ತೆಕ್ಕಲಕೋಟೆ: ದೀಪಾವಳಿಯಂದು ಎಲ್ಲೆಡೆ ದೀಪ ಬೆಳಗಿಸಿ ಪಟಾಕಿ ಸಿಡಿಸಿ ಸಂಭ್ರಮಿಸುವುದು ಒಂದೆಡೆಯಾದರೆ, ಸಿರುಗುಪ್ಪ ತಾಲ್ಲೂಕಿನ ಗೋಸಬಾಳು ಗ್ರಾಮದ ಹಾಲುಮತ ಕುರುಬ ಸಮಾಜದವರು ದೇವರ ಮೂರ್ತಿ ಮೆರವಣಿಗೆ ಮಾಡಿ, ಪಾಡ್ಯಮಿಯ ರಾತ್ರಿಪೂರ ಸಂಭ್ರಮಿಸುವಂತಹ ವಿಶಿಷ್ಠ ಸಂಪ್ರದಾಯದಿಂದ ಗಮನ ಸೆಳೆಯುತ್ತಾರೆ.
ಗ್ರಾಮದ ಕುರುಬರ ಆರಾಧ್ಯ ದೈವಗಳಾದ ಪಂಚಲಿಂಗೇಶ್ವರ, ಬಿಳಿಗುದಿರೇಶ್ವರ, ಮರಿಗುದಿರೇಶ್ವರ ದೇವರ ಮೂರ್ತಿಗಳಿಗೆ ಪಾಡ್ಯಮಿಯ ಬ್ರಾಹ್ಮಿ ಮುಹೂರ್ತದಲ್ಲಿ ಬೆಳ್ಳಿ, ಬಂಗಾರದ ಛತ್ರಿ, ಚಾಮರಗಳಿಂದ ಅಲಂಕರಿಸಿ ಕಾಯಿ ಕರ್ಪೂರ, ನೈವೇದ್ಯ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಸಂಜೆ ದೇವರ ಮನೆ ಓಣಿಯಿಂದ ಬೀರಲಿಂಗೇಶ್ವರ ದೇವಸ್ಥಾನದರೆಗೆ ದೇವರ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಸ್ಥಾಪಿಸಿ, 50ಕ್ಕೂ ಹೆಚ್ಚು ಡೊಳ್ಳುಗಳ ವಾದನ ಹಾಗೂ ಡೊಳ್ಳಿನ ಪದಗಳನ್ನು ಹಾಡುತ್ತಾ ಮೆರವಣಿಗೆಯಲ್ಲಿ ಸಂಭ್ರಮದಿಂದ ಸಾಗುತ್ತಾರೆ. ಗ್ರಾಮದ ಅಗಸೆಗೆ ಬಂದಾಗ ಮಹಿಳೆಯರು ಕಣಕದ (ಹಿಟ್ಟಿನ) ಆರತಿ ಬೆಳಗುವುದು ವಾಡಿಕೆ. ನಂತರ, ಗ್ರಾಮದ ದೇವತೆಗಳಿಗೆ ಕಾಯಿ–ಕರ್ಪೂರ ಅರ್ಪಿಸಿ ಮರಳಿ ದೇವಸ್ಥಾನಕ್ಕೆ ಹೋಗಿ ಮೂರ್ತಿಗಳನ್ನು ಮರುಸ್ಥಾಪನೆ ಮಾಡಲಾಗುತ್ತದೆ.
ಬತ್ತಿ ನುಂಗುವ ಕಾರ್ಯಕ್ರಮ: ಪಾಡ್ಯಮಿ ನಂತರ ದಿನದ ರಾತ್ರಿ ಪಟ್ಟದ ಪೂಜಾರಿಯಿಂದ ಬತ್ತಿ ನುಂಗುವ (ಬೆಂಕಿ) ಕಾರ್ಯಕ್ರಮ, ಮುಳ್ಳಿನ ಹಲಗೆ ಮೇಲೆ ನಿಲ್ಲುವುದು, ಕತ್ತಿಯ ಅಲಗನ್ನು ಮೈ ಮೇಲೆ ಹೊಡೆದುಕೊಳ್ಳುವ ಕಾರ್ಯಕ್ರಮ ಜರುಗುತ್ತವೆ. ಈ ಸಂದರ್ಭದಲ್ಲಿ ಹೂವಿನ ಅಲಂಕಾರದ ದೇವರ ಮೂರ್ತಿಗಳಿಗೆ ಭಕ್ತರು ಭಂಡಾರ ತೂರಿ ತಮ್ಮ ಭಕ್ತಿಭಾವ ಸಮರ್ಪಿಸುತ್ತಾರೆ.
ಉಪ್ಪಾರ ಹೊಸಹಳ್ಳಿ ಬಲಕುಂದಿ, ಕರೂರು, ಮೈಲಾಪುರ, ಸಿರಿಗೇರಿ, ಸೀಮಾಂಧ್ರದ ಗುಳ್ಳಂ, ವಣೇನೂರು, ಎಮ್ಮಿಗನೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.