ADVERTISEMENT

ಗಣಪನ ವಿಸರ್ಜನೆ: ನಿನ್ನೆ ಸಂಜೆಯಿಂದ ಬೆಳಗಿನವರೆಗೆ ಸಂಭ್ರಮೋಲ್ಲಾಸ,ಉತ್ಸವಕ್ಕೆ ತೆರೆ

ಮೋದಿ ಕಟೌಟ್‌ ಹಿಡಿದು ಜೈಕಾರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2018, 11:30 IST
Last Updated 18 ಸೆಪ್ಟೆಂಬರ್ 2018, 11:30 IST
ಹೊಸಪೇಟೆಯಲ್ಲಿ ಸೋಮವಾರ ತಡರಾತ್ರಿ ನಡೆದ ಗಣೇಶ ಮೂರ್ತಿಗಳ ವಿಸರ್ಜನೆಯ ಮೆರವಣಿಗೆಯಲ್ಲಿ ಪ್ರಸನ್ನ ಯುವಕ ಮಂಡಳಿಯ ಪದಾಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಯವರ ಕಟೌಟ್‌ ಹಿಡಿದುಕೊಂಡು ಹೆಜ್ಜೆ ಹಾಕಿದರು
ಹೊಸಪೇಟೆಯಲ್ಲಿ ಸೋಮವಾರ ತಡರಾತ್ರಿ ನಡೆದ ಗಣೇಶ ಮೂರ್ತಿಗಳ ವಿಸರ್ಜನೆಯ ಮೆರವಣಿಗೆಯಲ್ಲಿ ಪ್ರಸನ್ನ ಯುವಕ ಮಂಡಳಿಯ ಪದಾಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಯವರ ಕಟೌಟ್‌ ಹಿಡಿದುಕೊಂಡು ಹೆಜ್ಜೆ ಹಾಕಿದರು   

ಹೊಸಪೇಟೆ: ಸಡಗರ, ಸಂಭ್ರಮದ ನಡುವೆ ನಡೆದ ಗಣಪನ ಮೂರ್ತಿಗಳ ವಿಸರ್ಜನೆಯೊಂದಿಗೆ ಮಂಗಳವಾರ ಬೆಳಿಗ್ಗೆ ಐದು ದಿನಗಳ ಗಣೇಶ ಉತ್ಸವಕ್ಕೆ ನಗರದಲ್ಲಿ ತೆರೆ ಬಿತ್ತು.

ಸೋಮವಾರ ಸಂಜೆಯಿಂದಲೇ ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ಜಿಟಿಜಿಟಿ ಮಳೆಯ ನಡುವೆ ಆಯಾ ಬಡಾವಣೆಗಳಲ್ಲಿ ಟ್ರಾಕ್ಟರ್‌, ಲಾರಿಗಳನ್ನು ಸಿಂಗರಿಸಿ ಅದರೊಳಗೆ ವಿಘ್ನ ನಿವಾರಕನ ಪ್ರತಿಷ್ಠಾಪಿಸಲಾಯಿತು. ನಂತರ ತಮಟೆ, ಡೊಳ್ಳು, ಭಗವಾ ಧ್ವಜಗಳು ಹಾಗೂ ಡಿ.ಜೆ. ಸದ್ದಿನೊಂದಿಗೆ ಮೆರವಣಿಗೆ ನಡೆಯಿತು. ಪಟಾಕಿ ಸುಡುತ್ತ, ಬಾಣ ಬಿರುಸುಗಳ ಚಿತ್ತಾರದಿಂದ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

ಭಕ್ತಿಯಲ್ಲಿ ಮಿಂದೆದ್ದ ಜನ ಡಿ.ಜೆ. ಸದ್ದಿಗೆ ಮೈಮರೆತು ಕುಣಿದರು. ಚಿಣ್ಣರು, ಯುವಕರು ಹಾಗೂ ವಯಸ್ಕರು ಪರಸ್ಪರ ಕೈ ಹಿಡಿದು, ಕೇಕೆ ಹಾಕುತ್ತ ಹೆಜ್ಜೆ ಹಾಕಿದರು. ಶಿವಾಜಿ ಮಹಾರಾಜ, ಹನುಮಂತ, ಶ್ರೀರಾಮ ಹಾಗೂ ಗಣಪನ ಚಿತ್ರವಿರುವ ಭಗವಾ ಧ್ವಜಗಳು ಎಲ್ಲೆಡೆ ರಾರಾಜಿಸಿದವು. ಪ್ರಸನ್ನ ಯುವಕ ಮಂಡಳಿಯ ಯುವಕರು, ಪ್ರಧಾನಿ ನರೇಂದ್ರ ಮೋದಿಯವರ ಕಟೌಟ್‌ ಹಿಡಿದುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ‘ಮೋದಿ... ಮೋದಿ...’ ಎಂದು ಜೈಕಾರ ಹಾಕಿದರು.

ADVERTISEMENT

ಮೂರಂಗಡಿ ಮಸೀದಿ ಎದುರು ತಡಹೊತ್ತು ಮೋದಿಯವರ ಕಟೌಟ್‌ನೊಂದಿಗೆ ಕುಣಿದರು. ಇತರೆ ಗಣೇಶ ಮಂಡಳಿಯವರು ಸಾಲುಗಟ್ಟಿ ನಿಂತಿದ್ದರಿಂದ ಜನದಟ್ಟಣೆ ಉಂಟಾಗಿತ್ತು. ಪೊಲೀಸರು ಮಧ್ಯ ಪ್ರವೇಶಿಸಿ ಬೇಗ ತೆರಳುವಂತೆ ತಾಕೀತು ಮಾಡಿದರು. ಇದರಿಂದ ಕುಪಿತರಾದ ಯುವಕರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಹಿರಿಯ ಪೊಲೀಸ್‌ ಅಧಿಕಾರಿಗಳು ವಾತಾವರಣ ತಿಳಿಗೊಳಿಸಿದರು. ನಂತರ ಇತರೆ ಗಣೇಶ ಮಂಡಳಿಯ ಮೂರ್ತಿಗಳು ಮೆರವಣಿಗೆಯಲ್ಲಿ ಸಾಗಿದವು.

ಮೂರಂಗಡಿ ವೃತ್ತ, ಮಹಾತ್ಮ ಗಾಂಧಿ ವೃತ್ತ, ಪುಣ್ಯಮೂರ್ತಿ ವೃತ್ತ, ಸ್ಟೇಶನ್‌ ರಸ್ತೆಯಿಂದ ತುಂಗಭದ್ರಾ ಕೆಳಮಟ್ಟದ ಕಾಲುವೆಯ (ಎಲ್‌.ಎಲ್‌.ಸಿ.) ವರೆಗೆ ಜನ ರಸ್ತೆಯ ಎರಡೂ ಬದಿಗಳಲ್ಲಿ ನಿಂತಿದ್ದರು. ನಿದ್ರೆಗೆಟ್ಟು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಕೆಲವರು ಮನೆಯ ಮಹಡಿಯ ಮೇಲಿಂದಲೇ ಗಣಪನಿಗೆ ಕೈಮುಗಿದರು. ಮತ್ತೆ ಕೆಲವರು ಸೆಲ್ಫಿ, ಛಾಯಾಚಿತ್ರ ತೆಗೆದುಕೊಂಡು ಸಂಭ್ರಮಿಸಿದರು.

ಮಂಗಳವಾರ ನಸುಕಿನ ಜಾವ ನಾಲ್ಕು ಗಂಟೆಯಿಂದ ಒಂದೊಂದೇ ಮೂರ್ತಿಗಳನ್ನು ಕಾಲುವೆಯಲ್ಲಿ ವಿಸರ್ಜಿಸಲಾಯಿತು. ಚಿಕ್ಕ ಹಾಗೂ ಮಧ್ಯಮ ಗಾತ್ರದ ಮೂರ್ತಿಗಳನ್ನು ಆಯಾ ಮಂಡಳಿಯವರು ಸೇರಿಕೊಂಡು ನೇರವಾಗಿ ನೀರಿನಲ್ಲಿ ವಿಸರ್ಜಿಸಿದರು. ಬೃಹತ್‌ ಗಾತ್ರದ ಮೂರ್ತಿಗಳನ್ನು ಕ್ರೇನ್‌ ಸಹಾಯದಿಂದ ನೀರಿಗೆ ಬಿಡಲಾಯಿತು. ಬೆಳಿಗ್ಗೆ ಏಳು ಗಂಟೆಯ ವರೆಗೆ ಒಟ್ಟು 56 ಮೂರ್ತಿಗಳ ವಿಸರ್ಜನೆ ಮಾಡಲಾಯಿತು. ತಡರಾತ್ರಿ ಮೆರವಣಿಗೆ, ವಿಸರ್ಜನೆ ನೋಡಲಾಗದವರು ಬೆಳಿಗ್ಗೆ ಬೇಗ ಎದ್ದು, ಕಾಲುವೆ ಬಳಿ ಸೇರಿದ್ದರು. ಇದರಿಂದಾಗಿ ಕೆಲ ಸಮಯ ಸ್ಟೇಶನ್‌ ರಸ್ತೆಯಲ್ಲಿ ಜನ ಹಾಗೂ ವಾಹನ ದಟ್ಟಣೆ ಉಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.