ಕೊಟ್ಟೂರು: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಟ್ಟೂರಿನ ಕೊಟ್ಟೂರೇಶ್ವರ ಸ್ವಾಮಿ ದರ್ಶನಕ್ಕೆ ನಿತ್ಯ ಅಸಂಖ್ಯಾತ ಭಕ್ತರು ಬರುತ್ತಿದ್ದರೂ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.
ಮುಜರಾಯಿ ಇಲಾಖೆಯ ಸ್ವಾಧೀನದಲ್ಲಿರುವ ಈ ದೇವಸ್ಥಾನವು ‘ಎ’ ಶ್ರೇಣಿಗೆ ಸೇರಿದೆ. ಭಕ್ತರಿಂದ ವಾರ್ಷಿಕ ಕೋಟ್ಯಂತರ ರೂಪಾಯಿ ಕಾಣಿಕೆ ಸಂಗ್ರಹವಾಗುತ್ತಿದೆ. ಆದರೂ ಸೌಕರ್ಯಗಳು ಮಾತ್ರ ಮರೀಚಿಕೆಯಾಗಿದೆ.
ಸರತಿ ಸಾಲಿನಲ್ಲಿ ನಿಂತು ದರ್ಶನಕ್ಕೆ ಬರುವ ಭಕ್ತರಿಗೆ ನೆರಳಿನ ಆಶ್ರಯಕ್ಕಾಗಿ ದೇವಸ್ಥಾನದ ಒಂದು ಬದಿ ಮಾತ್ರ ಚಾವಣಿ ನಿರ್ಮಿಸಲಾಗಿದೆ. ಮತ್ತೊಂದು ಬದಿಯಲ್ಲಿ ಚಾವಣಿ ಇಲ್ಲದ ಕಾರಣ ಭಕ್ತರು ಬಿಸಿಲಿನಲ್ಲೇ ನಿಲ್ಲುವಂತಹ ಸ್ಥಿತಿ ಇದೆ. ವಿಶೇಷ ದಿನಗಳಲ್ಲಿ ಮಾತ್ರ ಶಾಮಿಯಾನದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಭಕ್ತರ ವಸತಿಗಾಗಿ ದೇವಸ್ಥಾನದ ಹಿಂಭಾಗದಲ್ಲಿರುವ ಯಾತ್ರಿ ನಿವಾಸದ ಕೊಠಡಿಗಳು ಸಾಲುತ್ತಿಲ್ಲ. ಸಮೀಪದಲ್ಲಿ ಹಳೆಯ ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ನಿರ್ಮಿಸುತ್ತಿರುವ ಕೊಠಡಿಗಳ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಅನಿವಾರ್ಯವಾಗಿ ಭಕ್ತರು ಖಾಸಗಿ ವಸತಿ ನಿಲಯಗಳ ಮೊರೆ ಹೋಗಬೇಕಾಗಿದೆ.
ದೇವಸ್ಥಾನದ ಎದುರಿನಲ್ಲಿರುವ ಅಂಗಡಿಗಳು ರಸ್ತೆಯನ್ನು ಆಕ್ರಮಿಸಿರುವುದು ಹಾಗೂ ವಾಹನಗಳ ಸವಾರರು ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುವುದರಿಂದ ಭಕ್ತರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮುಖ್ಯ ರಸ್ತೆಯನ್ನು ಆಕ್ರಮಿಸುವುದರಿಂದ ಇತರ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ಸರ್ಕಾರದ ಶಕ್ತಿ ಯೋಜನೆಯ ಸದುಪಯೋಗ ಪಡೆದು ರಾಜ್ಯದ ವಿವಿಧ ಜಿಲ್ಲೆಗಳಿಂದ ಮಹಿಳಾ ಭಕ್ತರ ದಂಡು ಮಕ್ಕಳೊಂದಿಗೆ ದೇವಸ್ಥಾನಕ್ಕೆ ಬರುವುದು ಈಚೆಗೆ ಹೆಚ್ಚಿದೆ. ಹೀಗಾಗಿ ದೀಡು ನಮಸ್ಕಾರ ಹಾಕುವ ಮಹಿಳಾ ಭಕ್ತರಿಗೆ ಪ್ರತ್ಯೇಕ ವಸತಿ ಗೃಹ, ವೃದ್ಧರಿಗೆ ವಿಶ್ರಾಂತಿ ಪಡೆಯಲು ಆಸನಗಳ ವ್ಯವಸ್ಥೆ, ಜವಳ ತೆಗೆಸಲು ಪ್ರತ್ಯೇಕ ಸ್ಥಳ, ಕುಡಿಯುವ ನೀರು ಮುಂತಾದ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು ಎಂದು ರಾಣಿಬೆನ್ನೂರಿನ ಮಂಜುಳಾ ಆಗ್ರಹಿಸಿದರು.
ಭಕ್ತರ ವಾಹನಗಳಿಗೆ ಪಟ್ಟಣದ ಹೊರವಲಯದಲ್ಲಿ ವಿಶಾಲವಾದ ಜಾಗದಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕು. ವಾಹನಗಳ ಪೂಜೆಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಬೇಕೆಂದು ದಾವಣಗೆರೆಯ ಭಕ್ತರಾದ ಬಸವರಾಜಪ್ಪ ಹೇಳಿದರು.
ದೇವಸ್ಥಾನದ ಆವರಣದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡುವುದಲ್ಲದೆ ಇರುವ ನಾಲ್ಕೈದು ಶೌಚಾಲಯ ಹಾಗೂ ಸ್ನಾನ ಗೃಹಗಳು ಬರುವ ಭಕ್ತರ ಸಂಖ್ಯೆಗೆ ಸಾಲುತ್ತಿಲ್ಲ. ಈಚೆಗೆ ದೇವಸ್ಥಾನದ ಪಕ್ಕದಲ್ಲಿದ್ದ ಉಪಖಜಾನೆ ಕಟ್ಟಡ ತೆರವುಗೊಳಿಸಿರುವುದರಿಂದ ಜಿಲ್ಲಾಡಳಿತದಿಂದ ಆ ಜಾಗವನ್ನು ದೇವಸ್ಥಾನಕ್ಕೆ ಪಡೆದುಕೊಂಡು ಸುಸಜ್ಜಿತ ಕೊಠಡಿಗಳು ಹಾಗೂ ಪ್ರಸಾದ ನಿಲಯವನ್ನು ನಿರ್ಮಿಸಿದರೆ ದೂರದ ಊರುಗಳಿಂದ ಬರುವ ಭಕ್ತರು ತಂಗಲು ಅನುಕೂಲವಾಗುತ್ತದೆ.
ಭಕ್ತರಿಗೆ ಸೌಲಭ್ಯಗಳನ್ನು ಕಲ್ಪಿಸಿದ್ದೇವೆ. ಇನ್ನೂ ಹೆಚ್ಚಿನ ಸೌಕರ್ಯ ಒದಗಿಸಲು ಶೀಘ್ರವೇ ಕ್ರಮ ಕೈಗೊಳ್ಳುತ್ತೇವೆಕೃಷ್ಣಪ್ಪ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.