ADVERTISEMENT

ಕಂಪ್ಲಿ | ಗೌರಿ ಹುಣ್ಣಿಮೆ: ಗರಿಗೆದರಿದ ಆಚರಣೆ  

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 15:35 IST
Last Updated 14 ನವೆಂಬರ್ 2024, 15:35 IST
ಕಂಪ್ಲಿಯ ಕಲಾವಿದ ಭೂಸಾರೆ ಕೃಷ್ಣ ಕೈಚಳಕದಲ್ಲಿ ಸಿದ್ಧಗೊಂಡ ಗೌರಿದೇವಿಮೂರ್ತಿ ಮಾರಾಟ ಗುರುವಾರ ಜೋರಾಗಿತ್ತು
ಕಂಪ್ಲಿಯ ಕಲಾವಿದ ಭೂಸಾರೆ ಕೃಷ್ಣ ಕೈಚಳಕದಲ್ಲಿ ಸಿದ್ಧಗೊಂಡ ಗೌರಿದೇವಿಮೂರ್ತಿ ಮಾರಾಟ ಗುರುವಾರ ಜೋರಾಗಿತ್ತು   

ಕಂಪ್ಲಿ: ಗೌರಿ ಹುಣ್ಣಿಮೆ ಸಡಗರ ತಾಲ್ಲೂಕಿನಲ್ಲಿ ಗರಿಗೆದರಿದೆ. ಗೌರಿದೇವಿ ಮೂರ್ತಿಗಳ ಮಾರಾಟ ಜೋರಾಗಿದೆ.

ಸಕ್ಕರೆಯಿಂದ ತಯಾರಿಸಿದ ಗೌರಿದೇವಿ ಮೂರ್ತಿ, ಶಿವ ಪಾರ್ವತಿ, ಗಣೇಶ, ಗೋಪುರ, ಕಳಸ, ಆರತಿ ಅಚ್ಚು, ಕುದುರೆ, ಒಂಟೆ, ಆನೆ, ಅಂಬಾರಿ ಸೇರಿದಂತೆ ಇತ್ಯಾದಿ ಆಕರ್ಷಕ ವಿವಿಧ ವರ್ಣದ ಗೊಂಬೆಗಳ ಖರೀದಿಯೂ ಜೋರಾಗಿದೆ.

ಮಠ, ದೇವಸ್ಥಾನ, ಇನ್ನು ಹಲವೆಡೆ ಗ್ರಾಮದ ಮಠಸ್ಥರ ಮನೆಯಲ್ಲಿ ಗೌರಿದೇವಿ ಮೂರ್ತಿಯನ್ನು ನ.14ರಿಂದ ನ.16ರವರೆಗೆ ಪ್ರತಿಷ್ಠಾಪಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು ತಟ್ಟೆಯಲ್ಲಿ ಸಕ್ಕರೆ ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಅದರಲ್ಲಿ ದೀಪಗಳನ್ನು ಇರಿಸಿ ಪಟಾಕಿ ಸಿಡಿಸುತ್ತಾ ಗೌರಿದೇವಿಮೂರ್ತಿ ಪ್ರತಿಷ್ಠಾಪನೆ ಸ್ಥಳಕ್ಕೆ ತೆರಳಿ ಭಕ್ತಿಯಿಂದ ಆರತಿ ಬೆಳಗಿ ನಮಿಸುತ್ತಾರೆ.

ADVERTISEMENT

ನ.16ರಂದು ಗೌರಿದೇವಿಮೂರ್ತಿಯನ್ನು ವಿಜೃಂಭಣೆಯಿಂದ ವಿಸರ್ಜಿಸಿದ ನಂತರ ನ.17ರಂದು ಸಂಜೆ ಮನೆಯವರೆಲ್ಲರೂ ಮಾಳಿಗೆ ಮೇಲೆ ಕೊಂತಿ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ‘ಕೊಂತಿ (ಕೊಂತೆಮ್ಮ) ರೊಟ್ಟಿ’ ಹಬ್ಬವನ್ನು ಆಚರಿಸುತ್ತಾರೆ.

ಎಳ್ಳು ಹಚ್ಚಿದ ಜೋಳ ಮತ್ತು ಸಜ್ಜೆ ರೊಟ್ಟಿ, ಬದನೆ ಮತ್ತು ಹೀರೆಕಾಯಿಯಿಂದ ಸಿದ್ಧವಾದ ವಿಶೇಷ ಎಣ್ಣೆಗಾಯಿ, ಪುಂಡೆಪಲ್ಯೆ, ಹೆಸರುಕಾಳು ಪಲ್ಯೆ, ಅನ್ನ, ಚಿತ್ರಾನ್ನ, ಸಾಂಬಾರು, ತೊಗರಿಬೇಳೆ ಗಟ್ಟಿ ಪಪ್ಪು, ಗುರೆಳ್ಳುಪುಡಿ, ಶೇಂಗಾಚಟ್ನಿ, ಮಿರ್ಚಿ, ಬಜಿ, ಸಿಹಿ ಖರ್ಜಿಕಾಯಿ ಸೇರಿದಂತೆ ವಿವಿಧ ರುಚಿಕರ ವಿಶೇಷ ಖಾದ್ಯಗಳನ್ನು ಮನೆಯವರೆಲ್ಲರೂ ಬೆಳದಿಂಗಳಲ್ಲಿ ಸವಿಯುತ್ತಾರೆ. ಬಳಿಕ ಹಿರಿಯರಿಂದ ಹಿಡಿದು ಚಿಕ್ಕವರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.

ನಂತರ ಹತ್ತಿರದ ಬಾವಿ, ಕಾಲುವೆಗಳಲ್ಲಿ ಕೊಂತಿ ಮೂರ್ತಿಯನ್ನು ವಿಸರ್ಜಿಸುತ್ತಾರೆ. ಅಂದು ರಾತ್ರಿ ಹೆಂಗೆಳೆಯರೆಲ್ಲರೂ ಸೇರಿಕೊಂಡು ಗ್ರಾಮೀಣ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಕಂಪ್ಲಿ ತಾಲ್ಲೂಕು ದೇವಲಾಪುರ ಗ್ರಾಮದ ಬೂದಾಳು ರವಿ ಸಕ್ಕರೆಗೊಂಬೆಗಳ ಮಾರಾಟದಲ್ಲಿ ತೊಡಗಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.