ನಿಜ. ಇದು ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೂ ಇದೆ. ಸಂಡೂರಿಗೆ‌ ಬರಲು ಯಾರೂ ಆಸಕ್ತಿ‌ತೋರುತ್ತಿಲ್ಲ
ಡಾ.ಸತೀಶ್, ಮುಖ್ಯವೈದ್ಯಾಧಿಕಾರಿ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ
ಇತ್ತೀಚಿಗೆ ನನ್ನ ಸಹೋದರಿ ಹೊಟ್ಟೆಯಲ್ಲೇ ಮಗು ತೀರಿಕೊಂಡಿತ್ತು. ಗಣಿ ಸಂಪತ್ತು ಲೂಟಿ ಹೊಡೆಯುವವರು ಇಲ್ಲಿನ ಸೌಕರ್ಯ ಮರೆತಿರುದು ದುರಂತ.
ಖಾದರ್ ಬಾಷಾ, ಕೃಷ್ಣಾನಗರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.