ADVERTISEMENT

ಹೂವಿನಹಡಗಲಿ: ತಾಲ್ಲೂಕು ಕಚೇರಿಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ

ಕೆ.ಸೋಮಶೇಖರ
Published 12 ಜೂನ್ 2024, 5:56 IST
Last Updated 12 ಜೂನ್ 2024, 5:56 IST
   

ಹೂವಿನಹಡಗಲಿ: ಕೆಲ ದಿನಗಳಿಂದ ಅನಿಯಮಿತ ವಿದ್ಯುತ್ ಕಡಿತ (ಲೋಡ್ ಶೆಡ್ಡಿಂಗ್) ಹೆಚ್ಚಾಗಿದೆ. ಇಲ್ಲಿನ ತಾಲ್ಲೂಕು ಕಚೇರಿಯ ಜನರೇಟರ್ ದುರಸ್ತಿಯಲ್ಲಿರುವುದರಿಂದ ವಿದ್ಯುತ್ ಕಡಿತವಾದಾಗಲೆಲ್ಲ ತಾಲ್ಲೂಕು ಆಡಳಿತ ಸೌಧದ ಚಟುವಟಿಕೆಗಳು ಸ್ಥಗಿತಗೊಂಡು, ಸಾರ್ವಜನಿಕರು ಪರದಾಡುವಂತಾಗಿದೆ.

ತಾಲ್ಲೂಕು ಕಚೇರಿಯ ಮೂರು ಮಹಡಿಯ ಬೃಹತ್ ಕಟ್ಟಡದಲ್ಲಿ ಉಪ ಖಜಾನೆ, ಭೂಮಾಪನ, ಉಪ ನೋಂದಣಿ, ಆಹಾರ ಮತ್ತು ನಾಗರಿಕ ಪೂರೈಕೆ, ಅಬಕಾರಿ ಇಲಾಖೆ ಕಚೇರಿಗಳಿವೆ. ವಿದ್ಯುತ್ ಕಡಿತ ಸಮಸ್ಯೆ ಪರಿಹಾರಕ್ಕಾಗಿ ತಾಲ್ಲೂಕು ಕಚೇರಿ ಆವರಣದಲ್ಲಿ ಬೃಹತ್ ಸಾಮರ್ಥ್ಯದ ಎರಡು ಜನರೇಟರ್ ಅಳವಡಿಸಲಾಗಿದೆ. ಅವು ಆರೇಳು ತಿಂಗಳ ಹಿಂದೆ ಕೆಟ್ಟುಹೋಗಿದ್ದು, ವಿದ್ಯುತ್ ಕೈ ಕೊಟ್ಟಾಗಲೆಲ್ಲ ತಾಲ್ಲೂಕು ಆಡಳಿತ ಸೌಧದ ಕೆಲಸ ಕಾರ್ಯಗಳು ಸ್ಥಗಿತಗೊಳ್ಳುತ್ತದೆ.

ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಕೆಲ ದಿನಗಳಿಂದ ಗಂಟೆಗಟ್ಟಲೇ ವಿದ್ಯುತ್ ಕಡಿತವಾಗುತ್ತದೆ. ತಾಲ್ಲೂಕು ಕಚೇರಿಯಲ್ಲಿ ಪರ್ಯಾಯ ವ್ಯವಸ್ಥೆ ಇಲ್ಲದೇ ಅಟಲ್ ಜೀ ಜನಸ್ನೇಹಿ ಕೇಂದ್ರದ ಚಟುವಟಿಕೆಗಳು ಸ್ಥಗಿತಗೊಳ್ಳುತ್ತವೆ. ಜಾತಿ ಆದಾಯ ಪ್ರಮಾಣ ಪತ್ರ, ಬೆಳೆ ಪರಿಹಾರ, ವಂಶವೃಕ್ಷ, ಹಕ್ಕು ಬದಲಾವಣೆ, ಆಧಾರ್ ತಿದ್ದುಪಡಿ, ಸಾಮಾಜಿಕ ಭದ್ರತಾ ಯೋಜನೆಯ ವಿವಿಧ ಪಿಂಚಣಿಗಳಿಗೆ ಅರ್ಜಿ ಸಲ್ಲಿಕೆ ಹಾಗೂ ಕಂದಾಯ ಇಲಾಖೆ ದಾಖಲೆಗಳಿಗೆ ಅರ್ಜಿ ಸಲ್ಲಿಕೆಗೆ ತೀವ್ರ ಅಡಚಣೆ ಉಂಟಾಗಿದೆ. ಪಹಣಿ ಪಡೆಯಲು ಪರದಾಡುವಂತಾಗಿದೆ. ಈ ತೊಂದರೆಯಿಂದ ಬೇಸತ್ತ ಸಾರ್ವಜನಿಕರು ತಾಲ್ಲೂಕು ಆಡಳಿತವನ್ನು ಶಪಿಸುತ್ತಿದ್ದಾರೆ.

ADVERTISEMENT

ತಾಲ್ಲೂಕಿನ ಗಡಿಯಲ್ಲಿರುವ ಹರವಿ, ಲಿಂಗನಾಯಕನಹಳ್ಳಿ, ಕುರುವತ್ತಿ ಮೈಲಾರ ಭಾಗದ ರೈತರು ದೈನಂದಿನ ಕೆಲಸ ಬಿಟ್ಟು ತಾಲ್ಲೂಕು ಕಚೇರಿಗೆ ಬಂದರೂ ನಿಗದಿತ ಕೆಲಸಗಳು ಆಗದೇ ಬರಿಗೈಲಿ ಮರಳುವಂತಾಗಿದೆ. ಕೆಲವೊಮ್ಮೆ ಸರ್ವರ್ ಸಮಸ್ಯೆಯಿಂದಲೂ ಜನರು ದಿನಗಟ್ಟಲೇ ಕಚೇರಿ ಮುಂದೆ ಕಾಯುವಂತಾಗಿದೆ.

ಕೂಡಲೇ ತಾಲ್ಲೂಕು ಕಚೇರಿಯ ಜನರೇಟರ್‌ಗಳನ್ನು ದುರಸ್ತಿಗೊಳಿ ಸಬೇಕು. ಸರ್ವರ್ ಸಮಸ್ಯೆಯನ್ನೂ ಬಗೆಹರಿಸಿ ಆನ್‌ಲೈನ್ ಸೇವೆಗಳನ್ನು ತ್ವರಿತವಾಗಿ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಲ್ಲೂಕು ಕಚೇರಿಯಲ್ಲಿ ವಿದ್ಯುತ್ ಕೈಕೊಟ್ಟಾಗ ಪರ್ಯಾಯ ವ್ಯವಸ್ಥೆ ಇಲ್ಲದೆ ಜನ ತೊಂದರೆ ಅನುಭವಿಸುವಂತಾಗಿದೆ. ಈ ಸಮಸ್ಯೆ ಕೂಡಲೇ ಪರಿಹರಿಸಬೇಕು.
ಎನ್.ಎಂ. ಸಿದ್ದೇಶ, ಅಧ್ಯಕ್ಷ, ಈರುಳ್ಳಿ ಬೆಳೆಗಾರರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.