ADVERTISEMENT

ಅಧ್ಯಯನಶೀಲತೆ ವಕೀಲರಿಗೆ ಅಗತ್ಯ: ಎಚ್.ಟಿ.ನರೇಂದ್ರ ಪ್ರಸಾದ್

ವಕೀಲರ ಸಂಘದಲ್ಲಿ ಇ-ಲೈಬ್ರರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 11:14 IST
Last Updated 27 ಏಪ್ರಿಲ್ 2019, 11:14 IST
ಬಳ್ಳಾರಿಯ ವಕೀಲರ ಸಂಘದಲ್ಲಿ ಶನಿವಾರ ಇ–ಲೈಬ್ರರಿಗೆ ಚಾಲನೆ ನೀಡಿದ ಹೈಕೋರ್ಟ್‌ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ (ಎಡದಿಂದ ಎರಡನೆಯವರು) ಗ್ರಂಥಾಲಯಕ್ಕೆ ಭೇಟಿ ನೀಡಿದ್ದರು. 
ಬಳ್ಳಾರಿಯ ವಕೀಲರ ಸಂಘದಲ್ಲಿ ಶನಿವಾರ ಇ–ಲೈಬ್ರರಿಗೆ ಚಾಲನೆ ನೀಡಿದ ಹೈಕೋರ್ಟ್‌ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ (ಎಡದಿಂದ ಎರಡನೆಯವರು) ಗ್ರಂಥಾಲಯಕ್ಕೆ ಭೇಟಿ ನೀಡಿದ್ದರು.    

ಬಳ್ಳಾರಿ: ‘ವಕಿಲರು ನಿರಂತರ ಅಧ್ಯಯನಶೀಲರಾಗಿದ್ದರೆ ಮಾತ್ರ ಕಕ್ಷಿದಾರರಿಗೆ ಕ್ಷಿಪ್ರಗತಿಯಲ್ಲಿ ನ್ಯಾಯ ದೊರಕಿಸಲು ಸಾಧ್ಯ’ ಎಂದು ಹೈಕೋರ್ಟ್‌ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಹೇಳಿದರು.

ಇಲ್ಲಿನ ಜಿಲ್ಲಾ ವಕೀಲರ ಸಂಘದ ಗ್ರಂಥಾಲಯದಲ್ಲಿ ಶನಿವಾರ ನೂತನ ಇ-ಲೈಬ್ರರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಇದು ಮಾಹಿತಿ ಯುಗ. ಎಲ್ಲ ಕ್ಷೇತ್ರಗಳಲ್ಲೂ ಆಗುತ್ತಿರುವ ಬೆಳವಣಿಗೆಗಳನ್ನು ಕ್ಷಣ ಮಾತ್ರದಲ್ಲಿ ತಿಳಿದುಕೊಳ್ಳುವ ತಂತ್ರಜ್ಞಾನಗಳಿವೆ. ಸಂಘದಲ್ಲಿ ಇ–ಲೈಬ್ರರಿ ತಡವಾಗಿಯಾದರೂ ಸ್ಥಾಪಿಸಿರುವುದರಿಂದ ವಕೀಲರಿಗೆ ಹೆಚ್ಚು ಉಪಯೋಗವಾಗಲಿದೆ’ ಎಂದರು.

‘ಯುವ ವಕೀಲರು ಪ್ರತಿ ನಿಮಿಷವೂ ತಮ್ಮ ಕ್ಷೇತ್ರದ ಹೊಸ ಬೆಳವಣಿಗೆಗಳನ್ನು ತಿಳಿದುಕೊಳ್ಳುತ್ತಲೇ ಇರಬೇಕು. ಆಧುನಿಕ ಜಗತ್ತಿನ ವೇಗಕ್ಕೆ ತಕ್ಕಂತೆ ಹೊಂದಿಕೊಂಡು ಮಾಹಿತಿಗಳನ್ನು ಸಂಗ್ರಹಿಸಬೇಕು. ಅಗತ್ಯಬಿದ್ದಾಗ ಬಳಸಿಕೊಂಡು ಸಮರ್ಥ ವಕೀಲರೆನ್ನಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

’ವಕೀಲರು ಮತ್ತು ನ್ಯಾಯಾಧೀಶರ ತಪ್ಪಿಗೆ ಕಕ್ಷಿದಾರರು ಶಿಕ್ಷೆ ಅನುಭವಿಸುವಂತಾಗಬಾರದು.. ಹೊಸ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಕಾರ್ಯ ಶೀಘ್ರ ಪೂರ್ಣಗೊಳ್ಳಲಿದೆ’ ಎಂದರು.

ವಕೀಲರ ಸಂಘದ ಕೆ.ಕೋಟೇಶ್ವರರಾವ್ ಮಾತನಾಡಿ, ‘ಇ-ಲೈಬ್ರರಿಯಲ್ಲಿ ಎಲ್ಲ ಹಂತದ ನ್ಯಾಯಾಲಯಗಳ ಪ್ರಮುಖ ತೀರ್ಪುಗಳ ಪ್ರತಿಗಳು ಸೇರಿದಂತೆ ವಕೀಲರಿಗೆ ಅಗತ್ಯವಿರುವ ಸಕಲ ಮಾಹಿತಿಗಳೂ ಲಭ್ಯ. ಪುಸ್ತಕ ಖರೀದಿಗೆ ಹೆಚ್ಚು ಹಣ ಖರ್ಚಾಗುತ್ತದೆ. ಇಂಟರ್ ನೆಟ್ ಸಂಪರ್ಕ ಇಲ್ಲದವರು ಇ-ಲೈಬ್ರರಿಯಲ್ಲಿ ಬೇಕಾದ ಮಾಹಿತಿಗಳನ್ನು ಪಡೆದುಕೊಳ್ಳಬಹುದು’ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಚ್.ಎಂ.ಅಂಕಲಯ್ಯ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ಸಿ.ಬಿರಾದಾರ್ ಮಾತನಾಡಿದರು. ರಾಜ್ಯ ವಕೀಲರ ಪರಿಷತ್ ಸದಸ್ಯ ಜೆ.ಎಂ.ಅನೀಲ್ ಕುಮಾರ್, ತಿಪ್ಪೇರುದ್ರ, ಹರೀಶ್ ನಾಯಕ್, ಎಸ್.ವಿ.ಅರಸೂರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.