ADVERTISEMENT

ಕುರುಗೋಡು: ರೈತನ ಕೈಹಿಡಿದ ಗುಲಾಬಿ ಕೃಷಿ

ವಾಗೀಶ ಕುರುಗೋಡು
Published 12 ಏಪ್ರಿಲ್ 2024, 5:12 IST
Last Updated 12 ಏಪ್ರಿಲ್ 2024, 5:12 IST
<div class="paragraphs"><p>ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದ ರೈತ ಗುರುರಾಜ ಅವರ ತೋಟದಲ್ಲಿ ಅರಳಿದ ಗುಲಾಬಿ ಹೂಗಳು</p></div>

ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದ ರೈತ ಗುರುರಾಜ ಅವರ ತೋಟದಲ್ಲಿ ಅರಳಿದ ಗುಲಾಬಿ ಹೂಗಳು

   

ಕುರುಗೋಡು: ‘ಭೂಮಿತಾಯಿಯನ್ನು ನಂಬಿ ಸೇವೆ ಮಾಡಿದರೆ ಕೈಬಿಡುವುದಿಲ್ಲ. ಶ್ರದ್ದೆ, ತಾಳ್ಮೆ, ನಿರಂತರ ಪರಿಶ್ರಮದಿಂದ ಕೃಷಿಯಲ್ಲಿ ಖುಷಿ ಕಾಣಬಹುದು’ ಎನ್ನುತ್ತಾರೆ ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದ ಪ್ರಗತಿಪರ ಯುವ ರೈತ ಗುರುರಾಜ.

ಇವರು ತಮ್ಮ ಮೂರು ಎಕರೆ ಜಮೀನಿನಲ್ಲಿ ಮೊದಲು ಸಂಪ್ರದಾಯಿಕ ಭತ್ತ, ಮೆಣಸಿನಕಾಯಿ ಬೆಳೆ ಬೆಳೆದು ರೋಗಬಾಧೆ, ಇಳುವರಿ ಕುಂಟಿತ ಮತ್ತು ಮಾರುಕಟ್ಟೆ ಸಮಸ್ಯೆಯಿಂದ ಕೈಸುಟ್ಟುಕೊಂಡಿದ್ದರು. ನಂತರ ಅನುಭವಿ ಕೃಷಿಕರ ಮಾರ್ಗದರ್ಶನದಿಂದ ಸರ್ವಋತುವಿನಲ್ಲಿ ಬೇಡಿಕೆ ಇರುವ ಗುಲಾಬಿ, ಕನಕಾಂಬರ ಹೂ ಬೆಳೆದು ಕೈತುಂಬ ಆದಾಯ ಗಳಿಸುತ್ತಾ ತಾಲ್ಲೂಕಿನಲ್ಲಿಯೇ ಯಶ್ವಸ್ವಿ ರೈತರಲ್ಲಿ ಒಬ್ಬರಾಗಿದ್ದಾರೆ.

ADVERTISEMENT

ಅಂಜೂರ, ದಾಳಿಂಬೆ, ಪಪ್ಪಾಯ, ಸೀಬೆ ಹಣ್ಣಿನ ತೋಟಗಳ ಮಧ್ಯೆ ಕುರುಗೋಡು-ಸಿರಿಗೇರಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಕೆ.ಗುರುರಾಜರ ಹೂವಿನ ತೋಟ ದಾರಿಹೋಕರ ಗಮನ ಸೆಳೆಯುತ್ತಿದೆ.

ಕೊಪ್ಪಳದ ಪ್ರಗತಿಪರ ರೈತ ಮಲ್ಲನಗೌಡ ಅವರ ಸುಂದರವಾಗಿ ಅರಳಿರುವ ಹೂವಿನ ತೋಟದ ಪ್ರೇರಣೆ ರೈತ ಗುರುರಾಜ ಹೂವಿನ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ.

ಎರಡು ವರ್ಷದ ಹಿಂದೆ ಆಂಧ್ರಪ್ರದೇಶದ ಕುಪ್ಪಗಲ್ಲು ಗ್ರಾಮದಿಂದ ₹2ಕ್ಕೆ 1ರಂತೆ 5ಸಾವಿರ ಕನಕಾಂಬರ ಸಸಿ ತಂದು ಎರಡು ಎಕರೆಯಲ್ಲಿ ನಾಟಿ ಮಾಡಿದ್ದರು. ಈಗ ಸ್ವಚ್ಛಂದವಾಗಿ ಬೆಳೆದು ಹೂ ಮಾರಾಟಕ್ಕೆ ದೊರೆಯುತ್ತಿದೆ.

ಕನಕಾಂಬರದ ಜತೆಗೆ ಕಳೆದ ವರ್ಷ ರಾಮನಗರ ಜಿಲ್ಲೆಯ ಹೊಸಕೋಟೆ
ಯಲ್ಲಿ ₹22ಕ್ಕೆ ಒಂದರಂತೆ 5ಸಾವಿರ ಬಟನ್ ಗುಲಾಬಿ ಸಸಿ ತಂದು ಎರಡು ಎಕರೆಯಲ್ಲಿ ನಾಟಿ ಮಾಡಿ ಉತ್ತಮ ಇಳುವರಿ ಪಡೆದು ಮಾರಾಟಮಾಡಿ ಅಧಿಕ ಲಾಭ ಪಡೆಯುತ್ತಿದ್ದಾರೆ.

ಕನಕಾಂಬರ ಸಸಿ ಒಂದುಬಾರಿ ನಾಟಿ ಮಾಡಿದರೆ ಮೂರುವರ್ಷ ಬೆಳೆಬರುತ್ತದೆ. ಬಟನ್ ಗುಲಾಬಿ ನಾಟಿಯನಂತರ 7ವರ್ಷಗಳ ವರೆಗೆ ಬೆಳೆಪಡೆಯಬಹುದು.

ಹೂವಿನ ಕೃಷಿಯ ಜತೆಗೆ ಜರ್ಸಿ ತಳಿಯ 15 ಹಸು ಮತ್ತು 5 ಎಮ್ಮೆ ಸಾಕಿದ್ದಾರೆ. ಸೆಗಣಿ ಮತ್ತು ಗೋಮೂತ್ರ ಬಳಸಿ ಜೀವಾಮೃತ ತಯಾರಿಸಿ ಔಷಧಿಯಾಗಿ ಗಿಡಗಳಿಗೆ ಸಿಂಪರಣೆ ಮಾಡುತ್ತಿದ್ದಾರೆ. ಇದರಿಂದ ರೋಗ ಮತ್ತು ಕೀಟಬಾಧೆ ಕಡಿಮೆ ಎನ್ನುತ್ತಾರೆ ರೈತ ಗುರುರಾಜ. ಹೂವಿನ ಜತೆಗೆ ಹಾಲು ಮಾರಾಟಮಾಡಿ ಲಾಭಗಳಿಸುತ್ತಿದ್ದಾರೆ.

ಒಂದುಬಾರಿ ಸಸಿ ಖರೀದಿಸಿ ನಾಟಿಮಾಡಿದ ನಂತರ ಹೆಚ್ಚು ವೆಚ್ಚಬರುವುದಿಲ್ಲ. ಕಡಿಮೆ ವೆಚ್ಚದಲ್ಲಿಯೇ ಉತ್ತಮವಾಗಿ ನಿರ್ವಹಣೆ ಮಾಡಬಹುದು. ನಿತ್ಯ 2ಕೆಜಿ ಕನಕಾಂಬರ ಮತ್ತು 15ಕೆಜಿ ಬಟನ್ ಗುಲಾಬಿ ಇಳುವರಿ ಬರುತ್ತಿದೆ. 1ಕೆಜಿ ಕನಕಾಂಬರಕ್ಕೆ ₹1500 ಮತ್ತು 1ಕೆಜಿ ಬಟನ್ ಗುಲಾಬಿಗೆ ₹140 ಮಾರುಕಟ್ಟೆಯಲ್ಲಿ ಬೆಲೆದೊರೆಯುತ್ತಿದೆ. ಹೂಮಾರಾಟಗಾರರು ತೋಟಕ್ಕೆ ಬಂದು ಹೂ ಖರೀದಿಸುವಿದರಿಂದ ಮರುಕಟ್ಟೆ ಸಮಸ್ಯೆ ಇಲ್ಲ. ನಿರ್ವಹಣೆ ವೆಚ್ಚ ತೆಗೆದು ವಾರ್ಷಿಕ ₹3ಲಕ್ಷದ ವರೆಗೆ ಗಳಿಸುತ್ತಿದ್ದಾರೆ.

ಹಬ್ಬ ಮತ್ತು ವೀಶೇಷ ದಿನಗಳಲ್ಲಿ ಸೇವಂತಿ ಹೂವಿಗೆ ಹೆಚ್ಚು ಬೇಡಿಕೆ ಇರುತ್ತದೆ. ಮುಂದಿನ ದಿನಗಳಲ್ಲಿ ಸೇವಂತಿಗೆಯನ್ನೂ ಬೆಳೆಯುತ್ತೇನೆ

-ಕೆ.ಗುರುರಾಜ, ರೈತ

ಇಲಾಖೆಯಿಂದ ಹೂವಿನ ಕೃಷಿಗೆ ಹನಿ ನೀರಾವರಿ ಸೌಲಭ್ಯ ದೊರೆಯುತ್ತದೆ. ತೋಟ ಅಭಿವೃದ್ಧಿ ಪಡಿಸಿಕೊಳ್ಳಲು ನರೇಗಾದಲ್ಲಿ ಅವಕಾಶವಿದೆ

-ಖಾದರ್‍ಬಾಷಾ, ಹಿರಿಯ ಸಹಾಯಕತೋಟಗಾರಿಕೆ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.