ADVERTISEMENT

ಡಿಎಂಎಫ್‌ಟಿ: ಸಿದ್ಧವಾಗದ ಯೋಜನೆ

ಮಾರ್ಗಸೂಚಿಯಲ್ಲಿ ಬದಲಾವಣೆ ತಂದ ಕೇಂದ್ರ; ತಿದ್ದುಪಡಿ ಮಾಡದ ರಾಜ್ಯ ಸರ್ಕಾರ

ಆರ್. ಹರಿಶಂಕರ್
Published 23 ಮೇ 2024, 22:30 IST
Last Updated 23 ಮೇ 2024, 22:30 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬಳ್ಳಾರಿ: ಗಣಿ ಬಾಧಿತ ಜನರ ಮತ್ತು ಪ್ರದೇಶಗಳ ಅಭಿವೃದ್ಧಿ ಯೋಜನೆಗಳಿಗೆ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ (ಡಿಎಂಎಫ್‌ಟಿ) ಮೂಲಕ ಸಂಗ್ರಹಿಸಿರುವ ನಿಧಿ ಬಳಕೆಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಕಟಿಸಿರುವ ‘ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ’ (ಪಿಎಂಕೆಕೆಕೆವೈ) ಹೊಸ ಮಾರ್ಗಸೂಚಿ ಅಡ್ಡಿಯಾಗಿದೆ.

ಕೇಂದ್ರ ಸರ್ಕಾರದ ಪಿಎಂಕೆಕೆಕೆವೈನ ಮಾರ್ಗಸೂಚಿಯನ್ವಯ ಡಿಎಂಎಫ್‌ಟಿ ನಿಧಿ ಬಳಸಬೇಕು. 2016ರ ಮಾರ್ಗಸೂಚಿಗೆ ಕೇಂದ್ರ ಸರ್ಕಾರ ಈ ವರ್ಷ ಮಹತ್ವದ ಬದಲಾವಣೆ ತಂದಿದೆ. ಇದನ್ನು ಯಥಾವತ್‌ ಜಾರಿಗೆ ತರಬೇಕೆ ಅಥವಾ ತಿದ್ದುಪಡಿ ಮಾಡಬೇಕೆ ಎಂಬುದರ ಬಗ್ಗೆ ರಾಜ್ಯ ಸರ್ಕಾರ ಇನ್ನೂ ತೀರ್ಮಾನಿಸಿಲ್ಲ. ಹೀಗಾಗಿ, ಜನವರಿ ವೇಳೆಗೆ ಸಿದ್ಧವಾಗಬೇಕಿದ್ದ ಡಿಎಂಎಫ್‌ಟಿ ನಿಧಿ ಬಳಕೆಯ ಕ್ರಿಯಾ ಯೋಜನೆ
ಗಳು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ ತಯಾರಾಗಿಲ್ಲ. ಇದರ ಪರಿಣಾಮ ಹೊಸ ಯೋಜನೆಗಳು ಜಾರಿಯಾಗಿಲ್ಲ. 

ADVERTISEMENT

ಹೊಸ ಮಾರ್ಗಸೂಚಿಯಲ್ಲಿ ಏನಿದೆ?:  ಗಣಿ ಸುತ್ತಲ 15 ಕಿ.ಮೀ ಪ್ರದೇಶವನ್ನು ನೇರ ಬಾಧಿತ ಮತ್ತು 25 ಕಿ.ಮೀ ಪ್ರದೇಶವನ್ನು ಪರೋಕ್ಷ ಬಾಧಿತ ಎಂದು ಹೊಸ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ನಿಧಿ ಬಳಕೆಗೆ ಎರಡು ಆದ್ಯತಾ ವಲಯ ಸೃಷ್ಟಿಸಲಾಗಿದೆ. ಕುಡಿಯುವ ನೀರು, ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ನೈರ್ಮಲ್ಯ, ವಸತಿ, ಕೃಷಿ, ಹೈನುಗಾರಿಕೆಯನ್ನು ಪ್ರಮುಖ ಆದ್ಯತೆ ವಲಯಗಳನ್ನಾಗಿ ಗುರುತಿಸಲಾಗಿದೆ. ಮೂಲಸೌಲಭ್ಯ, ನೀರಾವರಿ, ವಿದ್ಯುತ್‌ ಮತ್ತು ಜಲಾನಯನ ವಿಷಯ
ಗಳನ್ನು ಇತರ ಆದ್ಯತೆ ವಲಯಗಳಾಗಿ ಗುರುತಿಸಲಾಗಿದೆ.  ಡಿಎಂಎಫ್‌ಟಿಯ ಶೇ 70ರಷ್ಟು ಹಣವನ್ನು ನೇರ ಬಾಧಿತ ಪ್ರದೇಶಗಳಲ್ಲಿ ಮಾತ್ರ ಬಳಸಬೇಕು. ಜತೆಗೆ, ಪ್ರಮುಖ ಆದ್ಯತಾ ವಲಯಗಳಿಗೆ ಮಾತ್ರವೇ ಬಳಸಬೇಕು ಎಂದು ತಿಳಿಸಲಾಗಿದೆ. ಕ್ರಿಯಾ ಯೋಜನೆಗಳನ್ನು 3 ವರ್ಷದ ಬದಲಿಗೆ 5 ವರ್ಷ
ಗಳಿಗೆ ಸಿದ್ಧಪಡಿಸಬೇಕು ಎಂದೂ ಹೇಳಲಾಗಿದೆ.

ಈ ಹಿಂದೆ ಡಿಎಂಎಫ್‌ಟಿ ನಿಧಿಯು ನೇರ ಮತ್ತು ಪರೋಕ್ಷ ಬಾಧಿತ ಪ್ರದೇಶಗಳ ಜತೆಗೆ, ಉದಾರವಾಗಿ ಇಡೀ ಜಿಲ್ಲೆಗಳ ವಿವಿಧ ಯೋಜನೆಗಳಿಗೆ ಬಳಕೆ ಆಗುತ್ತಿತ್ತು. ಹೀಗಾಗಿ ಇಡೀ ಜಿಲ್ಲೆಗೆ ಡಿಎಂಎಫ್‌ಟಿಯ ಅನುಕೂಲ ಸಿಗುತ್ತಿತ್ತು. ಹೊಸ ಮಾರ್ಗಸೂಚಿ ಪ್ರಕಾರ, ಗಣಿಯಿಂದ ಗರಿಷ್ಠ 25 ಕಿ.ಮೀ. ವ್ಯಾಪ್ತಿಯ ಪ್ರದೇಶಗಳಿಗೆ ಮಾತ್ರ ಅನುದಾನ ಬಳಸಬಹುದು.

ಕೇಂದ್ರದ ಈ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡಲು ಅವಕಾಶವಿದೆ. ತಿದ್ದುಪಡಿಯಾದ ನಂತರವೇ ನಿಧಿ ಬಳಕೆಯ ಸ್ಪಷ್ಟ ಮಾರ್ಗಸೂಚಿ ಸಿಗಲು ಸಾಧ್ಯ. ಆದರೆ, ಚುನಾವಣೆ ಮತ್ತು ಇತರ ಕಾರಣಗಳಿಂದ ರಾಜ್ಯ ಸರ್ಕಾರ ಕೇಂದ್ರದ ಹೊಸ ಮಾರ್ಗಸೂಚಿ ವಿಚಾರವಾಗಿ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.  

12,388 ಯೋಜನೆಗಳಿಗೆ ಹಣ:  ಪ್ರಮುಖ ಮತ್ತು ಸಣ್ಣ ಖನಿಜಗಳ ಗಣಿ ಗುತ್ತಿಗೆಗಳ ರಾಯಧನದ ರೂಪ
ದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಡಿಎಂಎಫ್‌ಟಿಗಳಿಗೆ 2015ರಿಂದ ಈ ವರೆಗೆ ಒಟ್ಟು ₹4828.34 ಕೋಟಿ ಸಂಗ್ರಹವಾಗಿದೆ. ಒಂದೊಂದು ಜಿಲ್ಲೆಗೆ ಅಲ್ಲಿನ ಗಣಿ ಚಟುವಟಿಕೆ ಸಾಮರ್ಥ್ಯಕ್ಕೆ ತಕ್ಕಂತೆ ಹಣ ಲಭ್ಯವಾಗಿದೆ.

ಉದಾಹರಣೆಗೆ, ಬಳ್ಳಾರಿ ಜಿಲ್ಲೆಯೊಂದರಲ್ಲೇ ಈ ವರೆಗೆ ಒಟ್ಟು ₹2623.82 ಕೋಟಿ ಸಂಗ್ರಹವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈವರೆಗೆ ಒಟ್ಟು 12,388 ಯೋಜನೆಗಳನ್ನು ಕೈಗೊಳ್ಳಲಾಗಿದೆ. 5,355 ಯೋಜನೆಗಳು ಪೂರ್ಣಗೊಂಡಿವೆ. ಗಣಿಗಾರಿಕೆಯಿಂದ ತೀವ್ರ ತೊಂದರೆಗೆ ಒಳಗಾದ ಜಿಲ್ಲೆಗಳಲ್ಲಿ ಜನ ಕಲ್ಯಾಣ ಯೋಜನೆಗಳನ್ನು ಕೈಗೊಳ್ಳಲು ಮತ್ತು ಮೂಲಸೌಕರ್ಯ ಅಭಿವೃದ್ಧಿ ಮಾಡಲು ಡಿಎಂಎಫ್‌ಟಿ ನೆರವಾಗಿದೆ. 

ಪಿಎಂಕೆಕೆಕೆವೈ–2024ರ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಕುರಿತು ರಾಜ್ಯ ಸರ್ಕಾರ ಕ್ರಮ ಕೈಗೊಂಡ ಕೂಡಲೇ 2024–25ಕ್ಕೆ ಕ್ರಿಯಾ ಯೋಜನೆಗಳನ್ನು ರೂಪಿಸಲಾಗುವುದು.
ಮಂಜುನಾಥ್‌, ಡಿಎಂಎಫ್‌ಟಿ ವಿಶೇಷ ಅಧಿಕಾರಿ, ಬಳ್ಳಾರಿ
ಹೊಸ ಮಾರ್ಗಸೂಚಿಯಲ್ಲಿ ತಿದ್ದುಪಡಿ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕ್ರಿಯಾ ಯೋಜನೆ ಸಿದ್ಧಪಡಿಸಲು ಈಗಾಗಲೇ ಸಭೆ ನಡೆಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ಕ್ರಿಯಾ ಯೋಜನೆಗಳು ಆಗಿಲ್ಲ.
ಗಿರೀಶ್‌ ಆರ್‌.ನಿರ್ದೇಶಕರು, ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ

ಅಂಕಿ ಅಂಶ

2015ರಿಂದ ಈವರೆಗೆ ಡಿಎಂಎಫ್‌ಟಿಯಲ್ಲಿ ಒಟ್ಟಾರೆ ಸಂಗ್ರಹವಾದ ಮೊತ್ತ: ₹4828.34 ಕೋಟಿ 

ರಾಜ್ಯದಲ್ಲಿ 2023–24ನೇ ಸಾಲಿನಲ್ಲಿ ಸಂಗ್ರಹದ ನಿಧಿ: ₹814.67 ಕೋಟಿ

ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ವರ್ಷ ಸಂಗ್ರಹವಾದ ಹಣ: ₹492.82 ಕೋಟಿ

ರಾಜ್ಯದಲ್ಲಿ ಕಳೆದ  ಆರ್ಥಿಕ ವರ್ಷ ಕೈಗೊಂಡ ಯೋಜನೆಗಳು: 268

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.