ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಐದು ಸರ್ಕಾರಿ ವಿದ್ಯಾರ್ಥಿ ನಿಲಯಗಳು ಹಲವು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲೇ ನಡೆಯುತ್ತಿವೆ.
ತಾಲ್ಲೂಕಿನ ರಾಮನಗರದ ಪರಿಶಿಷ್ಟ ಪಂಗಡದವರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯವಂತೂ ವೆಂಕೋಬಣ್ಣನವರ ಧರ್ಮಛತ್ರದಲ್ಲಿ ನಡೆಯುತ್ತಿದೆ. ಕಳೆದ ಐದು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯು ಈ ಕಟ್ಟಡವನ್ನು ಬಾಡಿಗೆಗೆ ಪಡೆದು ನಡೆಸುತ್ತಿದೆ. ಇದಕ್ಕೂ ಮುನ್ನ ಬಂಡಿಹಳ್ಳಿ ರಸ್ತೆಯ ಖಾಸಗಿ ಕಟ್ಟಡದಲ್ಲಿತ್ತು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳು ಇಲ್ಲದ ಕಾರಣ ಸ್ಥಳಾಂತರಿಸಲಾಗಿದೆ. ಧರ್ಮಛತ್ರದಲ್ಲಿ ವಿದ್ಯಾರ್ಥಿಗಳ ವಾಸಕ್ಕೆ ಅಗತ್ಯ ಕೊಠಡಿಗಳಿವೆ. ಆದರೆ, ಕಟ್ಟಡ ಹಳೆಯದಾಗಿರುವುದರಿಂದ ಮಳೆ ಬಂದರೆ ನೀರು ಜಿನುಗುತ್ತದೆ. ವಿದ್ಯಾರ್ಥಿಗಳು ಉಪಾಹಾರ, ಊಟ ಮತ್ತು ಅಧ್ಯಯನ ಒಂದೇ ಸಭಾಂಗಣದಲ್ಲೇ ಮಾಡುತ್ತಿದ್ದಾರೆ.
‘ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಎರಡು ಕಟ್ಟಡಗಳಿಗೆ ತಿಂಗಳಿಗೆ ₨21ಸಾವಿರ ಬಾಡಿಗೆ ನೀಡಲಾಗುತ್ತಿದೆ. ವೆಂಕೋಬಣ್ಣ ಧರ್ಮ ಛತ್ರದಲ್ಲಿರುವ ವಿದ್ಯಾರ್ಥಿ ನಿಲಯಕ್ಕೆ ಬಾಡಿಗೆ ಇನ್ನೂ ನಿಗದಿಯಾಗಿಲ್ಲ’ ಎಂದು ಇಲಾಖೆಯ ಸಹಾಯಕ ನಿರ್ದೇಶಕ ವೀರಾಚಾರಿ ತಿಳಿಸಿದರು.
ಪರಿಶಿಷ್ಟ ಜಾತಿಯ ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಹೌಸಿಂಗ್ ಬೋರ್ಡ್ ಕಾಲೊನಿಯ ಎರಡು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಒಟ್ಟು 80 ವಿದ್ಯಾರ್ಥಿನಿಯರು ಇದ್ದಾರೆ. ಒಂದು ಕಟ್ಟಡ ವಿದ್ಯಾರ್ಥಿನಿಯರು ಆಹಾರ ಸೇವಿಸಲು, ಇನ್ನೊಂದು ವಾಸ್ತವ್ಯಕ್ಕೆ ಉಪಯೋಗಿಸಲಾಗುತ್ತಿದೆ. ಆಟದ ಮೈದಾನ ಸೇರಿದಂತೆ ಯಾವುದೇ ವ್ಯವಸ್ಥೆ ಸರಿಯಾಗಿಲ್ಲ.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಕಳೆದ ಏಳು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಇಲ್ಲಿ 50 ವಿದ್ಯಾರ್ಥಿನಿಯರು ಇದ್ದಾರೆ. ಬಾಲಕಿಯರ ವಾಸ್ತವ್ಯಕ್ಕೆ ಅಗತ್ಯ ಕೊಠಡಿಗಳು ಇಲ್ಲ. ಇದರಿಂದಾಗಿ ಕೆಲವರು ಎಸ್ಟಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶಕ್ಕೆ ಅರ್ಜಿ ಹಾಕಿದ್ದಾರೆ. 50 ವಿದ್ಯಾರ್ಥಿನಿಯರಿಗೆ ನಾಲ್ಕು ಶೌಚಾಲಯ ಮತ್ತು ಅಷ್ಟೇ ಸ್ನಾನದ ಕೊಠಡಿಗಳು ಇವೆ. ಕಳೆದ ಎರಡು ತಿಂಗಳಿಂದ ಸೂಕ್ತ ಕಟ್ಟಡಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಕಟ್ಟಡ ದೊರೆತರೆ ಸ್ಥಳಾಂತರಿಸಲಾಗುವುದು ಎಂದು ಹಾಸ್ಟೆಲ್ ವಾರ್ಡನ್ ಸುಮಾ ತಿಳಿಸಿದರು. ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.