ADVERTISEMENT

ತೆಕ್ಕಲಕೋಟೆ: ಸಮಸ್ಯೆಗಳ ಆಗರವಾದ ಸರ್ಕಾರಿ ಆಸ್ಪತ್ರೆ

ತೆಕ್ಕಲಕೋಟೆಯ ಭಾಗದ ಜನರ ನಿಲ್ಲದ ಪರದಾಟ

​ಪ್ರಜಾವಾಣಿ ವಾರ್ತೆ
Published 25 ಜೂನ್ 2023, 5:13 IST
Last Updated 25 ಜೂನ್ 2023, 5:13 IST
ತೆಕ್ಕಲಕೋಟೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂದೇ ಬೆಡ್ ಮೇಲೆ ಎರಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು
ತೆಕ್ಕಲಕೋಟೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂದೇ ಬೆಡ್ ಮೇಲೆ ಎರಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು   

ಚಾಂದ್ ಬಾಷ

ತೆಕ್ಕಲಕೋಟೆ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವು ಕಾಯಂ ವೈದ್ಯ, ಔಷಧ ತಜ್ಞರ ಕೊರತೆ, ಆಯುಶ್ ವೈದ್ಯಾಧಿಕಾರಿ, ಅಸಮರ್ಪಕ ಆಂಬುಲೆನ್ಸ್ ಸೇವೆ, ಗಬ್ಬುನಾರುವ ಆಸ್ಪತ್ರೆಯ ಒಳಾಂಗಣ, ಶೌಚಾಲಯ ಹಾಗೂ ರೋಗಿಗಳಿಗೆ ಸಕಾಲಕ್ಕೆ ದೊರಕದ ಚಿಕಿತ್ಸೆ ಸೇರಿದಂತೆ ಇತರ ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ.

ಪಟ್ಟಣವು 20 ವಾರ್ಡ್‌ಗಳನ್ನು ಹೊಂದಿ 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಒಳಗೊಂಡ ದೊಡ್ಡ ಪಟ್ಟಣವಾಗಿದೆ. ಅಲ್ಲದೆ ಬಲಕುಂದಿ, ನಿಟ್ಟೂರು, ಉಡೇಗೋಳ, ಹಳೇಕೋಟೆ ಸೇರಿದಂತೆ ಹಲವು ಗ್ರಾಮಗಳಿಗೆ ಕೇಂದ್ರ ಸ್ಥಾನವೂ ಆಗಿದೆ.

ADVERTISEMENT

ಕಳೆದ ಕೆಲವು ವರ್ಷಗಳಿಂದ ಆರೋಗ್ಯ ಇಲಾಖೆಯು ಆಸ್ಪತ್ರೆಗೆ ಕಾಯಂ ವೈದ್ಯ, ಔಷಧಿ ತಜ್ಞ ಸೇರಿದಂತೆ ಇತರ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡದೇ ಕಾಲಹರಣ ಮಾಡಿ, ಬಡ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

23 ಕಾಯಂ ಸಿಬ್ಬಂದಿ ಇರಬೇಕಾದ ಆಸ್ಪತ್ರೆಯಲ್ಲಿ ಪ್ರಸ್ತುತ ಅರವಳಿಕೆ ತಜ್ಞ, ಒಬ್ಬ ಮಕ್ಕಳ ತಜ್ಞರು, ಒಬ್ಬ ದಂತ ವೈದ್ಯಾಧಿಕಾರಿ ಸೇರಿದಂತೆ ಹತ್ತು ಜನ ಮಾತ್ರ ಬೆಳಿಗ್ಗೆಯಿಂದ ಸಂಜೆಯವರೆಗೂ ಸೇವೆ ಸಲ್ಲಿಸುತ್ತಾರೆ. ರಾತ್ರಿ ಸಮಯದಲ್ಲಿ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿ ಕೊರತೆಯಿಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸೇರಿದಂತೆ ಇತರ ಬಡ ರೋಗಿಗಳು ಸೂಕ್ತ ಚಿಕಿತ್ಸೆಗಾಗಿ ಪರದಾಡುವುದು ಸಾಮಾನ್ಯವಾಗಿದೆ.

ಕೇಂದ್ರದಲ್ಲಿ ಸಿಬ್ಬಂದಿ ಸಣ್ಣ ಪುಟ್ಟ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ನೀಡದೇ ನೇರವಾಗಿ ಸಿರುಗುಪ್ಪ ತಾಲ್ಲೂಕು ಆಸ್ಪತ್ರೆಗೆ ತೆರಳುವಂತೆ ಸೂಚಿಸುವುದು, ಎಲ್ಲ ಕಾಯಿಲೆಗಳಿಗೂ ಒಂದೇ ತರಹದ ಔಷಧ ನೀಡುವುದು ಹಾಗೂ ಗಾಯ, ಜ್ವರ ಹಾಗೂ ರಕ್ತ ವೃದ್ಧಿಯ ಮಾತ್ರೆ ಸೇರಿದಂತೆ ಇತರೆ ಅವಶ್ಯಕ ಮಾತ್ರೆಗಳನ್ನು ಹೊರ ತರುವಂತೆ ಚೀಟಿ ಬರೆಯುವುದು ಸಾಮಾನ್ಯವಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ.

ಇತ್ತೀಚೆಗೆ ತಾಲ್ಲೂಕು ವೈದ್ಯಾಧಿಕಾರಿ ಈರಣ್ಣ ಆಸ್ಪತ್ರೆಗೆ ಭೇಟಿ ನೀಡಿ ರಾತ್ರಿ ವೇಳೆ ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು ಅಲ್ಲಿನ ಅವ್ಯವಸ್ಥೆ ಕಂಡು ತರಾಟೆಗೆ ತೆಗೆದುಕೊಂಡಿದ್ದರು.

‘ಆರೋಗ್ಯ ಕೇಂದ್ರದಲ್ಲಿ ಇರುವ ಎಲ್ಲ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಸಿದ್ದವೇಂದ್ರ ಬಾಲಪ್ಪ ಒತ್ತಾಯಿಸಿದರು.

ತೆಕ್ಕಲಕೋಟೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ಬಂದ ಜನ
ತೆಕ್ಕಲಕೋಟೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಹೊರ ನೋಟ
ಕೇಂದ್ರದಲ್ಲಿನ ಖಾಲಿ ಹುದ್ದೆಗಳ ಕುರಿತಂತೆ ಕೆಡಿಪಿ ಸಭೆಯಲ್ಲಿ ಶಾಸಕರ ಗಮನಕ್ಕೆ ತರಲಾಗಿದೆ. ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಶುಚಿತ್ವ ಹಾಗು ಜನರೇಟರ್ ಸಮಸ್ಯೆ ಶೀಘ್ರ ಬಗೆಹರಿಸಲಾಗುವುದು.
ಡಾ.ಡಿ.ಈರಣ್ಣ ತಾಲ್ಲೂಕು ವೈದ್ಯಾಧಿಕಾರಿ ಸಿರುಗುಪ್ಪ

ವಿದ್ಯುತ್ ಸಮಸ್ಯೆ: ಕಾರ್ಯಾಚರಿಸದ ಜನರೇಟರ್ ಆರೋಗ್ಯ ಕೇಂದ್ರದಲ್ಲಿ 40ಕ್ಕೂ ಹೆಚ್ಚು ಕೊಠಡಿಗಳಿದ್ದು 25 ಕೆವಿ ಜನರೇಟರ್ ಹಾಕಿದ್ದಾರೆ. ಇಲ್ಲಿ ಶಸ್ತ್ರಚಿಕಿತ್ಸಾ ವಿಭಾಗವೂ ಇರುವುದರಿಂದ 100 ಕೆವಿ ಜನರೇಟರ್ ಅಗತ್ಯಇದೆ. ಕೇವಲ 25 ಕೆವಿ ಜನರೇಟರ್ ಇರುವುದರಿಂದ ಸದಾ ವಿದ್ಯುತ್ ಸಮಸ್ಯೆ ಸಾಮಾನ್ಯವಾಗಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ವೈದಾಧಿಕಾರಿ ಡಾ.ದಿನೇಶ್. ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗೆ ವಸತಿ ಗೃಹ ಇಲ್ಲ. ರಾತ್ರಿ ಪಾಳಿಯ ನಂತರ ಹಗಲಿನಲ್ಲಿ ಕಾರ್ಯನಿರ್ವಹಿಸಲು ಸಾಮಾನ್ಯ ವೈದ್ಯಾಧಿಕಾರಿಗಳು (ಪಿಡಿಎಂಒ) ಇರುವುದಿಲ್ಲ. ಹೀಗಿರುವಾಗ ರಾತ್ರಿ ವೈದ್ಯರು ಇರುವುದು ಸಮಸ್ಯೆಯಾಗಿದೆ ಎಂದು ಸಿಬ್ಬಂದಿ ತಮ್ಮ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.