ADVERTISEMENT

ಕಂಪ್ಲಿ | ಮಳೆ ಅಭಾವ, ಬತ್ತಿದ ಬೋರ್‌ವೆಲ್‌ಗಳು: ಮೆಣಸಿನಕಾಯಿ ಬೆಳೆಗಾರರಿಗೆ ನಷ್ಟ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 7:55 IST
Last Updated 5 ಡಿಸೆಂಬರ್ 2023, 7:55 IST
ಕಂಪ್ಲಿ ತಾಲ್ಲೂಕು ದೇವಸಮುದ್ರ ಗ್ರಾಮದ ರೈತ ಗೂಳಪ್ಪ ದೇವೇಂದ್ರಪ್ಪ ರೌಡಕುಂದಿ ಅವರ ಜಮೀನಿನಲ್ಲಿ ಮೆಣಸಿಕಾಯಿ ಬೆಳೆ ಒಣಗಿದೆ
ಕಂಪ್ಲಿ ತಾಲ್ಲೂಕು ದೇವಸಮುದ್ರ ಗ್ರಾಮದ ರೈತ ಗೂಳಪ್ಪ ದೇವೇಂದ್ರಪ್ಪ ರೌಡಕುಂದಿ ಅವರ ಜಮೀನಿನಲ್ಲಿ ಮೆಣಸಿಕಾಯಿ ಬೆಳೆ ಒಣಗಿದೆ   

ಕಂಪ್ಲಿ: ತಾಲ್ಲೂಕಿನ ದೇವಸಮುದ್ರ, ಮೆಟ್ರಿ ಭಾಗದಲ್ಲಿ ಬೋರ್‌ವೆಲ್‍ಗಳ ಮೂಲಕ ಹನಿನೀರಾವರಿ ಪದ್ಧತಿ ಅಳವಡಿಸಿಕೊಂಡು ಸುಮಾರು 500 ಎಕರೆ ಪ್ರದೇಶದಲ್ಲಿ ಸಿಜೆಂಟಾ 2043 ಮತ್ತು 5531 ತಳಿಯ ಮೆಣಸಿನಕಾಯಿ ಬೆಳೆ ಬೆಳೆಯಲಾಗಿದೆ. ಆದರೆ, ಮಳೆ ಅಭಾವದಿಂದ ಬೋರ್‌ವೆಲ್‍ಗಳಲ್ಲಿ ನೀರು ಬತ್ತಿದ್ದು, ಅಂತರ್ಜಲಮಟ್ಟವೂ ಕುಸಿದ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜೂನ್, ಜುಲೈ ತಿಂಗಳಲ್ಲಿ ಮೆಣಸಿನ ಸಸಿ ನಾಟಿ ಮಾಡಿದ್ದು, ಕ್ರಮೇಣ ವಾತಾವರಣದಲ್ಲಿ ಏರುಪೇರಾಗಿ ಬೆಳೆಗೆ ರೋಗ ಕಾಣಿಸಿಕೊಂಡಿತು. ಕೀಟನಾಶಕ ಸಿಂಪಡಣೆ ಮಾಡಿದರೂ ಕ್ರಿಬ್ಸ್, ಮೈಡ್ಸ್(ಕಪ್ಪು ನುಸಿ) ರೋಗ ನಿಯಂತ್ರಣಕ್ಕೆ ಬಾರದೆ ರೈತರು ಕಂಗಾಲಾದರು.

ದೇವಸಮುದ್ರದ ರೈತ ಗೂಳಪ್ಪ ಕರೇಗೌಡ್ರು, ಮೂರು ಎಕರೆಯಲ್ಲಿ ಸಿಜೆಂಟಾ ಮತ್ತು  ಎರಡು ಎಕರೆಯಲ್ಲಿ ಬ್ಯಾಡಗಿ ತಳಿ  ಮೆಣಸಿಕಾಯಿ ಬೆಳೆದಿದ್ದು, ₹5 ಲಕ್ಷ ಖರ್ಚು ಮಾಡಿದ್ದಾರೆ. ಒಂದೇ ಬಾರಿ ಮೆಣಸಿಕಾಯಿ ಕಟಾವು ಮಾಡಿದ್ದಾರೆ. ಬೋರ್‌ವೆಲ್‍ನಲ್ಲಿ ನೀರು ಬತ್ತಿದ್ದು, ಬೆಳೆ ಒಳಗುತ್ತಿದೆ.

ADVERTISEMENT

ಪೋತರಾಜ ಶಿವರಾಮ ಅವರ ಎರಡು ಎಕರೆಯಲ್ಲಿದ್ದ ಮೆಣಸಿಕಾಯಿ ಒಣಗಿದೆ. ಕರೇಗೌಡ್ರು ಪಾಂಡುರಂಗಪ್ಪ, ಶಿವರಾಮಪ್ಪ, ಚಂದ್ರಪ್ಪ ಅವರ ಜಮೀನಲ್ಲಿದ್ದ ಬೋರ್‌ವೆಲ್‍ಗಳು ಬತ್ತಿಹೋಗಿದ್ದು, ಸುಮಾರು ಮೂರು ಎಕರೆ ಮೆಣಸಿಕಾಯಿ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.

‘ಸಿಜೆಂಟಾ ತಳಿಗೆ ಹೆಚ್ಚು ಬೇಡಿಕೆ ಇರುವುದರಿಂದ 100 ಗ್ರಾಂ ಬೀಜವನ್ನು ₹13,000ಕ್ಕೆ ಖರೀದಿಸಿ ಒಂದು ಎಕರೆಯಲ್ಲಿ ಬೆಳೆದಿದ್ದೆ. ಅದಕ್ಕಾಗಿ ₹1 ಲಕ್ಷ ಖರ್ಚು ಮಾಡಿದ್ದೇನೆ. ಎಕರೆಗೆ 25ರಿಂದ 30ಕ್ವಿಂಟಲ್‌ವರೆಗೆ ಬರಬೇಕಿತ್ತು. ರೋಗಬಾಧೆಯಿಂದ 10ರಿಂದ 12 ಕ್ವಿಂಟಲ್‌ವರೆಗೆ ಬಂದಿದೆ. ಕಳೆದ ಬಾರಿ ಕ್ವಿಂಟಲ್‌ಗೆ ₹35,000 ಇದ್ದ ದರ ಈಗ ₹14,000ರಿಂದ ₹18,000ಕ್ಕೆ ಕುಸಿದಿದೆ’ ಎಂದು ದೇವಸಮುದ್ರ ಗ್ರಾಮದ ರೈತ ಶರಣಪ್ಪ ದಂಡಿನ ತಿಳಿಸಿದರು.

ಹವಾಮಾನ ವೈಪರೀತ್ಯ, ಅಕಾಲಿಕ ಮಳೆ ಪರಿಣಾಮ ಮೆಣಸಿಕಾಯಿ ಕಪ್ಪು, ಬೂದು ಬಣ್ಣಕ್ಕೆ ತಿರುಗಿದ್ದು, ಬ್ಯಾಡಗಿ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಕೇಳುತ್ತಾರೆ ಎಂದು ರೈತರು ನೋವಿನಿಂದ ತಿಳಿಸಿದರು.

ಶೈತ್ಯಾಗಾರ ವ್ಯವಸ್ಥೆ ಇಲ್ಲ: ಮೆಣಸಿಕಾಯಿಗೆ ಮಾರುಕಟ್ಟೆಯಲ್ಲಿ ಸೂಕ್ತ ದರ ಬರುವವರೆಗೆ ದಾಸ್ತಾನು ಮಾಡಲು ತಾಲ್ಲೂಕಿನಲ್ಲಿ ಶೈತ್ಯಾಗಾರ ವ್ಯವಸ್ಥೆ ಇಲ್ಲ. ವ್ಯಾಪಾರಸ್ಥರು ಕೇಳಿದ ಬೆಲೆಗೆ ಅನಿವಾರ್ಯವಾಗಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ.

ಕಂಪ್ಲಿ ತಾಲ್ಲೂಕು ದೇವಸಮುದ್ರ ಗ್ರಾಮದ ರೈತರಾದ ಕರೇಗೌಡ್ರು ಪಾಂಡುರಂಗಪ್ಪ ಶಿವರಾಮಪ್ಪ ಚಂದ್ರಪ್ಪ ಅವರ ಬೋರ್ ವೆಲ್‍ಗಳು ಬತ್ತಿಹೋಗಿದ್ದು 3ಎಕರೆ ಮೆಣಸಿಕಾಯಿ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ
ಕಂಪ್ಲಿ ತಾಲ್ಲೂಕು ದೇವಸಮುದ್ರ ಗ್ರಾಮದ ರೈತ ಶರಣಪ್ಪ ದಂಡಿನ ಹವಮಾನ ವೈಪರಿತ್ಯದಿಂದ ಮೆಣಸಿಕಾಯಿ ಕಪ್ಪಾಗಿರುವುದನ್ನು ತೋರಿಸಿದರು
ಕಂಪ್ಲಿ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದ್ದು ಕೇವಲ ಮಳೆಯಾಶ್ರಿತ ಭೂಮಿಗಳ ಸಮೀಕ್ಷೆ ಮಾಡಲಾಗಿದೆ. ನಷ್ಟ ಪರಿಹಾರಕ್ಕೆ ನಮ್ಮನ್ನೂ ಪರಿಗಣಿಸಬೇಕು
ಗೂಳಪ್ಪ ಕರೇಗೌಡ್ರು ರೈತ
ಎರಡು ಎಕರೆಯಲ್ಲಿ 5531ತಳಿ ಮೆಣಸಿಕಾಯಿ ಬೆಳೆದಿದ್ದೆ. ನಷ್ಟ ಉಂಟಾಗಿದೆ. ಜೀವನ ನಿರ್ವಹಣೆಗಾಗಿ ಪೇಟಿಂಗ್ ಕೆಲಸಕ್ಕೆ ಹೋಗುತ್ತಿರುಬೆ
ಗೂಳಪ್ಪ ದೇವೇಂದ್ರಪ್ಪ ರೌಡಕುಂದಿ ದೇವಸಮುದ್ರದ ರೈತ
ಮೆಣಸಿಕಾಯಿ ಬೆಳೆ ನಷ್ಟ ಅಗತ್ಯ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಮತ್ತು ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ
ಸಂತೋಷ ಸಪ್ಪಂಡಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ
ತಾಲ್ಲೂಕಿನಲ್ಲಿ ಸುಮಾರು 2500 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿಕಾಯಿ ಬೆಳೆದಿದ್ದು ಕಪ್ಪು ನುಸಿ ರೋಗ ಕಾಣಿಸಿಕೊಂಡಿದೆ. ರೋಗ ನಿಯಂತ್ರಣಕ್ಕೆ ಕೀಟನಾಶಕಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ
ಆರ್.ಜೆ. ಕರಿಗೌಡರ್ ಸಹಾಯಕ ತೋಟಗಾರಿಕೆ ಅಧಿಕಾರಿ ಕಂಪ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.