ಬಳ್ಳಾರಿ: ಸಾರ್ವಜನಿಕ ರಸ್ತೆಯನ್ನು ಅತಿಕ್ರಮಣ ಮಾಡಿ ಕಟ್ಟಲಾಗಿದ್ದ ಬಂಡಿಹಟ್ಟಿ ರಸ್ತೆಯ ಸಪ್ತಗಿರಿ ಫಂಕ್ಷನ್ ಹಾಲ್‌ಅನ್ನು ಗುರುವಾರ ಬೆಳಿಗ್ಗೆ ಮಹಾನಗರ ಪಾಲಿಕೆ ಸಿಬ್ಬಂದಿ ನೆಲಸಮ ಮಾಡಿದರು.
ಈ ಫಂಕ್ಷನ್ ಹಾಲ್ ಅನ್ನು 2015ರಲ್ಲಿ 150/150 ಅಡಿ ಜಾಗದಲ್ಲಿ ಕಟ್ಟಲಾಗಿತ್ತು. ಆ ಸಮಯದಲ್ಲಿ ಎರಡೂ ಬದಿಯ ರಸ್ತೆಯನ್ನು ಅತಿಕ್ರಮಿಸಲಾಗಿತ್ತು. ಈ ಬಗ್ಗೆ ಸಾರ್ವಜನಿಕರು ಪಾಲಿಕೆಗೆ ದೂರು ನೀಡಿದ್ದರು.
ಜನರ ದೂರು ಆಧರಿಸಿ ಪಾಲಿಕೆ ಅಧಿಕಾರಿಗಳು ಕಟ್ಟಡದ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದ್ದರು.
ಪಾಲಿಕೆ ಕ್ರಮ ಪ್ರಶ್ನಿಸಿ ಕಟ್ಟಡ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ , ಕಟ್ಟಡ ತೆರವು ಮಾಡಲು ಮೂರು ತಿಂಗಳ ಗಡುವು ನೀಡಿತ್ತು. ಗಡುವು ಮುಗಿದ ಹಿನ್ನೆಲೆಯಲ್ಲಿ ಕಟ್ಟಡ ನೆಲಸಮ ಮಾಡಲಾಗುತ್ತಿದೆ ಎಂದು ಪಾಲಿಕೆ ಕಮಿಷನರ್ ಎಸ್.ಎನ್. ರುದ್ರೇಶ್ ತಿಳಿಸಿದರು.
ಸಪ್ತಗಿರಿ ಫಂಕ್ಷನ್ ಹಾಲ್ ಕಟ್ಟಿದ್ದ ನಿವೇಶನ ಮೂಲತಃ ಏಕತಾ ಎಚ್.ಡಿ. ಅವರ ಕುಟುಂಬಕ್ಕೆ ಸೇರಿದ್ದು ಫಂಕ್ಷನ್ ಹಾಲ್ ಕಟ್ಟಲು ಬೇರೆಯವರಿಗೆ ಗುತ್ತಿಗೆ ನೀಡಲಾಗಿತ್ತು.
ಕಟ್ಟಡ ತೆರವಿಗೆ ಪಾಲಿಕೆ ಜತೆ ಸಹಕರಿಸುತ್ತಿರುವುದಾಗಿ ಏಕತಾ ಸ್ಪಷ್ಟಪಡಿಸಿದರು. ₹ 3 ಕೋಟಿ ಬೆಲೆ ಬಾಳುವ ಕಟ್ಟಡ ನೆಲಸಮ ಕಾರ್ಯಾಚರಣೆ ಬಿಗಿ ಪೊಲೀಸ್ ಭದ್ರತೆಯಲ್ಲಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.