ADVERTISEMENT

ತುಂಗಭದ್ರಾ ನದಿ ಒಡಲು ಬರಿದು: ಅಗ್ಗದ ದರದಲ್ಲಿ ತಾಜಾ ಮೀನು

ಬರಿದಾದ ತುಂಗಭದ್ರಾ ನದಿ ಒಡಲು; ಮೀನು ಬೇಟೆ ಸುಗ್ಗಿ, ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 22:47 IST
Last Updated 9 ಜೂನ್ 2023, 22:47 IST
ಕಂಪ್ಲಿ ತುಂಗಭದ್ರಾ ನದಿಯಲ್ಲಿ ತೆಪ್ಪದ ಮೂಲಕ ಮೀನುಗಾರರು ಮೀನು ಬೇಟೆಗೆ ತೆರಳಿದರು
ಕಂಪ್ಲಿ ತುಂಗಭದ್ರಾ ನದಿಯಲ್ಲಿ ತೆಪ್ಪದ ಮೂಲಕ ಮೀನುಗಾರರು ಮೀನು ಬೇಟೆಗೆ ತೆರಳಿದರು   

ಪಂಡಿತಾರಾಧ್ಯ ಎಚ್.ಎಂ ಮೆಟ್ರಿ

ಕಂಪ್ಲಿ: ಅಗ್ಗದ ದರದಲ್ಲಿ ತಾಜಾ ಮೀನು ಬೇಕೆ? ಹಾಗಾದರೆ ಸ್ಥಳೀಯ ತುಂಗಭದ್ರಾ ನದಿಗೆ ಬನ್ನಿ!  ಸಮುದ್ರ ಮೀನಿಗೆ ಸಾವಿರಾರು ರೂಪಾಯಿ ವ್ಯಯಿಸುವ ಮೀನು ಪ್ರಿಯರು, ಕಡಿಮೆ ಬೆಲೆಯಲ್ಲಿ ಇಲ್ಲಿ ದೊರೆಯುವ ಮೀನು ಸವಿಯಬಹುದು.

ಸದ್ಯ ಜಲಾಶಯದಿಂದ ಒಳ ಹರಿವು, ಮಳೆ ಇಲ್ಲದೆ ಕೆಲ ದಿನಗಳಿಂದ ನದಿಯ ಒಡಲು ಬರಿದಾಗಿದೆ. ಅದರಿಂದ ಮೀನು ಬೇಟೆ ಹುಲುಸಾಗಿದೆ. ಆದರೆ, ಬಿಸಿಲಿನ ಪ್ರಖರತೆಗೆ ಕೊಳ್ಳುವವರಿಲ್ಲದೆ ಬೇಡಿಕೆ ಕುಸಿದಿದೆ ಎನ್ನುವುದು ಮೀನುಗಾರರ ಅಳಲು.

ADVERTISEMENT

‘ಮಳೆಗಾಲ, ಚಳಿಗಾಲದಲ್ಲಿ ಇಲ್ಲಿಯ ಮೀನುಗಾರ ಪ್ರತಿ ಕುಟುಂಬದವರು ಸೇರಿ ದಿನಕ್ಕೆ 20 ರಿಂದ 30ಕೆ.ಜಿ ಮೀನು ಬೇಟೆಯಾಡುತ್ತೇವೆ. ಮಾರುಕಟ್ಟೆಯಲ್ಲಿಯೂ ಅಷ್ಟೇ ವೇಗದಲ್ಲಿ ಪ್ರತಿ ಕೆ.ಜಿ ₹ 100ರಿಂದ ₹ 150 ಮಾರಾಟವಾಗುತ್ತದೆ. ಆದರೆ, ನದಿಯಲ್ಲಿ ನೀರಿನ ಪ್ರಮಾಣ ಕುಸಿದಾಗ ಹಗಲು, ರಾತ್ರಿ ಮೀನು ಬೇಟೆಯಾಡಿ 30ರಿಂದ 45ಕೆ.ಜಿ ಮೀನು ಸಂಗ್ರಹಿಸುತ್ತೇವೆ. ಬೆಳಿಗ್ಗೆ ಪ್ರತಿ ಕೆ.ಜಿಗೆ ₹ 150 ಇದ್ದ ದರ ಮಧ್ಯಾಹ್ನಕ್ಕೆ ₹80ಕ್ಕೆ ಕುಸಿಯುತ್ತದೆ. ನದಿಯಲ್ಲಿ ನೀರು ಕ್ಷೀಣಿಸಿದಾಗ ಇದು ಸಾಮಾನ್ಯ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಮೀನು ಸಂಗ್ರಹಿಸಲು ನಮ್ಮ ಬಳಿ ಕನಿಷ್ಠ ಥರ್ಮಕೋಲ್ ಐಸ್ ಬಾಕ್ಸ್ ವ್ಯವಸ್ಥೆ ಇಲ್ಲ. ಇನ್ನು ಶೀತಲಘಟಕ ಗಗನ ಕುಸುಮ. ಅನಿವಾರ್ಯವಾಗಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತೇವೆ’ ಎಂದು ಮೀನುಗಾರ ಕಿರಣ್ ಅವರು ಅಲವತ್ತುಕೊಂಡರು.

ಇನ್ನು ಕೆಲ ಮೀನುಗಾರರು ಬಳ್ಳಾರಿ, ಹೊಸಪೇಟೆ, ಗಂಗಾವತಿ, ತೋರಣಗಲ್ ಇತ್ಯಾದಿ ಕಡೆಯಿಂದ ಬರುವ ವ್ಯಾಪಾರಸ್ಥರಿಗೆ ಕೆ.ಜಿಗೆ ₹110 ರಿಂದ ₹120ಕ್ಕೆ ಸಗಟು ದರದಲ್ಲಿ ಮಾರಾಟ ಮಾಡುತ್ತಾರೆ.

ಮಾರುಕಟ್ಟೆಯಲ್ಲಿ ಕೆ.ಜಿ ಮೀನು ಕನಿಷ್ಠ ₹ 180ರಿಂದ ₹ 200ಕ್ಕೆ ಮಾರಾಟವಾದ್ದಲ್ಲಿ ನಮಗೆ ಲಾಭ ದೊರೆಯುತ್ತದೆ ಎಂದು ಮೀನು ವ್ಯಾಪಾರಿಗಳಾದ ರಾಜಶೇಖರ, ಹಸೇನ್, ತಿಳಿಸಿದರು.

ಶೀತಲಗೃಹ, ಸಮುದಾಯ ಭವನ ನಿರ್ಮಾಣಕ್ಕೆ ಮನವಿ:

‘ಕಂಪ್ಲಿ ಮೀನುಗಾರರ ಸಹಕಾರ ಸಂಘವು ಕಂಪ್ಲಿ ಕೋಟೆ, ಬೆಳಗೋಡುಹಾಳು, ಸಣಾಪುರ, ಇಟಗಿ ವ್ಯಾಪ್ತಿಯನ್ನು ಹೊಂದಿದ್ದು, ಸುಮಾರು 300 ಜನ ಸದಸ್ಯರನ್ನು ಹೊಂದಿದೆ. ಇದರಲ್ಲಿರುವ ಎಲ್ಲರೂ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಆದರೆ, ಕೆಲವೊಮ್ಮೆ ವಾತಾವರಣದಲ್ಲಿ ಅಸ್ಥಿರತೆ ಉಂಟಾದಾಗ ಮೀನು ಉಳಿದು ಬಿಡುತ್ತದೆ. ಅದಕ್ಕಾಗಿ ಶೀತಲಗೃಹ ಇದ್ದಲ್ಲಿ ನಷ್ಟ ತಡೆಯಬಹುದು. ಈ ಕುರಿತು ಇಲಾಖೆಗೆ ಮನವಿ ಮಾಡಿದ್ದೇವೆ. ಜೊತೆಗೆ ಮೀನುಗಾರರ ಸಮುದಾಯ ಭವನದ ಬೇಡಿಕೆಯೂ ಸಲ್ಲಿಸಿದ್ದೇವೆ’ ಎಂದು ಸಂಘದ ಅಧ್ಯಕ್ಷ ಎಸ್.ಆರ್. ಚಿನ್ನರಾಜು ತಿಳಿಸಿದರು.

ಕಂಪ್ಲಿ ತುಂಗಭದ್ರಾ ನದಿಯಲ್ಲಿ ಮೀನು ಬೇಟೆಯ ನಂತರ ಸಂಗ್ರಹವಾದ ವಿವಿಧ ತಳಿಯ ಮೀನುಗಳು

ಶೀತಲಗೃಹ ಮಾರುಕಟ್ಟೆ ನಿರ್ಮಾಣಕ್ಕೆ ಅನುಮೋದನೆ

ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ(ಕೆ.ಎಂ.ಇ.ಆರ್.ಸಿ) ಅನುದಾನ ₹  60ಲಕ್ಷ ವೆಚ್ಚದಲ್ಲಿ ಕಂಪ್ಲಿಯಲ್ಲಿ ಮೀನು ಶೀತಲಗೃಹ ಮತ್ತು ಮಾರುಕಟ್ಟೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಅದೇ ರೀತಿ ಮೀನುಗಾರರ ಸಮುದಾಯ ಭವನ ನಿರ್ಮಾಣಕ್ಕೆ ₹ 35 ಲಕ್ಷ ಮಂಜೂರಾಗಿದೆ ಎಂದು ಬಳ್ಳಾರಿ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಎನ್. ಬಸವನಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.