ADVERTISEMENT

ಉತ್ತಮ ಮಳೆ: ಭತ್ತ ನಾಟಿಗೆ ಸಿದ್ಧರಾದ ರೈತರು

ಗರಿಗೆದರಿದ ಮುಂಗಾರು ಕೃಷಿ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 5:38 IST
Last Updated 3 ಜುಲೈ 2024, 5:38 IST
ಕಂಪ್ಲಿ ತಾಲ್ಲೂಕು ದೇವಸಮುದ್ರ ಕ್ರಾಸ್ ಬಳಿಯ ಪಂಪ್‍ಸೆಟ್ ನೀರಾವರಿ ಆಧರಿತ ಗದ್ದೆಯಲ್ಲಿ ಭತ್ತದ ಸಸಿ ಬೆಳೆಯಲಾಗಿದ
ಕಂಪ್ಲಿ ತಾಲ್ಲೂಕು ದೇವಸಮುದ್ರ ಕ್ರಾಸ್ ಬಳಿಯ ಪಂಪ್‍ಸೆಟ್ ನೀರಾವರಿ ಆಧರಿತ ಗದ್ದೆಯಲ್ಲಿ ಭತ್ತದ ಸಸಿ ಬೆಳೆಯಲಾಗಿದ   

ಕಂಪ್ಲಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಮುಂಗಾರು ಭತ್ತ ನಾಟಿಗೆ ಪೂರ್ವ ಸಿದ್ಧತೆ ಶುರುವಾಗಿದೆ.

ಇಲ್ಲಿಯ ತುಂಗಭದ್ರಾ ನದಿ, ತುಂಗಭದ್ರಾ ಬಲದಂಡೆ ಕೆಳಮಟ್ಟ, ಮೇಲ್ಮಟ್ಟ, ವಿಜಯನಗರ ಕಾಲುವೆ, ವಿವಿಧ ಕೆರೆ ನೀರಾವರಿ, ಬಾವಿ, ಕೊಳವೆಬಾವಿ ಮತ್ತು ಏತ ನೀರಾವರಿ ವ್ಯಾಪ್ತಿಯ ಗದ್ದೆಗಳಲ್ಲಿ ನಾನಾ ತಳಿಯ ಭತ್ತ ನಾಟಿಗೆ ಪ್ರಾಥಮಿಕ ತಯಾರಿ, ಉಳುಮೆ ಕಾರ್ಯಗಳು ಭರದಿಂದ ಸಾಗಿದೆ.

ಗದ್ದೆಯ ಒಂದು ಭಾಗದಲ್ಲಿ ಸೋನಾ ಮಸೂರಿ, ಆರ್.ಎನ್.ಆರ್, ನೆಲ್ಲೂರು ಸೋನಾ,  1010 (ಐ.ಆರ್–64) ತಳಿಯ ಸಸಿ ಈಗಾಗಲೇ ಬಿತ್ತನೆ ಆಗಿದೆ. ಪಂಪ್‍ಸೆಟ್, ಕೊಳವೆಬಾವಿ ಆಧರಿಸಿ ನೀರಾವರಿ ಮಾಡುವ ರೈತರು ಭತ್ತ ನಾಟಿಗೆ ಮುನ್ನ ಗದ್ದೆಯ ಮಣ್ಣಿನ ಫಲವತ್ತತೆಗಾಗಿ ಹಸಿರೆಲೆ ಗೊಬ್ಬರಗಳಾದ ಸೆಣಬು, ಡಯಾಂಚ, ಪಿಳ್ಳೆಪೆಸರುಗಳನ್ನು ಕೆಲ ದಿನಗಳಿಂದ ಬೆಳೆದಿದ್ದಾರೆ.

ADVERTISEMENT

ತಾಲ್ಲೂಕಿನ ರಾಮಸಾಗರ, ನಂ.10 ಮುದ್ದಾಪುರ, ಕಂಪ್ಲಿ ಕೋಟೆ ಹಳೇ ಮಾಗಾಣಿ, ಬೆಳಗೋಡುಹಾಳು, ಸಣಾಪುರ, ಇಟಗಿ, ನಂ.2 ಮುದ್ದಾಪುರ ಸೇರಿದಂತೆ ನದಿ ಪಾತ್ರದ ಇತರೆ ಗ್ರಾಮಗಳಲ್ಲಿ 8,870 ಹೆಕ್ಟೇರ್ ಪ್ರದೇಶ ಮತ್ತು ತುಂಗಭದ್ರಾ ಬಲದಂಡೆ ಕೆಳಮಟ್ಟ ಕಾಲುವೆ ವ್ಯಾಪ್ತಿಯಲ್ಲಿ ಸುಮಾರು 6,685 ಹೆಕ್ಟೇರ್, ತುಂಗಭದ್ರಾ ಬಲದಂಡೆ ಮೇಲ್ಮಟ್ಟ ಕಾಲುವೆ ವ್ಯಾಪ್ತಿಯಲ್ಲಿ ಅಂದಾಜು 6,174 ಹೆಕ್ಟೇರ್‌ನಲ್ಲಿ ಭತ್ತ ನಾಟಿ ಮಾಡಲಾಗುತ್ತದೆ.

ತುಂಗಭದ್ರಾ ಜಲಾಶಯದ ನೀರಿನ ಕೊರತೆಯಿಂದ ಕಳೆದ ಹಂಗಾಮಿನಲ್ಲಿ ಒಂದೇ ಬೆಳೆ ಬೆಳೆಯಲು ಸಾಧ್ಯವಾಯಿತು. ಮಾರುಕಟ್ಟೆಯಲ್ಲಿ ಭತ್ತಕ್ಕೆ ಉತ್ತಮ ಧಾರಣೆ ಲಭ್ಯವಾಗಿತ್ತು. ಈ ವರ್ಷ ಮುಂಗಾರು ಆಶಾದಾಯಕವಾಗಿದ್ದು, ಎಲ್ಲ ರೈತರ ಚಿತ್ತ ದಿನ ನಿತ್ಯ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹದತ್ತ ನೆಟ್ಟಿದೆ.

ಬೀಜೋಪಚಾರ ಕಡ್ಡಾಯ: ಭತ್ತ ನಾಟಿಗೆ ಮೊದಲು ಗದ್ದೆಗೆ ಹೆಚ್ಚಿನ ಪ್ರಮಾಣದ ಕೊಟ್ಟಿಗೆ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರವನ್ನು ಉಪಯೋಗಿಸಬೇಕು. ಭತ್ತದ ಸಸಿ ಬೆಳೆಯುವ ಮುನ್ನ ರೋಗ ರಹಿತ ಬಿತ್ತನೆ ಬೀಜಗಳನ್ನು ಖರೀದಿಸಬೇಕು. ಪ್ರತಿ ಕಿ.ಗ್ರಾಂ ಬಿತ್ತನೆ ಬೀಜಕ್ಕೆ ಕಾರ್ಬೆಂಡೆಜಿಮ್, ಮ್ಯಾಂಕೋಜೆಬ್ ಅಥವಾ ಟ್ರೈಸೈಕ್ಲೋಜೋಲ್, ಸ್ಪ್ರೆಪ್ಟೋಸೈಕ್ಲಿನ್ ತಾಮ್ರದ ಆಕ್ಸಿಕ್ಲೋರೆಡ್ (2 ಗ್ರಾಂ) ಶಿಲೀಂಧ್ರನಾಶಕದಿಂದ ಕಡ್ಡಾಯವಾಗಿ ಬೀಜೋಪಚಾರ ಮಾಡಿ ಬಿತ್ತನೆಗೆ ಉಪಯೋಗಿಸಬೇಕು’ ಎಂದು ಕಂಪ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಧರ ಸಲಹೆ ನೀಡಿದ್ದಾರೆ.

ಕಂಪ್ಲಿ ತಾಲ್ಲೂಕು ನೆಲ್ಲೂಡಿ ಗ್ರಾಮದ ರೈತ ಗೋಪಾಲಕೃಷ್ಣ ಭತ್ತ ನಾಟಿಗೆ ಮುನ್ನ ಬೆಳೆದಿರುವ ಹಸಿರೆಲೆ ಗೊಬ್ಬರವಾದ ಡಯಾಂಚವನ್ನು ಕೃಷಿ ಅಧಿಕಾರಿ ಶ್ರೀಧರ್ ಪರಿಶೀಲಿಸಿದರು

‘ಬಿತ್ತನೆ ಬೀಜದ ದರ ಹೆಚ್ಚಳ ಹಿಂಪಡೆಯಿರಿ’ ‘ಕಳೆದ ಸಾಲಿನಲ್ಲಿ ಹಿಂಗಾರು ಬೆಳೆ ಇಲ್ಲದೆ ಜೊತೆಗೆ ಬರದಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸಿದ್ದಾರೆ. ಈ ಮಧ್ಯೆ ಭತ್ತದ ಬೀಜದ ದರ ಏರಿಕೆ ಮಾಡಿದ್ದರಿಂದ ಕಷ್ಟವಾಗಿದೆ. ಸರ್ಕಾರ ಪರಿಶೀಲಿಸಿ ಕಳೆದ ವರ್ಷದ ದರದಲ್ಲಿ ಭತ್ತದ ಬೀಜ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ. ಗೌಡ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.