ADVERTISEMENT

ಹೂವಿನಹಡಗಲಿ: ಅತಿಥಿ ಉಪನ್ಯಾಸಕರಿಗೆ ವರ್ಷದಿಂದಿಲ್ಲ ಸಂಬಳ

ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 24 ಜನ ಉಪನ್ಯಾಸಕರು

ಕೆ.ಸೋಮಶೇಖರ
Published 6 ನವೆಂಬರ್ 2021, 7:53 IST
Last Updated 6 ನವೆಂಬರ್ 2021, 7:53 IST
ಹೂವಿನಹಡಗಲಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು
ಹೂವಿನಹಡಗಲಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು   

ಹೂವಿನಹಡಗಲಿ: ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 24 ಜನ ಅತಿಥಿ ಉಪನ್ಯಾಸಕರಿಗೆ ವರ್ಷದಿಂದ ವೇತನ ಸಿಕ್ಕಿಲ್ಲ. ಜೀವನ ನಿರ್ವಹಣೆಗೆ ಆಸರೆಯಾಗಿದ್ದ ವೇತನವೂ ಸಕಾಲದಲ್ಲಿ ದೊರೆಯದೇ ಉಪನ್ಯಾಸಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಕಾಲೇಜು ಮುಚ್ಚಿದ್ದರಿಂದ ಅತಿಥಿ ಉಪನ್ಯಾಸಕರು ಆನ್‌ಲೈನ್ ತರಗತಿ ನಡೆಸಿದ್ದಾರೆ. ಮೊದಲ ಸೆಮಿಸ್ಟರ್‌ನ ನಾಲ್ಕು ತಿಂಗಳು ಭೌತಿಕ ತರಗತಿ ನಿಭಾಯಿಸಿದ್ದಾರೆ. ವಿಶ್ವವಿದ್ಯಾಲಯ ನಿಗದಿಪಡಿಸಿದ ವೇಳಾಪಟ್ಟಿಯಂತೆ ಶೈಕ್ಷಣಿಕ ಚಟುವಟಿಕೆ ಪೂರ್ಣಗೊಳಿಸಿದ್ದರೂ ಉಪನ್ಯಾಸಕರಿಗೆ ವೇತನ ಬಿಡುಗಡೆಯಾಗಿಲ್ಲ.

ಪಟ್ಟಣದಲ್ಲಿ 12 ವರ್ಷಗಳ ಹಿಂದೆ ಪ್ರಾರಂಭವಾಗಿರುವ ಕಾಲೇಜು ಕಳೆದ ವರ್ಷವಷ್ಟೇ ಹುಲಿಗುಡ್ಡದಲ್ಲಿರುವ ಸುಸಜ್ಜಿತ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಕಾಲೇಜಿನಲ್ಲಿ ಕಾಯಂ ಬೋಧಕ ಸಿಬ್ಬಂದಿಯಿಲ್ಲದೇ ಅತಿಥಿ ಉಪನ್ಯಾಸಕರೇ ಆಧಾರ ಸ್ತಂಭವಾಗಿದ್ದಾರೆ. ವರ್ಷದಲ್ಲಿ ಇವರಿಗೆ ಸಿಗುವುದು ಎಂಟು ತಿಂಗಳ ಬೋಧನಾ ಕೆಲಸ. ಆ ಅವಧಿಗೆ ಸಂಬಳ ಮಾತ್ರ. ಒಂದು ವರ್ಷದಿಂದ ವೇತನ ದೊರೆಯದೇ ಇವರು ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ.

ADVERTISEMENT

ಮನೆ ಬಾಡಿಗೆ ಕಟ್ಟಲೂ ಹಣ ಇಲ್ಲದೇ ಅತಿಥಿ ಉಪನ್ಯಾಸಕರು ತೊಂದರೆ ಅನುಭವಿಸುತ್ತಿದ್ದಾರೆ. ಕೈ ಸಾಲ ಕೊಟ್ಟವರಿಗೆ ಸಕಾಲದಲ್ಲಿ ಹಿಂತಿರುಗಿಸಲಾಗದೇ ಮುಜಗರಕ್ಕೆ ಒಳಗಾಗಿದ್ದಾರೆ. ಒಂದೆಡೆ ಆರ್ಥಿಕ ದುಃಸ್ಥಿತಿ, ಮತ್ತೊಂದೆಡೆ ಇರುವ ಸಂಬಳವನ್ನೇ ಪೂರ್ಣ ನೀಡದೇ ಕಡಿತಗೊಳಿಸುತ್ತಿರುವುದರಿಂದ ಆತಂಕಕ್ಕೆ ಒಳಗಾಗಿದ್ದಾರೆ.

‘ದೇವರು ವರ ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ’: ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಅತಿಥಿ ಉಪನ್ಯಾಸಕರ ವೇತನವನ್ನು ಉನ್ನತ ಶಿಕ್ಷಣ ಇಲಾಖೆ ಕಳೆದ ವರ್ಷ ಪರಿಷ್ಕರಿಸಿ, ₹10 ಸಾವಿರದಿಂದ ₹15 ಸಾವಿರಕ್ಕೆ ಹೆಚ್ಚಳ ಮಾಡಿದೆ. ‘ದೇವರು ವರ ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ’ ಎಂಬ ಮಾತಿನಂತೆ ಸರ್ಕಾರ ಪೂರ್ಣ ವೇತನ ಬಿಡುಗಡೆಗೊಳಿಸಿದರೂ ಕಾಲೇಜಿನ ಪ್ರಾಚಾರ್ಯರು ಕಾರ್ಯಾಭಾರದ ತಾಂತ್ರಿಕ ನೆಪವೊಡ್ಡಿ ವೇತನ ಕಡಿತಗೊಳಿಸುತ್ತಿದ್ದಾರೆ ಎಂದು ಅತಿಥಿ ಉಪನ್ಯಾಸಕರು ದೂರಿದ್ದಾರೆ.

‘ತಾಂತ್ರಿಕ ವಿಶ್ವವಿದ್ಯಾಲಯ ನಿಗದಿಗೊಳಿಸುವ ವೇಳಾಪಟ್ಟಿ, ಕಾರ್ಯಾಭಾರ ಅನುಸಾರ ಅತಿಥಿ ಉಪನ್ಯಾಸಕರಿಗೆ ಸರ್ಕಾರ ವೇತನ ಬಿಡುಗಡೆಗೊಳಿಸುತ್ತದೆ. ಸೆಮಿಸ್ಟರ್ ಅವಧಿಯ ಬೋಧನೆಗೆ ಸರ್ಕಾರ ನಾಲ್ಕು ತಿಂಗಳ ವೇತನ ನೀಡಿದ್ದರೂ ಇಲ್ಲಿನ ಕಾಲೇಜಿನ ಪ್ರಾಚಾರ್ಯರು ಎರಡೂವರೆ, ಮೂರು ತಿಂಗಳ ವೇತನವನ್ನಷ್ಟೇ ನೀಡುತ್ತಾರೆ. ಕಾಲೇಜು ಖಾತೆಯಲ್ಲಿ ಉಳಿಯುವ ವೇತನದಿಂದ ಕಡಿತಗೊಳಿಸಿರುವ ಹಣವನ್ನು ಮಿಸಲೇನಿಯಸ್ ಹೆಸರಲ್ಲಿ ಡ್ರಾ ಮಾಡುತ್ತಾರೆ’ ಎಂದು ಹೆಸರು ಹೇಳಲಿಚ್ಚಿಸದ ಅತಿಥಿ ಉಪನ್ಯಾಸಕರೊಬ್ಬರು ತಿಳಿಸಿದ್ದಾರೆ.

‘ಕಾಲೇಜಿನಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ‘ಡಿ’ ಗ್ರೂಪ್ ಸಿಬ್ಬಂದಿಗೆ ಆಯಾ ಏಜೆನ್ಸಿಗಳಿಂದ ಪ್ರತಿ ತಿಂಗಳು ₹12,500 ಬ್ಯಾಂಕ್ ಖಾತೆಗೆ ನೇರ ವೇತನ ಜಮೆಯಾಗುತ್ತದೆ. ಸ್ನಾತಕೋತ್ತರ ಪದವಿ ಪಡೆದ ನಮ್ಮ ಪರಿಸ್ಥಿತಿ ‘ಡಿ’ ಗ್ರೂಪ್ ಸಿಬ್ಬಂದಿಗಿಂತ ಕಡೆಯಾಗಿದೆ. ನಾನಾ ನೆಪ ಹೇಳಿ ಸಂಬಳ ಕಡಿತ ಮಾಡುತ್ತಿರುವುದರಿಂದ ‘ಡಿ’ ಗ್ರೂಪ್ ಸಿಬ್ಬಂದಿಗೆ ಸಿಗುವ ಸಂಬಳವೂ ಸಿಗುತ್ತಿಲ್ಲ’ ಎಂದು ಅತಿಥಿ ಉಪನ್ಯಾಸಕರು ಅಳಲು ತೋಡಿಕೊಂಡಿದ್ದಾರೆ.

‘ಈ ಹಿಂದೆ ಅತಿಥಿ ಉಪನ್ಯಾಸಕರ ಹೆಸರಲ್ಲಿ ಬೋಗಸ್ ಕಾರ್ಯಾಭಾರ ಸೃಷ್ಟಿಸಿ ಹಣ ದುರುಪಯೋಗಪಡಿಸಿಕೊಂಡ ಪ್ರಕರಣಗಳು ಈ ಕಾಲೇಜಿನಲ್ಲಿ ನಡೆದಿದ್ದವು. ಈಗಲೂ ಸರ್ಕಾರ ನೀಡಿದ ಪೂರ್ಣ ವೇತನ ನೀಡದೇ ಕಡಿತಗೊಳಿಸುತ್ತಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿ, ತಮಗೆ ನ್ಯಾಯ ದೊರಕಿಸಿಕೊಡಬೇಕು. ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ಶೋಷಣೆ ತಪ್ಪಿಸಬೇಕು’ ಎಂದು ಅತಿಥಿ ಉಪನ್ಯಾಸಕರು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.