ಸಂಡೂರು: ಸಂಡೂರು ಅರಣ್ಯ ಸಂಪತ್ತಿನ ಉಳಿವಿಗೆ ಗಣಿಗಾರಿಕೆ, ಗಣಿಯ ದೂಳು ಕಂಟಕವಾದರೆ ಈಚಿನ ದಿನಗಳಲ್ಲಿ ಕಾಡ್ಗಿಚ್ಚಿನ ಹೊಡೆತ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಿಡಿಗೇಡಿಗಳ ಕೃತ್ಯದಿಂದಾಗಿ ಎಲ್ಲಾ ಮುಂಜಾಗ್ರತಾ ಕ್ರಮಗಳ ಮಧ್ಯೆಯೂ ಕಾಡಿನ ಸಂರಕ್ಷಣೆ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಮುಂದಿನ ಬೇಸಿಗೆಯಲ್ಲಿ ಬೆಂಕಿ ತಡೆಗೆ ಅರಣ್ಯ ಇಲಾಖೆ ಮತ್ತೊಮ್ಮೆ ಪೂರಕ ತಯಾರಿ ಆರಂಭಿಸಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಕಾಡ್ಗಿಚ್ಚು ತಡೆಗೆ ಪ್ರತಿವರ್ಷವೂ ತನ್ನದೇ ರೀತಿಯಲ್ಲಿ ಸಿದ್ಧರಾಗುತ್ತಾರೆ. ಈ ಬಾರಿಯೂ ಅರಣ್ಯದಲ್ಲಿ ಫೈರ್‌ಲೈನ್ ನಿರ್ಮಿಸುವ ಕಾರ್ಯ ಆರಂಭವಾಗಿದೆ. ಆಯಾ ಪ್ರದೇಶಗಳ ಗಣಿ ಕಂಪನಿಯಿಂದಲೂ ಸಿಬ್ಬಂದಿಯನ್ನು ಒದಗಿಸಿ ಕಣ್ಗಾವಲು ಇರಿಸಲಾಗುತ್ತದೆ. ವಾಚ್ ಟವರ್‌ಗಳನ್ನು ಬಳಸಿಕೊಂಡು ನಿಗಾ ಇಡಲಾಗುತ್ತದೆ. ಜೊತೆಗೆ ಕೆಎಸ್‌ಆರ್‌ಎಸ್‌ಎಸಿ (ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್‌ಗಳ ಕೇಂದ್ರ) ಸಹಯೋಗದಲ್ಲಿ ಸ್ಯಾಟಲೈಟ್ ತಂತ್ರಜ್ಞಾನ ಬಳಸಿ ಎಚ್ಚರಿಕೆ ವಹಿಸಲಾಗುವುದು. ತಂಡಗಳನ್ನು ರಚಿಸಿ ವಾಹನಗಳ ಮೂಲಕ ಗಸ್ತು ನಡೆಸಲಾಗುತ್ತದೆ. ಆದಾಗ್ಯೂ ವರ್ಷದಿಂದ ವರ್ಷಕ್ಕೆ ಕಿಡಿಗೇಡಿಗಳ ಕೃತ್ಯ ಹೆಚ್ಚುತ್ತಲೇ ಇದೆ.
ಸಾವಿರಾರು ಹೆಕ್ಟೇರ್ ಪ್ರದೇಶ ಆಹುತಿ:
ಕಳೆದ ಸಾಲಿನಲ್ಲಿ ಇಲ್ಲಿನ ಉತ್ತರ ಮತ್ತು ದಕ್ಷಿಣ ವಲಯದ ಅರಣ್ಯ ಪ್ರದೇಶದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ದಕ್ಷಿಣ ವಲಯದ ತಾರಾನಗರ, ಗೊಲ್ಲಲಿಂಗಮ್ಮನಹಳ್ಳಿ ಪ್ರದೇಶದಲ್ಲಿ ಹೆಚ್ಚು ಪ್ರದೇಶ ಆಹುತಿಯಾಗಿದ್ದರೆ, ಉತ್ತರ ವಲಯದ ವೆಂಕಟಗಿರಿ, ಸುಶೀಲಾನಗರ, ಸಿದ್ದಾಪುರ, ತಾರಾನಗರ ಹಾಗೂ ಜೋಗದ ಬಳಿ ಬೆಂಕಿ ಹೆಚ್ಚಾಗಿ ಕಾಣಿಸಿಕೊಂಡಿತ್ತು. ಬಾಬಯ್ಯ ಕ್ರಾಸ್ ಪ್ರದೇಶ ಒಳಗೊಂಡಂತೆ ಕೃಷ್ಣಾನಗರದ ಬಳಿ ಕಾಣಿಸಿಕೊಂಡ ಬೆಂಕಿ ಸಂಡೂರು ಪಟ್ಟಣಕ್ಕೆ ಬೆಳಕು ನೀಡುವಷ್ಟು ತೀವ್ರವಾಗಿತ್ತು. ಘಟನೆ ಸಂಬಂಧ ಕೆಲವು ಜನರ ಮೇಲೆ ಪ್ರಕರಣವನ್ನೂ ಅಧಿಕಾರಿಗಳು ದಾಖಲಿಸಿದ್ದರು.
ಅರಣ್ಯ ಸಂರಕ್ಷಣೆ ಸವಾಲಿನ ಕೆಲಸ:
ಕಾಡಿಗೆ ಬೆಂಕಿ ಬಿದ್ದರೆ ಹೊಸ ಹುಲ್ಲು ಚಿಗುರುತ್ತದೆ. ಇದರಿಂದ ದನಕರುಗಳಿಗೆ ಅನುಕೂಲವೆಂದು ಕಾಡಿಗೆ ಬೆಂಕಿ ಹಚ್ಚಲಾಗುತ್ತದೆ ಎಂಬ ಆರೋಪವಿದೆ. ಅರಣ್ಯ ಹೆಚ್ಚಾದರೆ ಕಾಡು ಪ್ರಾಣಿಗಳ ಸಂತತಿ ವೃದ್ಧಿಸಿ ತೊಂದರೆಯಾಗುತ್ತದೆ ಎಂಬುದು ಬೆಂಕಿ ಹಾಕಲು ಇರುವ ಮತ್ತೊಂದು ಕಾರಣ. ಕಿಡಿಗೇಡಿಗಳು ತಮ್ಮ ವಿಕೃತಿಗಾಗಿ ಕಡ್ಡಿಗೀರುವುದುಂಟು. ಕೆಲವೆಡೆ ಅದು ಆಕಸ್ಮಿಕವೂ ಆಗಿರಬಹುದು. ಅರಣ್ಯದಂಚಿನ ರೈತರು ತಮ್ಮ ಜಮೀನಿನ ಕೃಷಿ ತ್ಯಾಜ್ಯಕ್ಕೆ ಹಚ್ಚಿದ ಬೆಂಕಿ ಅರಣ್ಯಕ್ಕೆ ಹರಡುವುದುಂಟು. ಆದರೆ ಇದನ್ನು ತಡೆಯುವಲ್ಲಿ ಅರಣ್ಯ ಇಲಾಖೆ ಅಸಹಾಯಕವಾಗಿದೆ. ಈ ಕುರಿತು ಗ್ರಾಮಗಳಲ್ಲಿ ಜಾಗೃತಿ ಸಂದೇಶದ ಬ್ಯಾನರ್‌ಗಳು, ಬೀದಿನಾಟಕಗಳ ಮೂಲಕ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರೂ ಪ್ರಯೋಜನ ಆಗುತ್ತಿಲ್ಲ. ಸಂರಕ್ಷಿತ ಅರಣ್ಯವಾದರೂ ಗಣಿಗಾರಿಕೆ ಸಕ್ರಿಯವಾಗಿರುವುದರಿಂದ ಗಣಿಕಾರ್ಮಿಕರೂ ಓಡಾಡುತ್ತಾರೆ. ಈ ಬಗ್ಗೆ ಗಣಿಪ್ರದೇಶದಲ್ಲೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.
ಅವಶ್ಯಕ ಎಲ್ಲಾ ಮುಂಜಾಗ್ರತಾ ಕ್ರಮಗಳ ಮಧ್ಯೆಯೂ ಬೆಂಕಿ ತಡೆ ತ್ರಾಸದಾಯಕವಾಗಿದೆ. ನೇರವಾಗಿ ಬೆಂಕಿ ಹಚ್ಚಿ ಅರಣ್ಯ ಸುಡಲು ಮುಂದಾಗುವವರನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಆದರೆ ಕಿಡಿಗೇಡಿಗಳು ಸೊಳ್ಳೆ ಬತ್ತಿಯನ್ನು ಇಟ್ಟು ಆ ಸ್ಥಳದಿಂದ ನಿರ್ಗಮಿಸುತ್ತಾರೆ. ಎಷ್ಟೋ ಗಂಟೆಗಳ ನಂತರ ಅಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಆಗ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ಹಚ್ಚಿದವರನ್ನು ಹುಡುಕಿದರೆ ಅಲ್ಲಿ ಯಾರೂ ಇರುವುದಿಲ್ಲ. ಅರಣ್ಯ ಸಂರಕ್ಷಣೆಗೆ ಕೇವಲ ಇಲಾಖೆ ಸಿಬ್ಬಂದಿ ಮಾತ್ರವಲ್ಲ, ಸಾರ್ವಜನಿಕರ ಸಹಕಾರವೂ ಮುಖ್ಯ ಎನ್ನುತ್ತಾರೆ ಅಧಿಕಾರಿಗಳು.
ಈ ಬಾರಿ ಗಣಿಪ್ರದೇಶದಲ್ಲಿ ಪ್ರತಿ ಕಂಪನಿಗೂ ಸುಮಾರು ಒಂದು ಕಿಲೋಮೀಟರ್ ಸುತ್ತಳತೆ ಪ್ರದೇಶದಲ್ಲಿ ಬೆಂಕಿ ತಡೆಗೆ ಜವಬ್ದಾರಿ ನೀಡಲಾಗುತ್ತಿದೆ. ಆಯ್ದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಸಿದ್ಧತೆ ನಡೆಸಿದ್ದೇವೆ.–ಸಂದೀಪ್ ಸೂರ್ಯವಂಶಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಳ್ಳಾರಿ
ಪ್ರತೀ ವರ್ಷ 10 ಮೀಟರ್ ಫೈರ್ ಲೈನ್ ಮಾಡಲಾಗುತ್ತಿತ್ತು. ಈ ಸಲ 25 ಮೀಟರ್ ಅಗಲ ಮಾಡಲಾಗುತ್ತಿದೆ. ಸ್ಪಂದಿಸಲು ಜನರಿಗೂ ಮನವಿ ಮಾಡುತ್ತೇವೆ. ಕೃತ್ಯಕ್ಕೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು–ಸಯ್ಯದ್ ದಾದಾ ಖಲಂದರ್, ಆರ್‌ಎಫ್ಒ ದಕ್ಷಿಣ ವಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.