ಕೊಟ್ಟೂರು: ಗೌರಿ ಹಬ್ಬ ಬಂತೆಂದರೆ ಉತ್ತರ ಕರ್ನಾಟಕದಲ್ಲಿ ಹೆಣ್ಣು ಮಕ್ಕಳಿಗೆ ಸಂಭ್ರಮ. ಸೀಗಿ ಹುಣ್ಣಿಮೆಯಂದು ಸಣ್ಣ ಗೌರಿ ಹಬ್ಬ, ಗೌರಿ ಹುಣ್ಣಿಮೆಗೆ ದೊಡ್ಡಗೌರಿ ಹಬ್ಬವೆಂದು ಆಚರಿಸುವುದು ಇಲ್ಲಿಯ ವಾಡಿಕೆ.
ಈ ಹಬ್ಬದ ವಿಶೇಷವೆಂದರೆ ಬಣ್ಣಬಣ್ಣದ ಸಕ್ಕರೆ ಆರತಿಗಳನ್ನು ಹೆಣ್ಣು ಮಕ್ಕಳು ತಟ್ಟೆಯಲ್ಲಿಟ್ಟುಕೊಂಡು ಗೌರಿಗೆ ಬೆಳಗುತ್ತಾರೆ. ಆರತಿ ಬೆಳಗಿದ ನಂತರ ಸಹೋದರರು, ಮಾವಂದಿರು ಹಣವನ್ನು ಉಡುಗೊರೆಯಾಗಿ ನೀಡುವ ಪದ್ದತಿಯು ಇದೆ.
ಗ್ರಾಮೀಣ ಪ್ರದೇಶಗಳಲ್ಲಿ ಹುಡುಗಿಯರು ಗೌರಿ ಮಕ್ಕಳಾಗಿ ಊರಿನ ದ್ವಾರಬಾಗಿಲು ರಸ್ತೆಯಲ್ಲಿ ಬಣ್ಣದ ಕೋಲುಗಳೊಂದಿಗೆ ಗೌರಿ ಪದಗಳನ್ನು ಹಾಡುತ್ತಾ ಗ್ರಾಮಕ್ಕೆ ಬಂದು ಹೋಗುವ ಪ್ರಯಾಣಿಕರನ್ನು ತಡೆಗಟ್ಟಿ ಅವರಿಂದ ಹಣ ಪಡೆಯುತ್ತಾರೆ.
ಕಟ್ಟಿಗೆಗಳಿಂದ ನಿರ್ಮಿಸಿದ ಅಚ್ಚು ಪಡಿಗಳಲ್ಲಿ ಹದವಾದ ಸಕ್ಕರೆ ಪಾಕ ಹಾಕುವುದರ ಮೂಲಕ ಆರತಿ ತಯಾರು ಮಾಡುತ್ತಾರೆ. ವಿವಿಧ ರೀತಿಯ ಅಚ್ಚುಗಳಿಂದ ವೈವಿಧ್ಯಮಯ ಆಕಾರಗಳ ಬಣ್ಣ ಬಣ್ಣದ ಗೊಂಬೆ ತಯಾರಿಸುತ್ತೇವೆ ಎನ್ನುತ್ತಾರೆ ಬಿ.ಎಂ.ಜಿ.ಶಿವಶಂಕರಸ್ವಾಮಿ.
ಪ್ರತಿ ತಯಾರಕರು ಸುಮಾರು 20 ರಿಂದ 30 ಕ್ವಿಂಟಲ್ ಸಕ್ಕರೆಯಿಂದ ಆರತಿ ತಯಾರಿಸುತ್ತೇವೆ. ಒಂದು ಕ್ವಿಂಟಲ್ ಸಕ್ಕರೆಗೆ 90 ಕೆಜಿ ಸಕ್ಕರೆ ಆರತಿಗಳಾಗುತ್ತಿದ್ದು ಒಂದು ಕೆಜಿ ಆರತಿಗೆ 100 ರಿಂದ 120 ರೂ ಗೆ ಮಾರುತ್ತೇವೆ ಎಂದು ತಯಾರಕರಾದ ಕರೂರು ಮಹಾಂತೇಶ್ ಹೇಳುತ್ತಾರೆ.
ಗೌರಿ ಹುಣ್ಣಿಮೆಯ ನಂತರ ಐದನೇ ದಿನದ ವಿಶೇಷವೇನೆಂದರೆ ಸಜ್ಜೆರೊಟ್ಟಿ, ಪುಡಿಚಟ್ನಿ, ಬುತ್ತಿ ಹಾಗೂ ಸಿಹಿ ತಿನಿಸುಗಳನ್ನು ತಯಾರಿಸಿ ಬೆಳದಿಂಗಳಿನಲ್ಲಿ ಮನೆಯ ಮಾಳಿಗೆಗಳ ಮೇಲೆ ಸಹಭೋಜನ ಮಾಡುವುದಕ್ಕೆ ‘ಕುಂತಿ ರೊಟ್ಟಿ ಹಬ್ಬ’ ಎಂದು ಕರೆಯುವ ಪ್ರತೀತಿ ಇದೆ. ಇದರೊಂದಿಗೆ ಹಬ್ಬದ ಆಚರಣೆ ಸಂಪನ್ನಗೊಳ್ಳುತ್ತದೆ.
ಗ್ರಾಮೀಣ ಪ್ರದೇಶದ ಇಂತಹ ಹಬ್ಬ ಆಚರಣೆಗಳು ಕ್ರಮೇಣ ಕಣ್ಮರೆಯಾಗುತ್ತಿವೆ. ಆಧುನಿಕತೆಗೆ ಮಾರು ಹೋಗಿರುವ ಇಂದಿನ ಜನತೆ ಇಂತಹ ಸಾಂಪ್ರದಾಯಿಕ ಆಚರಣೆಗಳನ್ನು ನಡೆಸುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ಮನೋಭಾವ ಎಲ್ಲರಲ್ಲೂ ಮೂಡಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.