ಬಳ್ಳಾರಿ: 1952ರಿಂದ ಆರಂಭವಾದ ಮೊದಲ ಲೋಕಸಭೆ ಚುನಾವಣೆಯಿಂದ 1962ರವರೆ ಸತತ ಮೂರು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದ ಟೇಕೂರು ಸುಬ್ರಹ್ಮಣ್ಯಂ ಮೊದಲ ಚುನಾವಣೆಗಾಗಿ ₨ 8,500 ಖರ್ಚು ಮಾಡಿದ್ದರು. ಮೂರು ಚುನಾವಣೆಗಳ ಖರ್ಚಿನ ಸಲುವಾಗಿ ತಮ್ಮ ಹತ್ತಾರು ಎಕರೆ ಜಮೀನು ಮಾರಾಟ ಮಾಡಿದ್ದರು!
ಗಾಂಧೀವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಸುಬ್ರಹ್ಮಣ್ಯಂ, ಚುನಾವಣೆ ವೆಚ್ಚವನ್ನು ಭರಿಸಲು ಆಗುವುದಿಲ್ಲ ಎಂಬ ಕಾರಣಕ್ಕೇ ತಮ್ಮ ಮೂರನೇ ಚುನಾವಣೆಯ ಸಂದರ್ಭವೇ ತಮ್ಮ ಕೊನೆಯ ಚುನಾವಣೆ ಎಂದು ಘೋಷಿಸಿದ್ದರು. ಎರಡನೇ ಚುನಾವಣೆಯಲ್ಲಿ ಸುಮಾರು ₹ 13 ಸಾವಿರ, ಮೂರನೇ ಚುನಾವಣೆಯಲ್ಲಿ ಸುಮಾರು ₹ 24 ಸಾವಿರ ಖರ್ಚಾಗಿತ್ತು. ಆಗ ಬಳ್ಳಾರಿ ಸಾಮಾನ್ಯ ಕ್ಷೇತ್ರವಾಗಿತ್ತು.
ಸತತ ಮೂರು ಬಾರಿ ಗೆಲ್ಲಲು ಏನು ಕಾರಣ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರ ಮಗ ಡಾ.ಟೇಕೂರು ರಾಮನಾಥ್, ‘ಅವರ ಜನಪ್ರಿಯತೆ ಹಾಗಿತ್ತು. ಜೊತೆಗೆ ಕಾಂಗ್ರೆಸ್ ಅನ್ನು ಜನ ಎಲ್ಲೆಡೆ ಬೆಂಬಲಿಸುತ್ತಿದ್ದರು’ ಎಂದು ಪ್ರತಿಕ್ರಿಯಿಸಿದರು.
‘ಇದ್ದ ಒಂದೇ ಒಂದು ಜೀಪಿನಲ್ಲಿ ತಂದೆಯವರು ಪ್ರಚಾರ ಮಾಡುತ್ತಿದ್ದರು. ಕರಪತ್ರವನ್ನು ಹಂಚುತ್ತಿದ್ದರು, ಅಲ್ಲಲ್ಲಿ ಪೋಸ್ಟರ್ ಅಂಟಿಸುತ್ತಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಟವೇ ಅವರನ್ನು ಗೆಲ್ಲಿಸುತ್ತಿತ್ತು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
‘ಹೊಸಪೇಟೆ, ಸಿರುಗುಪ್ಪ, ಕಣೇಕಲ್‌ನಲ್ಲಿ ನೀರಾವರಿ ಜಮೀನುಗಳಿದ್ದವು. ಯಾಳ್ಪಿ, ಮೋಕಾ, ರಾಯದುರ್ಗದಲ್ಲಿ ಒಣಭೂಮಿ ಇತ್ತು. ಮೊದಲ ಚುನಾವಣೆಯ ಕಾಲಕ್ಕೆ ಅವುಗಳ ಪೈಕಿ ಕೆಲವು ಜಮೀನುಗಳನ್ನು ಮಾರಿದ್ದರು. ನಂತರದ ಚುನಾವಣೆಗಳಲ್ಲೂ ಅದೇ ರೀತಿಯಾಯಿತು. ನಮ್ಮ ಸಾರಿಗೆ ಉದ್ಯಮವನ್ನೂ ನಿಲ್ಲಿಸಬೇಕಾಯಿತು. ನಂತರ, ಚುನಾವಣೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ ಎಂದು ಹೇಳುತ್ತಿದ್ದರು’ ಎಂದು ಸ್ಮರಿಸಿದರು.
ಸೋತರೂ ಸೌಹಾರ್ದ
ಮೊದಲ ಎರಡು ಚುನಾವಣೆಗಳಲ್ಲಿ ಸುಬ್ರಹ್ಮಣ್ಯಂ ಅವರಿಗೆ ಪಕ್ಷೇತರರಾಗಿ ವೈ.ಮಹಾಬಲೇಶ್ವರಪ್ಪ ಸಮೀಪ ಸ್ಪರ್ಧೆ ನೀಡಿದ್ದರು. ಸೋತರೂ, ಇಬ್ಬರ ನಡುವೆ ಸೌಹಾರ್ದಕ್ಕೇನೂ ಕೊರತೆ ಇರಲಿಲ್ಲ.
‘ಚುನಾವಣೆಗೆ ಸ್ಪರ್ಧಿಸುವ ಮುನ್ನ ಮಹಾಬಲೇಶ್ವರಪ್ಪ ಅವರು ನಮ್ಮ ಮನೆಗೆ ಬಂದು ತಂದೆಯವರಿಗೆ ಹೇಳುತ್ತಿದ್ದರು. ತಂದೆಯವರು ತಾವೂ ಸ್ಪರ್ಧಿಸುವುದಾಗಿ ಹೇಳುತ್ತಿದ್ದರು. ಇಂಥ ಸೌಹಾರ್ದ ಈಗ ಎಲ್ಲಿ ನೋಡೋದು?’ ಎಂದು ಡಾ.ರಾಮನಾಥ್ ವಿಷಾದಿಸಿದರು.
ಮೂರನೇ ಚುನಾವಣೆಯಲ್ಲಿ ಸುಬ್ರಹ್ಮಣ್ಯಂ ಅವರಿಗೆ ಸಮೀಪ ಸ್ಪರ್ಧೆ ನೀಡಿದ್ದ ಜಗಳೂರು ಮಹ್ಮದ್ ಇಮಾಂ ಅವರೂ ತಂದೆಯವರೊಂದಿಗೆ ಉತ್ತಮ ಸೌಹಾರ್ದ ಹೊಂದಿದ್ದರು ಎಂದು ರಾಮನಾಥ್ ತಿಳಿಸಿದರು.
ಟೇಕೂರ್ ಟ್ರಾನ್ಸ್‌ಪೋರ್ಟ್ ಸರ್ವೀಸ್!
ಆಗಿನ ಕಾಲಕ್ಕೆ ಬಳ್ಳಾರಿಯ ಕೆಲವೇ ಶ್ರೀಮಂತರೆಂದು ಖ್ಯಾತರಾಗಿದ್ದ ಸುಬ್ರಹ್ಮಣ್ಯಂ ಟೇಕೂರ್ ಟ್ರಾನ್ಸ್‌ಪೋರ್ಟ್ ಸರ್ವೀಸ್ ಎಂಬ ಸಾರಿಗೆ ಉದ್ಯಮವನ್ನು ನಡೆಸುತ್ತಿದ್ದರು. ಅವರ ಬಳಿ ಇದ್ದ ಮೂರು ಬಸ್‌ಗಳು ಬಳ್ಳಾರಿ–ಕೂಡ್ಲಿಗಿ, ಬಳ್ಳಾರಿ –ರಾಯದುರ್ಗ ಮತ್ತು ಬಳ್ಳಾರಿ– ಹೊಸಪೇಟೆ ನಡುವೆ ಸಂಚರಿಸುತ್ತಿದ್ದವು.
ಬಸ್‌ಗಳಷ್ಟೇ ಅಲ್ಲದೇ, ಸರಕು ಸಾಗಣೆಯ ಎರಡು ಲಾರಿಗಳೂ ಅವರ ಬಳಿ ಇದ್ದವು. ಮಡ್ರಾಸ್ ಪ್ರೆಸಿಡೆನ್ಸಿ ವ್ಯಾಪ್ತಿಯ ಎಲ್ಲ ಊರುಗಳಿಗೂ ಈ ಲಾರಿಗಳು ಸಂಚರಿಸುತ್ತಿದ್ದವು ಎಂದು ಸುಬ್ರಹ್ಮಣ್ಯಂ ಅವರ ಮಗ ಡಾ.ರಾಮನಾಥ್ ಸ್ಮರಿಸಿದರು.
ಸಚಿವ ಸ್ಥಾನ ನಿರಾಕರಿಸಿದ್ದರು!
ಸ್ವಾತಂತ್ರ್ಯ ಹೋರಾಟದ ಮಂಚೂಣಿಯಲ್ಲಿದ್ದ ಕಾರಣಕ್ಕೇ ಮಹಾತ್ಮಾ ಗಾಂಧೀಜಿ, ಜವಹರಲಾಲ್ ನೆಹರು ಅವರೊಂದಿಗೆ ಸುಬ್ರಹ್ಮಣ್ಯಂ ನೇರ ಸಂಪರ್ಕದಲ್ಲಿದ್ದರು.
1952 ಚುನಾವಣೆ ಬಳಿಕ ಅವರು ಕಾಂಗ್ರೆಸ್ ಪಕ್ಷದ ಸಂಸದೀಯ ಕಾರ್ಯದರ್ಶಿಯಾಗಿದ್ದರು. 1956–58ರ ಅವಧಿಯಲ್ಲಿ ನೆಹರು ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದರು.
’ನೆಹರು ನಿಧನದ ಬಳಿಕ, ಲಾಲ್ ಬಹದೂರ್ ಶಾಸ್ತ್ರಿ ಪ್ರಧಾನಿಯಾದಾಗ, ಸಚಿವ ಸಂಪುಟಕ್ಕೆ ಸೇರುವಂತೆ ಸುಬ್ರಹ್ಮಣ್ಯಂ ಅವರಿಗೆ ಆಹ್ವಾನ ನೀಡಿದ್ದರು. ಆದರೆ, ರಾಜ್ಯದ ರಾಜಕೀಯ ಮುಖಂಡರ ಬೆಂಬಲವಿಲ್ಲ ಎಂಬ ಕಾರಣಕ್ಕೆ ಅವರು ಅದನ್ನು ನಯವಾಗಿಯೇ ನಿರಾಕರಿಸಿದ್ದರು. ಶಾಸ್ತ್ರಿ ರೈಲ್ವೆ ಸಚಿವರಾಗಿದ್ದಾಗ ಒಮ್ಮೆ ನಮ್ಮ ಮನೆಗೆ ಭೇಟಿ ನೀಡಿದ್ದರು’ ಎಂದು ರಾಮನಾಥ್ ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.