ADVERTISEMENT

ತಾತ್ಕಾಲಿಕ ಮಳಿಗೆಯಲ್ಲಿ ಗ್ರಂಥಾಲಯ 

ವರ್ಷ ಕಳೆದರು ಮುಗಿಯದ ಕಾಮಗಾರಿ

ಪಂಡಿತಾರಾಧ್ಯ ಎಚ್.ಎಂ ಮೆಟ್ರಿ
Published 20 ಅಕ್ಟೋಬರ್ 2023, 4:39 IST
Last Updated 20 ಅಕ್ಟೋಬರ್ 2023, 4:39 IST
ಕಂಪ್ಲಿ ತಾಲ್ಲೂಕು ಹಂಪಾದೇವನಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಕಟ್ಟಡ ನಿರ್ಮಾಣ ಅಪೂರ್ಣಗೊಂಡಿದೆ
ಕಂಪ್ಲಿ ತಾಲ್ಲೂಕು ಹಂಪಾದೇವನಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಕಟ್ಟಡ ನಿರ್ಮಾಣ ಅಪೂರ್ಣಗೊಂಡಿದೆ   

ಕಂಪ್ಲಿ: ತಾಲ್ಲೂಕಿನ ಹಂಪಾದೇವನಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಅರಿವು ಕೇಂದ್ರ, ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಕಟ್ಟಡ ನಿರ್ಮಾಣ ಅಪೂರ್ಣಗೊಂಡಿದೆ.

ಕಳೆದ ಒಂದು ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಸದ್ಯ ಗ್ರಾಮ ಪಂಚಾಯಿತಿ ಮಳಿಗೆಯೊಂದರಲ್ಲಿ ತಾತ್ಕಾಲಿಕ ಗ್ರಂಥಾಲಯ ನಡೆಯುತ್ತಿದೆ. ಇರುವ ಸ್ಥಳದಲ್ಲಿಯೇ ರ್‍ಯಾಕ್‌ಗಳಲ್ಲಿ ಸುಮಾರು 3,981 ಪುಸ್ತಕಗಳನ್ನು ಜೋಡಿಸಿದ್ದು, ಗ್ರಂಥಾಲಯ ಓದುಗರಿಗೆ 10 ಚೇರ್, ಎರಡು ಟೇಬಲ್‍ಗಳನ್ನು ಅಳವಡಿಸಲಾಗಿದೆ.

ಇತ್ತೀಚೆಗೆ ಎರಡು ಕಂಪ್ಯೂಟರ್, ಟ್ಯಾಬ್, ಸ್ಮಾಟ್ ಫೋನ್, ಪ್ರೊಜೆಕ್ಟರ್, ಹೋಮ್ ಥೇಟರ್ ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಗ್ರಂಥಾಲಯಕ್ಕೆ ಒದಗಿಸಲಾಗಿದೆ. ಆದರೆ, ಸ್ಥಳದ ಅಭಾವದಿಂದ ಓದುಗರಿಗೆ, ವಿದ್ಯಾರ್ಥಿಗಳಿಗೆ ಅವು ಬಳಕೆಯಾಗುತ್ತಿಲ್ಲ.

ADVERTISEMENT

‘ನಿರ್ಮಾಣ ಹಂತದಲ್ಲಿರುವ ಗ್ರಂಥಾಲಯ ಕಟ್ಟಡದ ಒಳಗಿರುವ ಸೀಲಿಂಗ್‍ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಹಿಂದೆ ಮಳೆ ಬಂದಾಗ ಚಾವಣಿ ಮೂಲಕ ಒಳಗೆ ನೀರು ಸೋರಿಕೆಯಾಗಿರುವುದು ನೋಡಿದರೆ ಕಳಪೆ ಕಾಮಗಾರಿಯಾಗಿರುವುದು ಕಂಡು ಬರುತ್ತದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಿ. ಕವಿತಾ ಪಂಪನಗೌಡ ಶಂಕೆ ವ್ಯಕ್ತಪಡಿಸಿದರು.

ಈ ಕುರಿತು ಸಂಬಂಧಪಟ್ಟ ಎಂಜಿನಿಯರ್ ಮತ್ತು ಗುತ್ತಿಗೆದಾರರ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು. ಕಾಮಗಾರಿ ವಿಳಂಬದ ಬಗ್ಗೆ ಮುಂದಿನ ಸಾಮಾನ್ಯಸಭೆಯಲ್ಲಿ ಚರ್ಚಿಸಿ ಮೇಲಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ಆಡಳಿತದಿಂದ ಮನವಿ ಸಲ್ಲಿಸುವುದಾಗಿ ಸ್ಪಷ್ಟಪಡಿಸಿದರು.

ಗ್ರಂಥಾಲಯ ಕಾಮಗಾರಿ ತ್ವರಿತವಾಗಿ ಪೂರೈಸಿ ಕಂಪ್ಯೂಟರ್ ಅಳವಡಿಸಿ ಇಂಟರ್ ನೆಟ್ ಸೌಲಭ್ಯ ಕಲ್ಪಿಸಬೇಕು. ಅದರಿಂದ ಆನ್‍ಲೈನ್‍ನಲ್ಲಿ ಪಠ್ಯಪುಸ್ತಕ ಶೋಧಿಸಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.
ಎ. ಸುರೇಶ್ ಬಿಎಎಲ್‍ಎಲ್‍ಬಿ ವಿದ್ಯಾರ್ಥಿ ಹಂಪಾದೇವನಹಳ್ಳಿ
ಪ್ರಸ್ತುತ ಗ್ರಂಥಾಲಯಕ್ಕೆ ತಾಲ್ಲೂಕು ಪಂಚಾಯಿತಿಯಿಂದ ₹ 17ಲಕ್ಷ ಅನುದಾನ ಮಂಜೂರಾಗಿದೆ. ಗುತ್ತಿಗೆದಾರರಿಗೆ ಹಣ ಪಾವತಿ ವಿಳಂಬವಾಗಿದ್ದರಿಂದ ಕಾಮಗಾರಿಗೆ ಹಿನ್ನಡೆಯಾಗಿದೆ. ಒಂದು ತಿಂಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಈಗಾಗಲೇ ಸೂಚಿಸಲಾಗಿದೆ.
ಕೆ. ರುದ್ರಮುನಿ ಕೆ.ಆರ್.ಐ.ಡಿ.ಎಲ್ ಕನ್ಸ್‍ಲಟ್ ಎಂಜಿನಿಯರ್ ಬಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.