ADVERTISEMENT

ಗಾಂಧಿ ಸ್ಮರಣೆ: ಸಂಡೂರಿನ ದೇಗುಲಗಳ ವ್ಯವಸ್ಥೆ ಮೆಚ್ಚಿದ್ದ ಗಾಂಧೀಜಿ

1934ರಲ್ಲಿ ಬಳ್ಳಾರಿ ಜಿಲ್ಲೆಗೆ ಎರಡನೇ ಬಾರಿ ಪ್ರವಾಸ ಕೈಗೊಂಡಿದ್ದ ರಾಷ್ಟಪಿತ

ಆರ್. ಹರಿಶಂಕರ್
Published 1 ಅಕ್ಟೋಬರ್ 2024, 6:45 IST
Last Updated 1 ಅಕ್ಟೋಬರ್ 2024, 6:45 IST
ಸಂಡೂರಿನ ‘ಸೀ ಸಂಡೂರ್‌ ಇನ್‌ ಸೆಪ್ಟೆಂಬರ್‌ ಪಾಯಿಂಟ್‌’ನ ವೈಮಾನಿಕ ನೋಟ. 
ಸಂಡೂರಿನ ‘ಸೀ ಸಂಡೂರ್‌ ಇನ್‌ ಸೆಪ್ಟೆಂಬರ್‌ ಪಾಯಿಂಟ್‌’ನ ವೈಮಾನಿಕ ನೋಟ.    

1920ರ ಸೆ.4ರಂದು ‘ಅಸಹಕಾರ ಚಳವಳಿ’ಯ ಅಭಿಯಾನವನ್ನು ಮಹಾತ್ಮ ಗಾಂಧೀಜಿ ಕೈಗೊಂಡಿದ್ದರು. ಅದರ ಭಾಗವಾಗಿ ಗಾಂಧೀಜಿಯವರು 1921ರ ಅ.1ರಂದು ಮೊದಲ ಬಾರಿಗೆ ಬಳ್ಳಾರಿಗೆ ಬಂದಿದ್ದರು. ಅದಾದ ಬಳಿಕ 1934ರಲ್ಲಿ ನಾಗರಿಕ ಅಸಹಕಾರ ಚಳವಳಿಯ ಸಂದರ್ಭದಲ್ಲಿ.  

ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಸ್ವತಂತ್ರ ಭಾರತದ ಹೋರಾಟದ ದೊಡ್ಡ ಗುರಿಗಾಗಿ ಕೆಲಸ ಮಾಡಲು ದೇಶದ ಜನರನ್ನು ಒಗ್ಗೂಡಿಸುವ ಗಾಂಧೀಜಿಯವರ ಸಂಕಲ್ಪವನ್ನು ಈ ಹಿಂದಿನ ಭೇಟಿ ಬಲಪಡಿಸಿತ್ತು. ಎರಡನೇ ಭೇಟಿಯು, ಗಾಂಧೀಜಿಯವರ ಮತ್ತೊಂದು ಮಹತ್ವದ ಚಳವಳಿಗೆ ಮುನ್ನುಡಿ ಬರೆದಿತ್ತು. 

1934ರಲ್ಲಿ ಎರಡನೇ ಬಾರಿ ಜಿಲ್ಲೆಗೆ ಆಗಮಿಸಿದ್ದ ಗಾಂಧೀಜಿಯವರನ್ನು ಬಳ್ಳಾರಿಯ ಕಾಂಗ್ರೆಸ್ ಮುಖಂಡರಾದ ಟೇಕೂರು ಸುಬ್ರಹ್ಮಣ್ಯಂ, ಠಕ್ಕರ್ ಬಪ್ಪಾ, ವಿ.ವಿ.ಪಾಟೀಲ್  ಬರಮಾಡಿಕೊಂಡಿದ್ದರು. ಕೊಟ್ಟೂರಿನಲ್ಲಿ (ವಿಜಯನಗರ ಜಿಲ್ಲೆ) ಬೃಹತ್ ಸಮಾವೇಶವೊಂದರಲ್ಲಿ ಪಾಲ್ಗೊಂಡಿದ್ದ ಅವರು, ಅಲ್ಲಿ ಆಶ್ರಮವೊಂದಕ್ಕೆ ಅಡಿಪಾಯ ಹಾಕಿದರು. ಇದಾದ ಬಳಿಕ ಅವರು ಸಂಡೂರು ರಾಜ್ಯಕ್ಕೆ ಭೇಟಿ ನೀಡಿದ್ದರು. 

ADVERTISEMENT

1930ರ ದಶಕದಲ್ಲಿಯೇ ಸಂಡೂರು ರಾಜ್ಯದಲ್ಲಿ ಹರಿಜನರಿಗೆ ದೇವಾಲಯ ಪ್ರವೇಶ ಮಾಡುವುದನ್ನು ಮುಕ್ತಗೊಳಿಸಲಾಗಿತ್ತು. ಈ ಕಾರ್ಯಕ್ಕಾಗಿ ಘೋರ್ಪಡೆ ರಾಜಮನೆತನದವರು ವ್ಯಾಪಕವಾಗಿ ಪ್ರಶಂಸೆಗೆ ಪಾತ್ರರಾಗಿದ್ದರು. ಸ್ಥಳೀಯರ ಮನ್ನೆಣೆ ಅವರಿಗೆ ಸಿಕ್ಕಿತ್ತು. ತಳಸಮುದಾಯದ ಜನ ಎಲ್ಲ ದೇವಾಲಯಗಳನ್ನು ಪ್ರವೇಶಿಸಲು ಅವಕಾಶ ನೀಡಿದ ಸಂಡೂರು ರಾಜ್ಯದ ನೀತಿಯಿಂದ ಮಹಾತ್ಮ ಗಾಂಧೀಜಿ ಅವರೂ ಪ್ರಭಾವಿತರಾದರು.

ಈ ಬಗ್ಗೆ ಒಂದೊಮ್ಮೆ ಮಾತನಾಡಿದ್ದ ಗಾಂಧೀಜಿ, ‘ದಕ್ಷಿಣ ಭಾರತದ ಒಂದು ಸಣ್ಣ ರಾಜ್ಯ ಸಂಡೂರು ಹರಿಜನರಿಗೆ ದೇವಾಲಯವನ್ನು ಮುಕ್ತಗೊಳಿಸಿದೆ. ಸ್ವರ್ಗವೇನೂ ಕುಸಿದು ಬಿದ್ದಿಲ್ಲವಲ್ಲ’ ಎಂದು ಎಂದಿದ್ದರು. 

ಎರಡನೇ ಬಾರಿಯ ಬಳ್ಳಾರಿ ಈ ಭೇಟಿಯು ಗಾಂಧೀಜಿಯವರ ರಾಷ್ಟ್ರೀಯ ಚಳವಳಿ ಮತ್ತು ರಚನಾತ್ಮಕ ಕಾರ್ಯಕ್ರಮಕ್ಕೆ ಉತ್ತೇಜನ ನೀಡಿತ್ತು. ಗಾಂಧೀಜಿ ತಮ್ಮ ಬದುಕಿನ ಕೊನೆ ಗಳಿಗೆ ವರೆಗೆ ಹರಿಜನರ ಉದ್ಧಾರವನ್ನು ಪ್ರತಿಪಾದಿಸಿದ್ದರು. ಅದಕ್ಕೆ ನಿದರ್ಶನವಾಗಿ ಅವರು ಕೈ ತೋರುತ್ತಿದ್ದದ್ದು ಸಂಡೂರಿನ ಕಡೆಗೆ.  

ಗಾಂಧೀಜಿಯವರು ತಮ್ಮ ಎರಡನೇ ಭೇಟಿಯ ವೇಳೆ, ಹೊಸಪೇಟೆ ಮತ್ತು ಬಳ್ಳಾರಿ ಟೌನ್‌ನಲ್ಲಿ ನಡೆದ ಸಭೆಗಳನ್ನು ಉದ್ದೇಶಿಸಿಯೂ ಮಾತನಾಡಿದ್ದರು.  ಜತೆಗೆ, ಶೋಷಿತ ಸಮುದಾಯಗಳ ಜನರ ಮನೆಗಳಿಗೆ ಭೇಟಿ ನೀಡಿದ್ದರು. 

ಸಂಡೂರಿನ ‘ಸೀ ಸಂಡೂರು ಪಾಯಿಂಟ್‌’ ಬಳಿ ಬಯಲಲ್ಲಿ ನಿಂತಿರುವ ಗಾಂಧೀಜಿ ಪ್ರತಿಮೆ 

ಸಂಡೂರು ಬಣ್ಣಿಸಿದ್ದ ಮಹಾತ್ಮನ ಪ್ರತಿಮೆಗಿಲ್ಲ ಚಾವಣಿ

ಸಂಡೂರು ಭೇಟಿ ವೇಳೆ ಇಲ್ಲಿನ ಪ್ರಕೃತಿ ಸೊಬಗನ್ನು ಆಸ್ವಾದಿಸಿದ್ದ ಗಾಂಧೀಜಿ ‘ ಸೀ ಸಂಡೂರ್‌ ಇನ್‌ ಸೆಪ್ಟೆಂಬರ್‌’ ಎಂದು ಹೇಳಿದ್ದರು. ಗಾಂಧೀಜಿ ಅವರ ಈ ಮಾತುಗಳನ್ನು ಸಂಡೂರಿನ ಪರಿಸರದಲ್ಲಿ ಬರೆದಿಡಲಾಗಿದೆ. ಇದನ್ನು ‘ಸೀ ಸಂಡೂರು’ ಪಾಯಿಂಟ್‌ ಎಂದು ಕರೆಯಲಾಗುತ್ತದೆ. ಇಲ್ಲಿ ಗಾಂಧೀಜಿಯ ಪ್ರತಿಮೆಯೊಂದನ್ನು ಇರಿಸಲಾಗಿದೆ. ಆದರೆ ತೆರೆದ ಪರಿಸರದಲ್ಲಿ ಈ ಪ್ರತಿಮೆಯನ್ನು ಇರಿಸಲಾಗಿದ್ದು ಚಾವಣಿ ವ್ಯವಸ್ಥೆ ಮಾಡಿಲ್ಲ.  ಸಂಡೂರಿನ ವ್ಯವಸ್ಥೆ ಪ್ರಕೃತಿ ಸೌಂದರ್ಯವನ್ನು ಬಣ್ಣಿಸಿದ್ದ ಗಾಂಧೀಜಿಯ ಪ್ರತಿಮೆಗೆ ಸೂಕ್ತ ರಕ್ಷಣೆ ನಿರ್ವಹಣೆ ಮಾಡದಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರತಿಮೆಗೆ ಚಾವಣಿ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ‘ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವುದರಲ್ಲಿ ಪ್ರಧಾನ ಪಾತ್ರ ವಹಿಸಿದ ಗಾಂಧೀಜಿ ಪ್ರತಿಮೆಗೆ ನೆರಳು ಒದಗಿಸಲು ತಾಲೂಕು ಆಡಳಿತಕ್ಕಾಗಲಿ ಅರಣ್ಯ ಇಲಾಖೆಗಾಗಲಿ ಆಗದೇ ಇರುವುದು ಶೋಚನೀಯ‘ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಶೈಲ ಆಲ್ದಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.