ADVERTISEMENT

ಉತ್ತಮ ಬೆಲೆಯಿದ್ದರೂ ಭತ್ತ ಮಾರದ ರೈತರು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2023, 21:07 IST
Last Updated 30 ನವೆಂಬರ್ 2023, 21:07 IST
ತೆಕ್ಕಲಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮೀಪ ರೈತರು ಭತ್ತದ ಒಕ್ಕಲು ಮಾಡಿರುವುದು
ತೆಕ್ಕಲಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮೀಪ ರೈತರು ಭತ್ತದ ಒಕ್ಕಲು ಮಾಡಿರುವುದು   

ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ): ವರ್ಷಕ್ಕೆ ಎರಡು ಬಾರಿ ಭತ್ತ ಬೆಳೆಯುತ್ತಿದ್ದ ಸಿರುಗುಪ್ಪದ ರೈತರು, ಬರಗಾಲದಿಂದ ಒಂದೇ ಬೆಳೆಗೆ ಸೀಮಿತಗೊಂಡಿದ್ದಾರೆ. ಕಳೆದ ಸಲಕ್ಕಿಂತ ಭತ್ತಕ್ಕೆ ಹೆಚ್ಚಿನ ದರ ಇದ್ದರೂ ಭತ್ತ ಮಾರಾಟಕ್ಕೆ ರೈತರು ಮುಂದಾಗಿಲ್ಲ. ಇನ್ನೂ ಹೆಚ್ಚಿನ ಬೆಲೆಯ ನಿರೀಕ್ಷೆಯಲ್ಲಿದ್ದಾರೆ.

ಈ ಬಾರಿ ಸಮರ್ಪಕ ಮಳೆಯಾಗಿಲ್ಲ. ಜಲಾಶಯಗಳು ಭರ್ತಿಯಾಗಿಲ್ಲ. ಆದರೂ ರೈತರಿಗೆ ತುಸು ನೆಮ್ಮದಿ ನೀಡುವಷ್ಟು ಫಸಲು ಬಂದಿದೆ. ಆದರೆ, ಕೆಲ ದಿನಗಳಿಂದ ಮೋಡ ಕವಿದ ವಾತಾವರಣ ಮತ್ತು ಅಲ್ಲಲ್ಲಿ ಚದುರಿದ ಮಳೆಯಿಂದ ಮಾರುಕಟ್ಟೆಯಲ್ಲಿ ದರ ಏರಿಳಿಕೆಯಾಗುತ್ತಿದೆ. ಅದಕ್ಕೆ ರೈತರು ರಸ್ತೆ ಬದಿ, ಹೊಲಗದ್ದೆ ಮತ್ತು ಮೈದಾನಗಳಲ್ಲಿ ಭತ್ತ ರಾಶಿ ಹಾಕಿದ್ದಾರೆ.

ಭತ್ತ ಖರೀದಿ ಕೇಂದ್ರ ತೆರೆಯುವ ಪ್ರಯತ್ನದಲ್ಲಿರುವ ಸರ್ಕಾರವು ರೈತರಿಗೆ ಆನ್‌ಲೈನ್ ನೋಂದಣಿ ಮಾಡಲು ತಿಳಿಸಿದೆ. ಖರೀದಿ ಕೇಂದ್ರದಲ್ಲಿ ಸೋನಾ ಮಸೂರಿ ಭತ್ತದ ದರ ಪ್ರತಿ ಕ್ವಿಂಟಲ್‌ಗೆ ₹2,183 ಮತ್ತು ಗ್ರೇಡ್ ಎ-ಭತ್ತದ ದರ ಕ್ವಿಂಟಲ್‌ ₹2,203 ನಿಗದಿಯಾಗಿದೆ.

ADVERTISEMENT

‘ಕಳೆದ ವರ್ಷ ಪ್ರತಿ ಕ್ವಿಂಟಲ್‌ಗೆ ₹1,900ರಿಂದ ₹2,000ಕ್ಕೆ ಮಾರಾಟವಾಗುತ್ತಿದ್ದ ಭತ್ತ, ಈ ಸಲ ನವೆಂಬರ್ ಆರಂಭದಲ್ಲಿ ಆರ್‌ಎನ್‌ಆರ್ ಭತ್ತ ₹3,000 ಮತ್ತು ಸೋನಾ ಮಸೂರಿಗೆ ₹2,800 ದರ ಪ್ರತಿ ಕ್ವಿಂಟಲ್‌ಗೆ ದೊರೆಯುತ್ತಿದೆ’ ಎಂದು ರೈತರು ತಿಳಿಸಿದರು.

ಸಿರುಗುಪ್ಪ ತಾಲ್ಲೂಕಿನಲ್ಲಿ 100ಕ್ಕೂ ಹೆಚ್ಚು ಅಕ್ಕಿಗಿರಣಿಗಳಿದ್ದು, ಹೆಚ್ಚಿನ ದರಕ್ಕೆ ಭತ್ತ ಖರೀದಿಸಲು ಅಕ್ಕಿ ಗಿರಣಿ ಮಾಲೀಕರು ಸಿದ್ಧರಿದ್ದಾರೆ. ಆದರೆ, ರೈತರು ಮಾರಾಟಕ್ಕೆ ಮಾಡದೇ ಹೆಚ್ಚಿನ ದರದ ನಿರೀಕ್ಷೆಯಲ್ಲಿದ್ದಾರೆ.

‘ಬರ ಪರಿಸ್ಥಿತಿಯಿಂದ ಭತ್ತ ಹೆಚ್ಚಿನ ಪ್ರಮಾಣದಲ್ಲಿ ನಾಟಿ ಮಾಡಿಲ್ಲ ಮತ್ತು ಎರಡನೇ ಬೆಳೆಗೆ ನೀರು ಸಿಕ್ಕಿಲ್ಲ. ಮುಂದಿನ ಬೆಳೆ ಇಲ್ಲದ ಕಾರಣ ರೈತರಿಗೆ ಹಣದ ಅವಶ್ಯಕತೆ ಸದ್ಯಕ್ಕೆ ಇಲ್ಲ. ಇದರಿಂದ ರೈತರು ಭತ್ತ ಮಾರಾಟಕ್ಕೆ ಮುಂದಾಗುತ್ತಿಲ್ಲ’ ಎಂದು ಬಾಬ ಅಕ್ಕಿ ಗಿರಣಿ ಮಾಲೀಕ ಪೀರಸಾಬ್ ತಿಳಿಸಿದರು.ಈ ಬಾರಿ ಹಿಂಗಾರಿಗೆ ಭತ್ತದ ನಾಟಿ ಸಾಧ್ಯವಿಲ್ಲ. ಇದರಿಂದ ಭತ್ತಕ್ಕೆ ಹೆಚ್ಚಿನ ಬೆಲೆ ಸಿಗುವ ನಿರೀಕ್ಷೆ ಇದೆ. ಹೀಗಾಗಿ ರೈತರು ಭತ್ತದ ಮಾರಾಟಕ್ಕೆ ಮುಂದಾಗುತ್ತಿಲ್ಲ. ಅಕ್ಕಿ ಬೆಲೆ ಕ್ವಿಂಟಲ್‌ಗೆ ₹4800 ದಾಟುತ್ತದೆ –ಬೆಳಗಲ್ ಮಲ್ಲಿಕಾರ್ಜುನ ರೈತ ಮುಖಂಡ

ತೆಕ್ಕಲಕೋಟೆ ಸಮೀಪದ ಸಿರಿಗೇರಿ ದಾರಿಯಲ್ಲಿ ರೈತರು ಭತ್ತ ಒಣಗಿಸಿ ಚೀಲಗಳಲ್ಲಿ ಸಂಗ್ರಹಿಸಿರುವುದು
ಈ ಬಾರಿ ಹಿಂಗಾರಿಗೆ ಭತ್ತದ ನಾಟಿ ಸಾಧ್ಯವಿಲ್ಲ. ಇದರಿಂದ ಭತ್ತಕ್ಕೆ ಹೆಚ್ಚಿನ ಬೆಲೆ ಸಿಗುವ ನಿರೀಕ್ಷೆ ಇದೆ. ಹೀಗಾಗಿ ರೈತರು ಭತ್ತದ ಮಾರಾಟಕ್ಕೆ ಮುಂದಾಗುತ್ತಿಲ್ಲ. ಅಕ್ಕಿ ಬೆಲೆ ಕ್ವಿಂಟಲ್‌ಗೆ ₹4800 ದಾಟುತ್ತದೆ.
–ಬೆಳಗಲ್ ಮಲ್ಲಿಕಾರ್ಜುನ ರೈತ ಮುಖಂಡ
ಭತ್ತ ಬೆಳೆದ ರೈತರಿಗೆ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಹೆಚ್ಚಿನ ಬೆಲೆ ಖಾಸಗಿ ಖರೀದಿದಾರರಿಂದ ಸಿಗುತ್ತದೆ. ಹೀಗಾಗಿ ರೈತರು ಎಪಿಎಂಸಿ ಕೇಂದ್ರದಲ್ಲಿ ಭತ್ತ ಮಾರಾಟಕ್ಕೆ ಆಸಕ್ತಿ ತೋರುವುದಿಲ್ಲ.
–ಆಶಿಕ್ ಅಲಿ ಜಿಲ್ಲಾ ವ್ಯವಸ್ಥಾಪಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.