ADVERTISEMENT

ರಾಜ್ಯದಲ್ಲಿ 1,969 ನೀರಿನ ಘಟಕ ಬಂದ್‌!

ಉತ್ತರ, ಕಲ್ಯಾಣ ಕರ್ನಾಟಕದಲ್ಲೇ ಹೆಚ್ಚು ದುರಸ್ತಿ

ಆರ್. ಹರಿಶಂಕರ್
Published 20 ಜೂನ್ 2024, 7:08 IST
Last Updated 20 ಜೂನ್ 2024, 7:08 IST
ಬಳ್ಳಾರಿ ನಗರ ಹೊರವಲಯದ ಹರಗಿನಡೋಣಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಕೊಂಡೊಯ್ಯುತ್ತಿರುವ ಮಕ್ಕಳು  
ಬಳ್ಳಾರಿ ನಗರ ಹೊರವಲಯದ ಹರಗಿನಡೋಣಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಕೊಂಡೊಯ್ಯುತ್ತಿರುವ ಮಕ್ಕಳು     

ಬಳ್ಳಾರಿ: ರಾಜ್ಯದಲ್ಲಿ ವಿವಿಧ ಕಾರಣಗಳಿಂದ 1,969 ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಅವುಗಳ ಪೈಕಿ 152 ಘಟಕಗಳು ಶಾಶ್ವತ ಬಂದ್ ಆಗಿವೆ. ಇದರ ಪರಿಣಾಮ ಜನರು ಶುದ್ಧ ನೀರಿಗಾಗಿ ಪರಿತಪಿಸುವಂತಾಗಿದೆ.

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ (ಆರ್‌ಡಬ್ಲ್ಯುಎಸ್‌), ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್), ಸಹಕಾರ ಮತ್ತು ಇತರೆ ನಿರ್ವಹಣೆಯಲ್ಲಿ ರಾಜ್ಯದಲ್ಲಿ ‌ಒಟ್ಟು 19,320 ಶುದ್ಧ ನೀರಿನ ಘಟಕಗಳು ಮಂಜೂರಾಗಿವೆ. ಇದರಲ್ಲಿ 16,924 ಘಟಕಗಳು ಸುಸ್ಥಿತಿಯಲ್ಲಿವೆ. 56 ಘಟಕಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದಾರೆ.

‘ಕೊಪ್ಪಳ ಜಿಲ್ಲೆಯಲ್ಲಿ 56, ವಿಜಯಪುರ–251, ಯಾದಗಿರಿ–207 ಶುದ್ಧ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಚಾಮರಾಜನಗರ ಜಿಲ್ಲೆಯಲ್ಲಿ 210, ಶಿವಮೊಗ್ಗ–255  ಮತ್ತು ಉಡುಪಿ–59 ಘಟಕಗಳೂ ಸುಸ್ಥಿತಿಯಲ್ಲಿವೆ. ತುಮಕೂರಿನಲ್ಲಿ ಅತಿಹೆಚ್ಚು 1,556 ಘಟಕಗಳು ಮಂಜೂರಾಗಿದ್ದು, 1,549 ಘಟಕಗಳು ಸುಸ್ಥಿತಿಯಲ್ಲಿವೆ. ಇನ್ನೂ 5 ಘಟಕಗಳ ಸ್ಥಾಪನೆ ಪ್ರಕ್ರಿಯೆ ನಡೆದಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಬಂದ್‌ ಆಗಲು ಕಾರಣವೇನು? 

ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಳ್ಳಲು ನೀರು ಸಾಕಷ್ಟು ಪ್ರಮಾಣದಲ್ಲಿ ಸಿಗದಿರುವುದು ಸೇರಿ ಹಲವು ಕಾರಣಗಳಿವೆ. ನೀರಿನ ಅಲಭ್ಯತೆ ಕಾರಣ ರಾಜ್ಯದಲ್ಲಿ 211 ಘಟಕಗಳು ಸ್ಥಗಿತಗೊಂಡಿವೆ. ಇಂಧನ, ವಿದ್ಯುತ್‌ ಇಲ್ಲದ್ದಕ್ಕೆ 65, ನಿರ್ವಹಣಾ ಏಜೆನ್ಸಿಗಳ ಸಮಸ್ಯೆಯಿಂದ 337, ನಿರ್ವಹಣೆ ಮತ್ತು ದುರಸ್ತಿ ಹಿನ್ನೆಲೆಯಲ್ಲಿ 906 ಮತ್ತು ಇತರೆ ಕಾರಣಗಳಿಂದ 251 ಘಟಕಗಳು ನಿಂತು ಹೋಗಿವೆ ಎಂಬ ಉತ್ತರ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಸಿಕ್ಕಿದೆ.

ಶುದ್ಧ ನೀರಿನ ಘಟಕಗಳನ್ನು ಆಗಾಗ್ಗೆ ದುರಸ್ತಿ ಮಾಡಿಸುತ್ತೇವೆ. ನಿರಂತರ ನಿಗಾ ವಹಿಸುತ್ತೇವೆ. ಗುತ್ತಿಗೆ ಪಡೆದವರು ಮತ್ತು ನಿರ್ವಹಣೆ ಮಾಡುತ್ತಿರುವವರ ಸಭೆಗಳನ್ನೂ ಕೂಡ ನಡೆಸುತ್ತೇವೆ. 
– ರಾಹುಲ್‌ ಶರಣಪ್ಪ ಸಂಕನೂರ, ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯಿತಿ ಬಳ್ಳಾರಿ 
ಒಂದು ಘಟಕವನ್ನು ಸರಿಪಡಿಸಿದರೆ ಬೇರೆ ಘಟಕದಲ್ಲಿ ಸಮಸ್ಯೆ ಆಗಿರುತ್ತದೆ. ಘಟಕಗಳು ಕೆಟ್ಟುನಿಲ್ಲುವುದು ದುರಸ್ತಿ ಮಾಡುವುದು ನಿರಂತರ ಪ್ರಕ್ರಿಯೆ. ಸಮಸ್ಯೆ ಗೊತ್ತಾದ ಕೂಡಲೇ ಸರಿಪಡಿಸುತ್ತೇವೆ.
– ವಾಗೀಶ್‌ ಶಿವಾಚಾರ್ಯ, ಮುಖ್ಯ ಯೋಜನಾಧಿಕಾರಿ ಜಿಲ್ಲಾ ಪಂಚಾಯಿತಿ ಬಳ್ಳಾರಿ 

ಕಲ್ಯಾಣದಲ್ಲಿ ಕಡಿಮೆ ಘಟಕ ಹೆಚ್ಚು ಸ್ಥಗಿತ

ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಕಡಿಮೆ ನೀರಿನ ಘಟಕಗಳಿದ್ದು ಸಮಸ್ಯೆಗಳು ಹೆಚ್ಚಿವೆ. ಬೀದರ್‌ನಲ್ಲಿ 450 ಘಟಕಗಳು ಮಂಜೂರಾಗಿದ್ದರೆ 307 ಕೆಲಸ ಮಾಡುತ್ತಿವೆ. 84 ಘಟಕಗಳು ನಿಂತಿವೆ. ಕಲಬುರಗಿಯಲ್ಲಿ 484 ಮಂಜೂರಾಗಿದ್ದರೆ 297 ಮಾತ್ರ ಕೆಲಸ ಮಾಡುತ್ತಿವೆ. 165 ಕೆಟ್ಟಿವೆ. ಯಾದಗಿರಿಯಲ್ಲಿ 415 ಮಂಜೂರಾಗಿದ್ದರೆ 208 ಕೆಲಸ ಮಾಡುತ್ತಿವೆ. 207 ಸ್ಥಗಿತಗೊಂಡಿವೆ. ರಾಯಚೂರಿನಲ್ಲಿ 719 ಮಂಜೂರಾಗಿದ್ದು 617 ಚಾಲ್ತಿಯಲ್ಲಿವೆ. 99 ನಿಂತಿವೆ. ಕೊಪ್ಪಳದಲ್ಲಿ 709 ಮಂಜೂರಾಗಿವೆ. ಅದರಲ್ಲಿ 418 ಕೆಲಸ ಮಾಡುತ್ತಿವೆ 256 ಕೆಟ್ಟುನಿಂತಿವೆ. ಬಳ್ಳಾರಿಯಲ್ಲಿ 504 ಘಟಕಗಳು ಮಂಜೂರಾಗಿದ್ದು 437 ಕೆಲಸ ಮಾಡುತ್ತಿವೆ. 60 ಹಾಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.