ADVERTISEMENT

ತಿಂಗಳಲ್ಲೇ 3 ಸಾವಿರಕ್ಕೂ ಅಧಿಕ ಜನ ಭೇಟಿ: ಸಫಾರಿಗೆ ಉತ್ತಮ ಪ್ರತಿಕ್ರಿಯೆ

ಅಟಲ್‌ ಬಿಹಾರಿ ವಾಜಪೇಯಿ ಉದ್ಯಾನ ಸಫಾರಿಗೆ ಉತ್ತಮ ಪ್ರತಿಕ್ರಿಯೆ; ₹2.98 ಲಕ್ಷ ಸಂಗ್ರಹ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 22 ಜುಲೈ 2019, 19:30 IST
Last Updated 22 ಜುಲೈ 2019, 19:30 IST
ಸಫಾರಿ ವೀಕ್ಷಿಸಿ ಬಂದ ಪ್ರವಾಸಿಗರು ಮಿನಿ ಬಸ್ಸಿನಿಂದ ಕೆಳಗಿಳಿಯುತ್ತಿರುವುದು
ಸಫಾರಿ ವೀಕ್ಷಿಸಿ ಬಂದ ಪ್ರವಾಸಿಗರು ಮಿನಿ ಬಸ್ಸಿನಿಂದ ಕೆಳಗಿಳಿಯುತ್ತಿರುವುದು   

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಬಿಳಿಕಲ್‌ ಸಂರಕ್ಷಿತ ಅರಣ್ಯದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಸಫಾರಿ ಆರಂಭಗೊಂಡು ಭಾನುವಾರಕ್ಕೆ (ಜು.21) ಒಂದು ತಿಂಗಳು ಪೂರ್ಣವಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಒಂದು ತಿಂಗಳ ಅವಧಿಯಲ್ಲಿ ಉದ್ಯಾನಕ್ಕೆ 14 ವರ್ಷದೊಳಗಿನ 226 ಮಕ್ಕಳು ಸೇರಿದಂತೆ ಒಟ್ಟು 3,100 ಜನ ಭೇಟಿ ನೀಡಿದ್ದಾರೆ. ಮಕ್ಕಳಿಗೆ ₹50, 18 ವರ್ಷ ಮೇಲಿನವರಿಗೆ ₹100 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಒಟ್ಟು ₹2,98,700 ಹಣ ಸಂಗ್ರಹವಾಗಿದೆ.

ಸಫಾರಿ ವೀಕ್ಷಣೆಗೆ ಉದ್ಯಾನದಿಂದ ಎರಡು ವಾಹನಗಳಿಗೆ ವ್ಯವಸ್ಥೆ ಮಾಡಲಾಗಿದೆ. ಒಂದು ವಾಹನದಲ್ಲಿ ತಲಾ 14 ಜನ ಒಟ್ಟಿಗೆ ಹೋಗಬಹುದು. ಹುಲಿ, ಸಿಂಹ ಹಾಗೂ ಜಿಂಕೆ ಸಫಾರಿ ವೀಕ್ಷಣೆಗೆ ಒಟ್ಟು 45 ನಿಮಿಷ ಸಮಯ ತೆಗೆದುಕೊಳ್ಳುತ್ತದೆ.

ADVERTISEMENT

ಬೋನಿನಲ್ಲೇ ಉಳಿದ ಪ್ರಾಣಿಗಳು:ಸಫಾರಿ ಆರಂಭವಾಗಿ ತಿಂಗಳಾದರೂ ಇದುವರೆಗೆ ಯಾವುದೇ ಪ್ರಾಣಿಗಳನ್ನು ಅವುಗಳ ಮನೆಯಿಂದ ಹೊರಬಿಟ್ಟಿಲ್ಲ. ತಲಾ ನಾಲ್ಕು ಹುಲಿ, ಸಿಂಹಗಳನ್ನು ತರಲಾಗಿದ್ದು, ಅವುಗಳನ್ನು ಪ್ರತ್ಯೇಕ ಮನೆಗಳಲ್ಲಿ ಇರಿಸಲಾಗಿದೆ. ಆದರೆ, ಇದುವರೆಗೆ ಅವುಗಳನ್ನು ಹೊರಗೆ ಬಿಟ್ಟಿಲ್ಲ. ಹೀಗಾಗಿ ಸಫಾರಿ ವೀಕ್ಷಣೆಗೆ ಬರುವ ಪ್ರವಾಸಿಗರನ್ನು ಹುಲಿ, ಸಿಂಹಗಳ ಮನೆ ಬಳಿ ಕರೆದೊಯ್ದು ತೋರಿಸಲಾಗುತ್ತಿದೆ.

‘ಹುಲಿ, ಸಿಂಹಗಳು ಬಂದು ನಾಲ್ಕೈದು ತಿಂಗಳಾಗಿವೆ. ಅವುಗಳು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಿವೆ. ಆದರೆ, ಸಫಾರಿಗೆ ಗುರುತಿಸಲಾಗಿರುವ ಸ್ಥಳದಲ್ಲಿ ಮುಳ್ಳು ಕಂಟಿಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ನಿಂತಿವೆ. ಅದನ್ನು ತೆರವುಗೊಳಿಸುವ ಕೆಲಸ ಭರದಿಂದ ನಡೆದಿದೆ. ಹಾಗೆಯೇ ಬಿಟ್ಟರೆ ಪ್ರಾಣಿಗಳಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಶೀಘ್ರದಲ್ಲೇ ಕೆಲಸ ಪೂರ್ಣಗೊಳ್ಳಲಿದ್ದು, ಅದಾದ ಬಳಿಕ ಎಲ್ಲ ಪ್ರಾಣಿಗಳನ್ನು ಮುಕ್ತವಾದ ಪರಿಸರದಲ್ಲಿ ಬಿಡಲಾಗುವುದು’ ಎಂದು ಉದ್ಯಾನದ ವಲಯ ಅರಣ್ಯ ಅಧಿಕಾರಿ ರಮೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಫಾರಿ ಎಂದರೆ ಪ್ರಾಣಿಗಳು ಮುಕ್ತವಾಗಿ ಓಡಾಡಿಕೊಂಡು ಇರಬೇಕು. ಆದರೆ, ತಿಂಗಳಾದರೂ ಅವುಗಳನ್ನು ಹೊರಗೆ ಬಿಟ್ಟಿಲ್ಲ. ಅವುಗಳನ್ನು ಮನೆಯಲ್ಲಿ ಇರಿಸಿದ್ದಾರೆ. ಜನರಿಗೆ ಹತ್ತಿರ ಕೊಂಡೊಯ್ದು ತೋರಿಸುತ್ತಿದ್ದಾರೆ. ಇದು ಸಫಾರಿ ಎಂದು ಕರೆಸಿಕೊಳ್ಳುವುದಿಲ್ಲ ಬದಲಾಗಿ ಮೃಗಾಲಯ ಎನ್ನಬಹುದು. ಕೆಲಸ ಅಪೂರ್ಣವಾಗಿದ್ದರೆ ಇನ್ನೂ ಆರಂಭಿಸಬಾರದಿತ್ತು. ದೂರದಿಂದ ಬರುವವರಿಗೆ ನಿರಾಸೆಯಾಗುತ್ತಿದೆ’ ಎಂದು ಬೆಂಗಳೂರಿನ ಪ್ರವಾಸಿ ಅಲ್ಲಮಪ್ರಭು ತಿಳಿಸಿದರು.

‘ಸಫಾರಿ ಆರಂಭಗೊಂಡ ವಿಷಯ ಮಾಧ್ಯಮಗಳಿಂದ ಗೊತ್ತಾಯಿತು. ಹಂಪಿ ನೋಡಿಕೊಂಡು ವಾಜಪೇಯಿ ಉದ್ಯಾನಕ್ಕೆ ಬಂದಿದ್ದೆವು. ಆದರೆ, ಇಲ್ಲಿ ಸಫಾರಿ ಮುಗಿಸಿದ ನಂತರ ನಿರಾಸೆಯಾಯಿತು. ಪ್ರಾಣಿಗಳ ಉತ್ತಮವಾದ ಛಾಯಾಚಿತ್ರಗಳನ್ನು ತೆಗೆಯಬೇಕೆಂಬ ಆಸೆ ಈಡೇರಲಿಲ್ಲ’ ಎಂದು ಗೋಳು ತೋಡಿಕೊಂಡರು.

ಅನಾರೋಗ್ಯದಿಂದ ‘ಚಾಮುಂಡಿ’ ಮೈಸೂರಿಗೆ:ಅನಾರೋಗ್ಯಕ್ಕೆ ಈಡಾಗಿರುವ ‘ಚಾಮುಂಡಿ’ ಹೆಸರಿನ ಹುಲಿಗೆ ಚಿಕಿತ್ಸೆಗೆ ಕೊಡಿಸಲು ಮೈಸೂರಿಗೆ ಕೊಂಡೊಯ್ಯಲಾಗಿದೆ.

ಚಾಮುಂಡಿ ಉದ್ಯಾನಕ್ಕೆ ಬಂದು ಎರಡು ತಿಂಗಳಷ್ಟೇ ಕಳೆದಿವೆ. ಅಷ್ಟರಲ್ಲೇ ಅದು ಅನಾರೋಗ್ಯಕ್ಕೆ ಈಡಾಗಿದೆ. ಈ ಕುರಿತು ವಲಯ ಅರಣ್ಯ ಅಧಿಕಾರಿ ರಮೇಶ ಅವರನ್ನು ಕೇಳಿದಾಗ, ‘ಹುಲಿಯ ಪಟ್ಟಿಯಲ್ಲಿ ಗಂಟು ಕಾಣಿಸಿಕೊಂಡಿತ್ತು. ಮೈಸೂರಿನ ಪ್ರಾಣಿ ಸಂಗ್ರಹಾಲಯದಲ್ಲಿ ನುರಿತ ಪ್ರಾಣಿಗಳ ವೈದ್ಯರು ಇರುವುದರಿಂದ ಅಲ್ಲಿಗೆ ಚಿಕಿತ್ಸೆಗೆ ಕಳುಹಿಸಿಕೊಡಲಾಗಿದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಪ್ರಾಣಿಗಳಲ್ಲಿ ಸಾಮಾನ್ಯವಾಗಿ ಆಗಾಗ ಕೆಲ ರೋಗಗಳು ಕಾಣಿಸಿಕೊಳ್ಳುತ್ತವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.