ADVERTISEMENT

ಬೆಳೆ ವಿಮೆ ನೋಂದಣಿಗೆ ರೈತರ ನಿರಾಸಕ್ತಿ ...

ಕೃಷಿ ಇಲಾಖೆ ಪ್ರಚಾರದ ನಡುವೆಯೂ ಪ್ರಗತಿ ಸಾಧಿಸದ ಪ್ರಕ್ರಿಯೆ

ಹೊನಕೆರೆ ನಂಜುಂಡೇಗೌಡ
Published 21 ಆಗಸ್ಟ್ 2023, 6:31 IST
Last Updated 21 ಆಗಸ್ಟ್ 2023, 6:31 IST
ಬಳ್ಳಾರಿ ತಾಲ್ಲೂಕಿನ ಶಂಕರ ಬಂಡೆಯ ಗ್ರಾಮ ಒನ್‌ ಕೇಂದ್ರದಲ್ಲಿ ಬೆಳೆ ವಿಮೆ ಕಂತು ಪಾವತಿಸಲು ಸೇರಿರುವ ರೈತರು 
ಬಳ್ಳಾರಿ ತಾಲ್ಲೂಕಿನ ಶಂಕರ ಬಂಡೆಯ ಗ್ರಾಮ ಒನ್‌ ಕೇಂದ್ರದಲ್ಲಿ ಬೆಳೆ ವಿಮೆ ಕಂತು ಪಾವತಿಸಲು ಸೇರಿರುವ ರೈತರು    

ಬಳ್ಳಾರಿ: ಮುಂಗಾರು ಕೃಷಿಕರ ಬದುಕಿಗೆ ಮುನ್ನುಡಿ. ಮುಂಗಾರಿನ ಹನಿಗಳು ಭೂಮಿಗೆ ಮುತ್ತಿಡದಿದ್ದರೆ ಬದುಕೇ ಬರಡಾಗುತ್ತದೆ. ಪ್ರಾಣಿ– ಪಕ್ಷಿಗಳ ಜೀವನ ಚಕ್ರ ಆರಂಭವಾಗುವುದೇ ಮುಂಗಾರು ಆಗಮನದಿಂದ. ಮರ,ಗಿಡ,ಗಿರಿ– ಕಂದರಗಳಲ್ಲಿ ಹಸಿರು ನಳನಳಿಸುವುದು ಮುಂಗಾರು ಮಳೆಯಿಂದಲೇ ಹೀಗಾಗಿ, ಹತ್ತಾರು ಕವಿಗಳು ಮುಂಗಾರು ಕುರಿತು ಸೊಗಸಾದ ಕಾವ್ಯಗಳನ್ನು ಬರೆದಿದ್ದಾರೆ. 

 ಸಕಾಲಕ್ಕೆ ಮುಂಗಾರು ಕಾಲಿಡದಿದ್ದರೆ ರೈತ ಚಡ‍ಪಡಿಸುತ್ತಾನೆ. ಆತಂಕಕ್ಕೆ ಒಳಗಾಗುತ್ತಾನೆ. ತನ್ನನ್ನೇ ನೆಚ್ಚಿಕೊಂಡವರ ತುತ್ತಿನ ಚೀಲ ತುಂಬುವ ಕುಟುಂಬದ ಚಿತ್ರ ಆತನ ಕಣ್ಣಮುಂದೆ ಹಾಯುತ್ತದೆ. ಇಡೀ ವರ್ಷ ಕಷ್ಟ– ಸಂಕಷ್ಟಗಳ ನಡುವೆಯೇ ಕಳೆಯಬೇಕಾಗುತ್ತದೆ ಎಂಬ ಭಯವೂ ಕಾಡುತ್ತದೆ.

ಮುಂಗಾರು ಹದವಾಗಿದ್ದರೆ ರೈತರನ್ನು ಹಿಡಿಯುವುದೇ ಕಷ್ಟ. ಮೊಗದಲ್ಲಿ ಮಂದಹಾಸ ಬೀರುತ್ತಾ, ಹೆಗಲ ಮೇಲೆ ನೇಗಿಲ ಹೊತ್ತು ಹೊಲದತ್ತ ನಡೆಯುತ್ತಾನೆ. ಕುವೆಂಪು ಅವರು ಹೇಳುವಂತೆ ‘ನೇಗಿಲ ಹಿಡಿದು ಹೊಲದೊಳು ಹಾಡುತಾ ಉಳುವ ಯೋಗಿಯ ನೋಡಲ್ಲಿ’ ಎಂಬಂತೆ ಎತ್ತ ನೋಡಿದರೂ ನೇಗಿಲ ಯೋಗಿ ಕಾಣುತ್ತಾನೆ. ಈ ಮಾತಿಗೆ ಆ ಊರು, ಈ ಊರು ಎಂದೇನಿಲ್ಲ. ಬಳ್ಳಾರಿ ಜಿಲ್ಲೆಯೂ ಹೊರತಲ್ಲ.

ADVERTISEMENT

ಹಿಂದಿನ ಎರಡು ವರ್ಷ ಎಲ್ಲೆಡೆ ಮುಂಗಾರು ಆರ್ಭಟಿಸಿತು. ಮಳೆ ನಿಂತರೆ ಸಾಕಪ್ಪಾ ಎನ್ನುವಷ್ಟು ಭೋರ್ಗರೆಯಿತು. ಕೆರೆ, ಕಟ್ಟೆ, ನದಿ, ಜಲಾಶಯಗಳು ಎರಡೆರಡು ಸಲ ತುಂಬಿದ್ದವು. ಕೆಲವೆಡೆ ಕೆರೆ, ಕಟ್ಟೆಗಳು ಒಡೆದವು. ಹಲವೆಡೆ ಕೋಡಿ ಬಿದ್ದವು.  ಕೆಲವರಿಗೆ ಮುಂಗಾರು ವರವಾದರೆ, ಅನೇಕರಿಗೆ ಶಾಪವಾಯಿತು. ಭತ್ತ, ಜೋಳದ ತೆನೆಗಳು ಮಕಾಡೆ ಮಲಗಿದವು. ಮೆಣಸಿನಕಾಯಿ ಕೊಚ್ಚಿ ಹೋಯಿತು. ಬಳ್ಳಾರಿ ಜಿಲ್ಲೆಯ ಬಹಳಷ್ಟು ರೈತರ ಸ್ಥಿತಿ ‘ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ’ ಎನ್ನುವಂತಾಯಿತು.

 ಆದರೆ, ಈ ವರ್ಷದ ಪರಿಸ್ಥಿತಿ ವಿಭಿನ್ನವಾಗಿದೆ. ಮುಂಗಾರು ತಡವಾಗಿದೆ. ಪಶ್ಚಿಮ ಘಟ್ಟ, ಕರಾವಳಿಯಲ್ಲಿ ಮಳೆ ಆರ್ಭಟಿಸಿದರೂ ಕೆರೆ, ಕಟ್ಟೆಗಳು ತುಂಬಿಲ್ಲ. ಜಲಾಶಯಗಳು ಅರ್ಧಂಬರ್ಧ ಭರ್ತಿಯಾಗಿವೆ. ನಾಲೆಗಳಿಗೆ ನೀರು ಹರಿಸಲು ಚಿಂತಿಸಬೇಕಾದ ಸ್ಥಿತಿ ಇದೆ. ತುಂಗಭದ್ರಾ ಜಲಾಶಯದ ಕಥೆ ಭಿನ್ನವಾಗಿಲ್ಲ. ಮಳೆಯನ್ನೇ ಆಶ್ರಯಿಸಿರುವ ರೈತರ ಪಾಡು ಹೇಳಲಸಾಧ್ಯ.

ಆಷಾಢ ಮಾಸ ಕಳೆದು ಶ್ರಾವಣ ಮಾಸ ಅಡಿಯಿಟ್ಟಿದೆ. ಹಿರಿಯ ಕವಿ ದ.ರಾ. ಬೇಂದ್ರೆಯವರು ಬರೆದಂತೆ, ‘ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ; ಕಡಲಿಗೆ ಬಂತು ಶ್ರಾವಣ ಕುಣಿದ್ಹಾಂಗೆ ರಾವಣ; ಕುಣಿದಾವೆ ಗಾಳಿ ಭೈರವನ ರೂಪ ತಾಳಿ’ ಎಂಬಂತೆ ಶ್ರಾವಣದ ಮಳೆ ಆರ್ಭಟಿಸಿದರೆ ಜಲಾಶಯಗಳು ತುಂಬಿ ಭೋರ್ಗರೆಬಹುದೆಂಬ ಸಣ್ಣ ನಿರೀಕ್ಷೆ ಇನ್ನೂ ಇದೆ.

ಬಳ್ಳಾರಿ ಜಿಲ್ಲೆಯ ಭೌಗೋಳಿಕ ವ್ಯಾಪ್ತಿ 4.43ಲಕ್ಷ ಹೆಕ್ಟೇರ್. ಸಾಗುವಳಿ ಕ್ಷೇತ್ರದ ವ್ಯಾಪ್ತಿ 2.78 ಲಕ್ಷ  ಹೆಕ್ಟೇರ್. ಮುಂಗಾರು ಹಂಗಾಮಿನಲ್ಲಿ 1.73 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಮಾಡಲಾಗುತ್ತಿದೆ. ಇದರಲ್ಲಿ 65 ಲಕ್ಷ ಹೆಕ್ಟೇರ್‌ ಮಳೆಯಾಶ್ರಿತ. ಉಳಿದಿದ್ದು ನೀರಾವರಿ ಪ್ರದೇಶ. ಮುಂಗಾರು ಹಂಗಾಮಿನಲ್ಲಿ ಬೀಳಬೇಕಾದ ಮಳೆ ಪ್ರಮಾಣ 30 ಸೆಂ.ಮೀ. ಬಂದಿದ್ದು 22 ಸೆಂ.ಮೀ. ವಾಡಿಕೆಗಿಂತ 8 ಸೆಂ.ಮೀ. ಮಳೆ ಕಡಿಮೆಯಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಆಗಸ್ಟ್‌ 15ರಂದು ಮಾಡಿದ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ, 71 ಸಾವಿರ ಹೆಕ್ಟೇರ್‌ನಲ್ಲಿ ಅಂದರೆ, ಶೇ 41ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ ಎಂದಿದ್ದಾರೆ. ಕಾಲುವೆಗೆ ನೀರು ಹರಿಸಿದ ಬಳಿಕ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಆಗಬಹುದು. ಮಳೆಯಾಶ್ರಿತ ರೈತರಿಗೆ ಮಾತ್ರ ಕಷ್ಟವಾಗಲಿದೆ.

ಅತಿವೃಷ್ಟಿ, ಅನಾವೃಷ್ಟಿ ಬಂದಾಗ, ಬೆಳೆಗಳಿಗೆ ರೋಗ–ರುಜಿನುಗಳು ಕಾಡಿದಾಗ ರೈತರನ್ನು ರಕ್ಷಣೆ ಮಾಡಲು ಸರ್ಕಾರ ಬೆಳೆ ವಿಮೆ ಯೋಜನೆ ಜಾರಿಗೊಳಿಸಿದೆ. ಆದರೆ, ವರ್ಷದಿಂದ ವರ್ಷಕ್ಕೆ ‘ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ’  ರೈತರಿಗೆ ಅಪ್ರಿಯವಾಗುತ್ತಿದೆ. ಜಿಲ್ಲೆಯಲ್ಲಿರುವ ಒಟ್ಟು ರೈತರ ಸಂಖ್ಯೆ 1.59 ಲಕ್ಷ. ಸಣ್ಣ ರೈತರು 1.05ಲಕ್ಷ, ಮಧ್ಯಮ ರೈತರು 45 ಸಾವಿರ. ದೊಡ್ಡ ರೈತರು 8 ಸಾವಿರ.

ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳಲು ಆಗಸ್ಟ್ 16 ಕೊನೆಯ ದಿನವಾಗಿತ್ತು. ಅಲ್ಲಿಯವರೆಗೆ ನೋಂದಣಿ ಮಾಡಿಕೊಂಡ ರೈತರ ಸಂಖ್ಯೆ ಕೇವಲ 4050. ಕಳೆದ ವರ್ಷ 4026 ರೈತರು ಬೆಳೆ ವಿಮೆ ಮಾಡಿಸಿದ್ದರು. ‘ಮುಂಗಾರು ತಡವಾಯಿತು. ಗಡುವು ಬೇಗ ಮುಗಿಯಿತು. ಇದರಿಂದ ಹೆಚ್ಚಿನ ಸಂಖ್ಯೆಯ ರೈತರು ವಿಮೆ ನೋಂದಣಿ ಮಾಡಿಸಿಲ್ಲ’ ಎಂಬುದು ಕೃಷಿ ಅಧಿಕಾರಿಗಳ ಅಭಿಪ್ರಾಯ.

ಬೆಳೆ ವಿಮೆ ಮಾಡಿಸುವಂತೆ ಕೃಷಿ ಇಲಾಖೆ ಸಾಕಷ್ಟು ಪ್ರಚಾರವೇನೋ ಮಾಡಿದೆ. ಆದರೂ ವಿಮೆ ನೋಂದಣಿ ಹೆಚ್ಚಾಗಿಲ್ಲ. ಬ್ಯಾಂಕ್‌ನಲ್ಲಿ ಸಾಲ ಪಡೆಯುವ ರೈತರಿಗೆ ಬೆಳೆ ವಿಮೆಯಿಂದ  ವಿನಾಯ್ತಿ ನೀಡಲಾಗಿದೆ. ಹೊಲ ಗುತ್ತಿಗೆ ಹಿಡಿಯುವ ರೈತರೂ ವಿಮೆ ಕಟ್ಟಲು ಸಾಧ್ಯವಿಲ್ಲ. ಮಾಲೀಕರೇ ನೋಂದಣಿ ಮಾಡಿಸಬೇಕು. ಪರಿಣಾಮವಾಗಿ ಬೆಳೆ ವಿಮೆ ನೋಂದಣಿ ಕಡಿಮೆಯಾಗುತ್ತಿದೆ ಎಂಬುದು ಮೂಲಗಳ ವಿವರಣೆ.

‘ಉತ್ತಮ ಮಳೆಯಾದರೆ ಬೆಳೆ ಚೆನ್ನಾಗಿ ಬರುತ್ತದೆಂಬ ನಂಬಿಕೆಯಿಂದ ರೈತರು ವಿಮೆ ತಂಟೆಗೆ ಹೋಗುವುದಿಲ್ಲ. ಕಳೆದ ಮೂರ್ನಾಲ್ಕು ವರ್ಷದಿಂದ ಮಳೆ ಚೆನ್ನಾಗಿದೆ. ಹೀಗಾಗಿ ರೈತರು ವಿಮೆ ಮಾಡಿಸಲು ಆಸಕ್ತಿ ತೋರುತ್ತಿಲ್ಲ’ ಎಂಬುದು ಅವರ ಪ್ರತಿಪಾದನೆ.

ವಿಮೆ ಕಂಪನಿಗಳಿಗೆ ಲಾಭ! ‘ಬೆಳೆ ವಿಮೆ ಕಟ್ಟಿದರೂ ನಷ್ಟ ಪರಿಹಾರ ಬರೋದಿಲ್ಲ. ಇಡೀ ಹೋಬಳಿಯನ್ನೇ ಒಂದು ಘಟಕವಾಗಿ ಪರಿಗಣಿಸಲಾಗುತ್ತದೆ. ಯಾವುದೇ ಬೆಳೆ ನಷ್ಟಕ್ಕೆ ಪರಿಹಾರ ಬರಬೇಕಾದರೆ ಇಡೀ ಹೋಬಳಿಯಲ್ಲೇ ಹಾನಿಯಾಗಿರಬೇಕು. ಉದಾಹರಣೆಗೆ ಜೋಳ ಇದ್ದರೆ ಇಡೀ ಹೋಬಳಿಯಲ್ಲೇ ಬೆಳೆ ಕೈಕೊಟ್ಟಿರಬೇಕು. ಇದರಿಂದಾಗಿ ರೈತರು ಬೆಳೆ ವಿಮೆ ತಂಟೆಗೆ ಹೋಗುವುದಿಲ್ಲ’ ಎಂಬುದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಮಾಧವರೆಡ್ಡಿ ಹೇಳಿಕೆ.  ಬೆಳೆ ಕಂಪನಿಗಳನ್ನು ಉದ್ಧಾರ  ಮಾಡಿ ರೈತರನ್ನು ಹಾಳು ಮಾಡುವ ನೀತಿಗಳನ್ನು ಸರ್ಕಾರ ರೂಪಿಸಿದೆ. ರೈತರು ಕಂಪನಿಗೆ ₹ 500 ಕೋಟಿ ವಿಮೆ ಪ್ರೀಮಿಯಂ ಕಟ್ಟಿದರೆ ₹ 100 ಕೋಟಿಯೂ ಪರಿಹಾರ ಬರೋದಿಲ್ಲ ಉಳಿದಿದ್ದು ಕಂಪನಿಗೆ ಲಾಭ ಎಂದು ಮಾಧವರೆಡ್ಡಿ ವಿಮೆ ನೀತಿಗೆ ಕನ್ನಡಿ ಹಿಡಿದರು.

ಮೋಸ ಆಗುವುದಿಲ್ಲ... ‘ಬೆಳೆ ವಿಮೆ ಯೋಜನೆಯಲ್ಲಿ ರೈತರಿಗೆ ಮೋಸ ಆಗುವುದಿಲ್ಲ. ಹಿಂದಿನ ವರ್ಷ ಹಂದ್ಯಾಳದ ವಾಸುದೇವ ರೆಡ್ಡಿ ₹ 3341 ವಿಮೆ ಕಂತು ಕಟ್ಟಿದ್ದರು. ₹ 49504 ಪರಿಹಾರ ಬಂದಿದೆ. ರೂಪನಗುಡಿಯ ಬಂಗಾರು ಗೋವಿಂದರೆಡ್ಡಿ ₹ 14011 ಪ್ರೀಮಿಯಂ ಪಾವತಿಸಿದ್ದರು. ₹ 1.22 ಲಕ್ಷ ಪರಿಹಾರ ಬಂದಿದೆ’ ಎಂದು ಕೃಷಿ ಅಧಿಕಾರಿಗಳು ಸಮರ್ಥನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.