ADVERTISEMENT

ಹರಪನಹಳ್ಳಿ: ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡ ರೈತ

ವಿಶ್ವನಾಥ ಡಿ.
Published 5 ಜನವರಿ 2024, 6:18 IST
Last Updated 5 ಜನವರಿ 2024, 6:18 IST
ಹರಪನಹಳ್ಳಿ ತಾಲ್ಲೂಕು ಅನಂತನಹಳ್ಳಿಯಲ್ಲಿ ಸಮೃದ್ಧವಾಗಿ ಬೆಳೆದ ತೊಗರಿ ಗಿಡ
ಹರಪನಹಳ್ಳಿ ತಾಲ್ಲೂಕು ಅನಂತನಹಳ್ಳಿಯಲ್ಲಿ ಸಮೃದ್ಧವಾಗಿ ಬೆಳೆದ ತೊಗರಿ ಗಿಡ    

ಹರಪನಹಳ್ಳಿ: ಆಗಾಗ ಸಂಭವಿಸುವ ಪ್ರಾಕೃತಿಕ ವಿಕೋಪದಿಂದ ರೈತರು ನಷ್ಟ ಅನುಭವಿಸುತ್ತಾರೆ. ಇದರಿಂದ ಎಚ್ಚೆತ್ತುಕೊಂಡಿರುವ ತಾಲ್ಲೂಕಿನ ಅನಂತನಹಳ್ಳಿ ಕೌಳೇರ ಮನೆತನದ ರೈತ ಕುಟುಂಬ, ಪ್ರತಿ ತಿಂಗಳು ಆದಾಯ ತಿಂಗಳು ಆದಾಯ ನೀಡುವ ಬಹುಬೆಳೆ ಪದ್ಧತಿ ಅಳವಡಿಸಿಕೊಂಡು ಗಮನ ಸೆಳೆದಿದೆ.

ಕೆ.ಗೋಣೆಪ್ಪ ಮತ್ತು ಗೋಣೆಮ್ಮ ದಂಪತಿಗೆ ಕೆ.ವಿರುಪಾಕ್ಷಪ್ಪ, ಕೆ.ಪ್ರಕಾಶ್, ಕೆ.ಬಸವರಾಜ್ ಮತ್ತು ಕೆ. ರವಿಚಂದ್ರ ಸೇರಿ ನಾಲ್ವರು ಪುತ್ರರಿದ್ದಾರೆ. ಕಿರಿಯ ಸಹೋದರ ರವಿಚಂದ್ರ ಓದಿದ್ದು 5ನೇ ತರಗತಿ ಮಾತ್ರ, ಆದರೆ ಕೃಷಿಯಲ್ಲಿ ಉತ್ತಮ ಜ್ಞಾನ ಸಂಪಾದಿಸಿ, ಬಗೆ ಬಗೆಯ ಬೆಳೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನುರಿತ ಮತ್ತು ಮಾದರಿ ರೈತರಾಗಿ ಹೊರಹೊಮ್ಮಿದ್ದಾರೆ.

ಅವರ ಕುಟುಂಬಕ್ಕೆ ಸೇರಿದ 32 ಎಕರೆ ಜಮೀನು ಸುತ್ತಾಡಿದರೆ 3 ಎಕರೆ ಅಡಿಕೆ, 11 ಎಕರೆ ರಾಗಿ, ಕಟಾವು ಮಾಡಿರುವ 7 ಎಕರೆ ಮೆಕ್ಕೆಜೋಳ, 28 ಕುರಿಗಳಿರುವ ಫಾರಂ, 12 ಪೆಟ್ಟಿಗೆ ಜೇನು ಸಾಕಾಣಿಕೆ, 160 ತೆಂಗು, 30 ಗಿಡ ಪಪ್ಪಾಯಿ, 50 ನುಗ್ಗೆ, 140 ಮಾವು, 8 ಸಪೋಟ, 8 ಪೇರಲೆ, ಟೊಮಾಟೊ, ಸಪೋಟ, ಕರಿಬೇವು ಹೀಗೆ ಅಚ್ಚುಕಟ್ಟಾಗಿ ಬೆಳೆದಿರುವ ಹಲವು ವಿಧದ ಬೆಳೆಗಳು ಕಣ್ಮನ ಸೆಳೆಯುತ್ತವೆ.

ADVERTISEMENT

ಜೊತೆಗೆ ರಾಗಿ ಕ್ಲೀನಿಂಗ್ ಮತ್ತು ಪಾಲಿಶ್ ಮಾಡುವ ಯಂತ್ರ, ಕಾಳುಗಳಿಂದ ಎಣ್ಣೆ ತೆಗೆಯುವ ಮೆಷಿನ್ ಅಳವಡಿಸಿಕೊಂಡು ಪ್ರತಿ ತಿಂಗಳು ಆದಾಯ ಸಂಪಾದಿಸುತ್ತಿದ್ದು, ಒಂದು ಬೆಳೆ ನಷ್ಟ ಹೊಂದಿದರೆ, ಮತ್ತೊಂದು ಬೆಳೆ ನಮ್ಮ ಕುಟುಂಬದ ಕೈ ಹಿಡಿಯುತ್ತಿದೆ.

ನಮ್ಮ ತೋಟಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಆಗಮಿಸಿ ಸಲಹೆ ಮಾಡುತ್ತಿರುವಾಗ ಪ್ರಸಕ್ತ ವರ್ಷ ನ್ಯಾಷನಲ್ ಸೀಡ್ಸ್ ಕಾರ್ಪೊರೆಷನ್ ನಿಂದ ಬಂದಿದ್ದ ಜಿಆರ್‍ಜಿ 152 ಹೊಸ ತಳಿಯ ಬೀಜವನ್ನು ಪರಿಚಯಿಸಿದರು, ಅದೇ ಬೀಜವನ್ನು ಅಡಿಕೆ ಬೆಳೆಯಲ್ಲಿ ಅಂತರ ಬೆಳೆಯಾಗಿ ಹಾಕಿದ್ದ ತೊಗರಿ ಸೊಂಪಾಗಿ ಬೆಳೆದು 17 ಕ್ವಿಂಟಲ್ ಇಳುವರಿ ಬಂದಿದೆ. ಈಗ ಮಾರುಕಟ್ಟೆಯಲ್ಲಿ ಕ್ವಿಂಟಲ್ ವೊಂದಕ್ಕೆ ₹ 11 ಸಾವಿರದಿಂದ ₹ 12 ಸಾವಿರದವರೆಗೂ ಬೆಲೆ ಇದೆ. 7 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ 161 ಕ್ವಿಂಟಲ್ ಆಗಿದ್ದು, ಉತ್ತಮ ಬೆಲೆಗೆ ಮಾರಾಟ ಮಾಡಿದೆವು ಎಂದು ರವಿಚಂದ್ರ ಅವರು ಮಾಹಿತಿ ನೀಡಿದರು.

‘ಬೆಳೆಗಳಿಗೆ ರೋಗ ತಗುಲಿದಾಗ ಅದನ್ನು ಪೊಟೊ ತೆಗೆದು, ಕಳಿಸಿದರೆ ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ನಮ್ಮ ಹೊಲಕ್ಕೆ ಆಗಮಿಸಿ ಪರಿಶೀಲಿಸಿ ಪರಿಹಾರ ಸೂಚಿಸುತ್ತಾರೆ’ ಎನ್ನುತ್ತಾರೆ ರೈತ ಕೆ.ರವಿಚಂದ್ರ.

‘ಏಕ ಬೆಳೆಯಿಂದ ಬಹುಬೆಳೆ ಪದ್ದತಿಗೆ ರೈತರು ಒಗ್ಗಿಕೊಂಡಾಗ ಬೆಳೆಗಳಿಗೆ ಬರುವ ರೋಗಗಳನ್ನು ತಡೆಯಬಹುದು. ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಹೆಚ್ಚಿಸಬಹುದು ಎಂದು ತಾಲ್ಲೂಕಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವಿ.ಎಸ್‌.ಉಮೇಶ್‌ ತಿಳಿಸಿದರು.

ಹರಪನಹಳ್ಳಿ ತಾಲ್ಲೂಕು ಅನಂತನಹಳ್ಳಿಯ ತಮ್ಮ ಜಮೀನಿನಲ್ಲಿ ಕಟಾವು ಮಾಡಿರುವ ಟೊಮ್ಯಾಟೊ ಬಾಕ್ಸ್ ಗೆ ತುಂಬುತ್ತಿರುವ ರೈತ ಸಹೋದರರು
ಜಮೀನಿನಲ್ಲಿ ಅಳವಡಿಸಿರುವ ಜೇನು ಸಾಕಾಣಿಕೆ ಪೆಟ್ಟಿಗೆ ತೋರಿಸುತ್ತಿರುವ ರೈತ ರವಿಚಂದ್ರ
ಕೃಷಿಯಲ್ಲಿ ಯಶಸ್ಸಿಗೆ ವ್ಯವಸಾಯ ಮಾರುಕಟ್ಟೆಯ ಜ್ಞಾನವಿರಬೇಕು. ಈ ಕ್ಷೇತ್ರದಲ್ಲಿ ಸಾಧನೆಗೆ ಓದಿನ ಕೊರತೆ ಅಡ್ಡಿಯಾಗುವುದಿಲ್ಲ
ಕೆ.ರವಿಚಂದ್ರ ಪ್ರಗತಿ‍ಪರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.