ADVERTISEMENT

ಮತದಾನ ಬಹಿಷ್ಕರಿಸದಂತೆ ಮನವೊಲಿಕೆ ಯತ್ನ

ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ತಹಶೀಲ್ದಾರ್‌ ಮನವಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 16:11 IST
Last Updated 27 ಮಾರ್ಚ್ 2024, 16:11 IST
ಹರಪನಹಳ್ಳಿ ತಾಲ್ಲೂಕು ಕರೆಕಾನಹಳ್ಳಿಯಲ್ಲಿ ಬುಧವಾರ ಮತದಾನ ಜಾಗೃತಿ ಜಾಥ ನಡೆಸಲಾಯಿತು
ಹರಪನಹಳ್ಳಿ ತಾಲ್ಲೂಕು ಕರೆಕಾನಹಳ್ಳಿಯಲ್ಲಿ ಬುಧವಾರ ಮತದಾನ ಜಾಗೃತಿ ಜಾಥ ನಡೆಸಲಾಯಿತು   

ಹರಪನಹಳ್ಳಿ: ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸದೆ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆಕಾನಹಳ್ಳಿ ಮತ್ತು ಕರೆಕಾನಹಳ್ಳಿ ತಾಂಡ ಗ್ರಾಮಸ್ಥರಿಗೆ ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬು ತಿಳಿಸಿದ್ದಾರೆ.

ತಾಲ್ಲೂಕಿನ ಕರೆಕಾನಹಳ್ಳಿಯಲ್ಲಿ ಬುಧವಾರ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಅವರು, ಗ್ರಾಮಸ್ಥರ ಮನವಿ ಆಲಿಸಿದ ಬಳಿಕ ಮಾತನಾಡಿದರು.

ಮೂಲ ಸೌಕರ್ಯಗಳಾದ ಚರಂಡಿ ಸ್ವಚ್ಛತೆ, ಕುಡಿಯುವ ನೀರಿನ ಸೌಕರ್ಯಗಳನ್ನು ತುರ್ತಾಗಿ ಕಲ್ಪಿಸಲಾಗುವುದು. ಪ್ರತ್ಯೇಕ ಪೈಪ್‌ಲೈನ್ ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಸಾರಿಗೆ ಬಸ್ ಸಂಚಾರ ಆರಂಭಿಸಲು ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಶೀಘ್ರ ಸಂಚಾರ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಆದರೆ ಪಟ್ಟು ಸಡಿಲಿಸದ ಗ್ರಾಮಸ್ಥರು ಸೂಕ್ತ ಚರಂಡಿ ವ್ಯವಸ್ಥೆಗಳಿಲ್ಲ, ಕರೆಕಾನಹಳ್ಳಿಗೆ ಸಂಪರ್ಕ ಕಲ್ಪಿಸುವ ಹುಲಿಕಟ್ಟೆ ಕಗ್ಗಲಗಟ್ಟೆ ತಾಂಡಾ ವರೆಗಿನ ರಸ್ತೆ, ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಮಾಡಲಗೇರೆಗೆ ಬರುವ ರಸ್ತೆಗಳು ಹಾಳಾಗಿವೆ. ಕಳಪೆಯಾಗಿರುವ ಜೆಜೆಎಂ ಕಾಮಗಾರಿಯ ನಳಗಳಿಂದ ನೀರು ಬರುತ್ತಿಲ್ಲ. ಆದ್ದರಿಂದ ಪುನರ್ ಕಾಮಗಾರಿ ನಿರ್ವಹಿಸಬೇಕು. ಈ ಎಲ್ಲ ಬೇಡಿಕೆಗಳನ್ನು ಕೂಡಲೇ ಈಡೇರಿಸಿದರೆ ಮಾತ್ರ ಮತದಾನ ಕೇಂದ್ರಕ್ಕೆ ತೆರಳುವುದಾಗಿ ಹೇಳಿದ್ದಾರೆ.

‘ನೀತಿ ಸಂಹಿತೆ ಕಾರಣ ರಸ್ತೆ ನಿರ್ಮಾಣ, ನ್ಯಾಯ ಬೆಲೆ ಅಂಗಡಿ ಸ್ಥಾಪನೆ ಜರೂರು ಮಾಡಲು ಆಗುವುದಿಲ್ಲ. ಚುನಾವಣೆ ಮುಕ್ತಾಯದ ಬಳಿಕ ಕ್ರಮವಹಿಸುತ್ತೇವೆ. ಮತಗಟ್ಟೆಗೆ ಬರುವ ಅಧಿಕಾರಿಗಳಿಗೆ ಸ್ಪಂದಿಸಿ ಮತ ಚಲಾಯಿಸಿ’ ಎಂದು ತಹಶೀಲ್ದಾರ್‌ ಗಿರೀಶ್ ಬಾಬು ಮನವಿ ಮಾಡಿ, ಹಿಂತಿರುಗಿದ್ದಾರೆ.

ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್, ಪಿಡಿಒ ಚಂದ್ರಪ್ಪ, ಗ್ರಾಮ ಮುಖಂಡರಾದ ಅಂಜಿನಪ್ಪ, ಕೆ.ತುಮನೆಪ್ಪ, ಎನ್.ರಮೇಶ್, ಮಲ್ಲೇಶ, ಶಿವರಾಜ್, ವಿ.ಚಂದ್ರಪ್ಪ, ಲಾಲ್ಯನಾಯ್ಕ, ಎಚ್.ಮಂಜಪ್ಪ, ಕುಮಾರಪ್ಪ, ಹನುಮಂತಪ್ಪ ಇತರರಿದ್ದರು.

ಹರಪನಹಳ್ಳಿ ತಾಲ್ಲೂಕು ಕರೆಕಾನಹಳ್ಳಿಯಲ್ಲಿ ಬುಧವಾರ ಗ್ರಾಮಸ್ಥರೊಂದಿಗೆ ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು ಸಭೆ ನಡೆಸಿದರು

ಗ್ರಾಮಕ್ಕೆ ಒಂದೇ ಮತಗಟ್ಟೆ

ಹರಪನಹಳ್ಳಿ ತಾಲ್ಲೂಕಿನ ಮಾಡಲಗೆರೆ ಗ್ರಾಮ ಪಂಚಾಯಿತಿಗೆ ಒಳಪಡುವ ಕೆರೆಕಾನಹಳ್ಳಿ ಗ್ರಾಮದಲ್ಲಿ 500 ಮತದಾರರು ಇದ್ದಾರೆ. 1ರಿಂದ 5ನೇ ತರಗತಿವರೆಗೆ ಕಿರಿಯ ಪ್ರಾಥಮಿಕ ಶಾಲೆ ಹೊಂದಿದೆ. ಗ್ರಾಮಕ್ಕೆ ಒಂದೇ ಮತಗಟ್ಟೆಯಿದ್ದು ಒಬ್ಬ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.