ಹೊಸಪೇಟೆ: ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬುಧವಾರ ಸಂಜೆ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ‘ಗೌರಿ ಲಂಕೇಶ್ ನೆನಪು’ ಕಾರ್ಯಕ್ರಮ ಆಚರಿಸಲಾಯಿತು.
ಮೇಣದ ದೀಪಗಳನ್ನು ಬೆಳಗಿ, ಒಂದು ನಿಮಿಷ ಮೌನ ಆಚರಿಸಿ, ಗೌರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಲೇಖಕಿ ನಾಗವೇಣಿ ಸೋಸಲೆ ಮಾತನಾಡಿ, ‘ಗೌರಿ ಲಂಕೇಶ್ ಹತ್ಯೆಯಾಗಿ ಬುಧವಾರಕ್ಕೆ ಒಂದು ವರ್ಷವಾಗಿದೆ. ಇತ್ತೀಚೆಗಷ್ಟೇ ಕೊಲೆಗಾರರನ್ನು ಬಂಧಿಸಲಾಗಿದೆ. ಇಷ್ಟೊಂದು ವಿಳಂಬವಾದರೆ ನ್ಯಾಯ ಸಿಗುವುದು ಯಾವಾಗ?’ ಎಂದು ಪ್ರಶ್ನಿಸಿದರು.
‘ರಾಜಕೀಯ ಉದ್ದೇಶಕ್ಕಾಗಿ ಸಾಹಿತಿ, ಚಿಂತಕರನ್ನು ಹಣಿಯುವ ಕೆಲಸ ಆಗಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಬಾರದು’ ಎಂದು ಹೇಳಿದರು.
ಒಕ್ಕೂಟದ ಸಂಚಾಲಕ ದುರುಗಪ್ಪ ಪೂಜಾರ ಮಾತನಾಡಿ, ‘ರಾಜಕೀಯ ಲಾಭಕ್ಕಾಗಿ ಕೆಲವರು, ಯುವಕರನ್ನು ಧರ್ಮ, ರಾಷ್ಟ್ರೀಯತೆಯ ಹೆಸರಿನಲ್ಲಿ ದಿಕ್ಕು ತಪ್ಪಿಸುತ್ತಿದ್ದಾರೆ. ಅದಕ್ಕೆ ಯುವಕರು ಬಲಿಯಾಗಬಾರದು’ ಎಂದು ಕಿವಿಮಾತು ಹೇಳಿದರು.
ಒಕ್ಕೂಟದ ಪದಾಧಿಕಾರಿಗಳಾದ ಭಾಗ್ಯಲಕ್ಷ್ಮಿ ಭರಾಡೆ, ನೂರ್ ಜಹಾನ್, ಅಂಜಲಿ ಬೆಳಗಲ್, ವೆಂಕಟೇಶ, ಜಂಬಯ್ಯ ನಾಯಕ, ಗುಜ್ಜಲ್ ನಾಗರಾಜ್, ನಿಂಬಗಲ್ ರಾಮಕೃಷ್ಣ, ಮಧುರ ಚೆನ್ನ ಶಾಸ್ತ್ರಿ, ಕಿಚಡಿ ಚನ್ನಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.