ಬಳ್ಳಾರಿ: ಪಿಂಚಣಿ ಹಣದಲ್ಲಿ ಕಡಿತ ಮಾಡಿರುವ ಹೆಚ್ಚುವರಿ ಹಣ ವಾಪಸ್‌ಗೆ ಆಗ್ರಹಿಸಿ ಸೋಮವಾರದಿಂದ ಸುಡು ಬಿಸಿಲಿನಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರು ನಡೆಸುತ್ತಿರುವ ಧರಣಿ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿತು.
ಬಳ್ಳಾರಿಯಲ್ಲಿ ತಡೆಯಲಾಗದಷ್ಟು ಬಿಸಿಲಿತ್ತು. ಮಂಗಳವಾರ ಬಿಸಿಲಿನ ತಾಪಮಾನ 40° ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿತ್ತು. ಬಿಸಿಲಲ್ಲಿ ಕುಳಿತಿದ್ದರೂ ಪೊಲೀಸರು ಟೆಂಟ್ ಹಾಕಲು ಅವಕಾಶ ಕೊಡಲಿಲ್ಲ. ಕೊನೆಗೆ ವಯೋವೃದ್ಧ ನಿವೃತ್ತ ನೌಕರರು ಛತ್ರಿಗಳನ್ನು ಹಿಡಿದು ಗಾಂಧಿ ನಗರದಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿ ಎದುರಿನ ಪಾದಚಾರಿ ಮಾರ್ಗದಲ್ಲಿ ಕುಳಿತಿದ್ದಾರೆ.
ಈ ಮಧ್ಯೆ, ಬ್ಯಾಂಕ್ ಆಡಳಿತ ಮಂಡಳಿ ಪ್ರತಿಭಟನಾಕಾರರನ್ನು ಕರೆದು ಮಾತುಕತೆ ನಡೆಸಲು ಪ್ರಯತ್ನಿಸಿತು. ಆದರೆ, ಬೇಡಿಕೆ ಈಡೇರಿಕೆ ಕುರಿತು ಲಿಖಿತ ಭರವಸೆ ನೀಡಬೇಕೆಂದು ನಿವೃತ್ತ ನೌಕರರು ಪಟ್ಟು ಹಿಡಿದಿದ್ದಾರೆ ಎಂದು ಕೆಜಿಬಿ ಬ್ಯಾಂಕ್ ಅಧ್ಯಕ್ಷ ಶ್ರೀನಾಥ್ ಜೋಶಿ ‘ಪ್ರಜಾವಾಣಿ’ಗೆ ತಿಳಿಸಿದರು.
ನೌಕರರ ಹೆಚ್ಚುವರಿ ಪಾವತಿ ವಾಪಸ್‌ಗೆ ಸಂಬಂಧಿಸಿದಂತೆ ಅಧಿಕ ಸದಸ್ಯರನ್ನು ಹೊಂದಿರುವ ನಿವೃತ್ತ ನೌಕರರ ಸಂಘಟನೆ ಜತೆ ಮಾತುಕತೆ ನಡೆಸಲಾಗಿದೆ. ಹೆಚ್ಚುವರಿ ಹಣ ಹಿಡಿದಿದ್ದರೆ ವಾಪಸ್ ಕೊಡಲಾಗುವುದು. ಕಡಿಮೆ ಹಣ ಹಿಡಿದಿದ್ದರೆ ರಿಕವರಿ ಮಾಡಲಾಗುವುದು ಎಂದು ಮನವರಿಕೆ ಮಾಡಲಾಗಿದೆ. ಅದಕ್ಕೆ ಆ ಸಂಘಟನೆ ಮುಖಂಡರು ಒಪ್ಪಿದ್ದಾರೆ. ಈ ಸಂಬಂಧ ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ ಎಂದು ಜೋಶಿ ವಿವರಿಸಿದರು.
ಪ್ರತಿಭಟನಾಕಾರರಲ್ಲಿ ಬಹಳಷ್ಟು ಮಂದಿಗೆ 70 ವರ್ಷ ಮೀರಿದೆ. ಪೊಲೀಸರು ಪೆಂಡಾಲ್ ಹಾಕಲು ಅನುಮತಿ ಕೊಡದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ‘ಆಲ್ ಬ್ಯಾಂಕ್ ಎಂಪ್ಲಾಯಿಸ್ ವೆಲ್‌ಫೇರ್ ಸೊಸೈಟಿ ಮುಖಂಡರು ಆರೋಪಿಸಿದರು.
‘ಮಾನವೀಯತೆ ದೃಷ್ಟಿಯಿಂದ ನಾವು ಈ ಸೊಸೈಟಿ ಸದಸ್ಯರನ್ನು ಮಾತುಕತೆಗೆ ಆಹ್ವಾನಿಸಿದ್ದೇವೆ. ಅವರು ಮಾತುಕತೆಗೆ ಬರುತ್ತಿಲ್ಲ. ಬ್ಯಾಂಕಿನ ಮುಂದೆ ನೆರಳಲ್ಲಿ ಕುಳಿತುಕೊಳ್ಳಿ ಎಂದೂ ಹೇಳಿದ್ದೇವೆ. ಅದಕ್ಕೂ ಒಪ್ಪುತ್ತಿಲ್ಲ’ ಎಂದು ಜೋಶಿ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.