ADVERTISEMENT

ಸರ್ವರ್ ಸಮಸ್ಯೆ, ನೋಂದಣಿಯಾಗದ ಗೃಹಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 15:57 IST
Last Updated 21 ಜುಲೈ 2023, 15:57 IST
ತಾಲ್ಲೂಕಿನ ಹಿರೇಹೆಗ್ಡಾಳ್ ಗ್ರಾಮ ಪಂಚಾಯ್ತಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಆರ್ಜಿ ಸಲ್ಲಿಸಿದ ಮಹಿಳೆಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಂಗಳಗೌರಿ ಗೃಹಲಕ್ಷ್ಮಿ ಯೋಜನೆಯ ಅದೇಶ ಪತ್ರ ವಿತರಿಸಿದರು.
ತಾಲ್ಲೂಕಿನ ಹಿರೇಹೆಗ್ಡಾಳ್ ಗ್ರಾಮ ಪಂಚಾಯ್ತಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಆರ್ಜಿ ಸಲ್ಲಿಸಿದ ಮಹಿಳೆಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಂಗಳಗೌರಿ ಗೃಹಲಕ್ಷ್ಮಿ ಯೋಜನೆಯ ಅದೇಶ ಪತ್ರ ವಿತರಿಸಿದರು.   

ಕೂಡ್ಲಿಗಿ: ತಾಲ್ಲೂಕಿನಲ್ಲಿ ಸರ್ವರ್ ಸಮಸ್ಯೆ ಉಂಟಾಗಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಯ ಎರಡನೇ ದಿನವೂ ಜನರು ಪರದಾಡುವಂತಾಗಿತ್ತು.

ಪಟ್ಟಣದಲ್ಲಿನ ಎರಡು ಕೇಂದ್ರ ಹಾಗೂ ತಾಲ್ಲೂಕಿನ 25 ಗ್ರಾಮ ಪಂಚಾಯ್ತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರಗಳು ಸೇರಿದಂತೆ ಗ್ರಾಮ ಒನ್ ಕೇಂದ್ರಗಳಲ್ಲೂ ಗೃಹಲಕ್ಷ್ಮಿ ಯೋಜನೆಗೆ ಆರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಗುರುವಾರ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಆದರೆ ಸರ್ವರ್‌ ಸಮಸ್ಯೆಯಿಂದ ಅರ್ಜಿಗಳನ್ನು ಅಫ್ ಲೋಡ್ ಮಾಡಲು ಸಾಧ್ಯವಾಗಿಲ್ಲ. ಪಟ್ಟಣ ಪಂಚಾಯ್ತಿ ಪಟ್ಟಣದಲ್ಲಿ ಆರಂಭಿಸಿರುವ ಎರಡು ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆಯಿಂದ ಗುರುವಾರ ಯಾವುದೇ ಆರ್ಜಿ ಅಫ್ ಲೋಡ್ ಮಾಡಲು ಸಾಧ್ಯವಾಗಿಲ್ಲ. ಶುಕ್ರವಾರ ತಲಾ ಎರಡು ಅರ್ಜಿಗಳು ಮಾತ್ರ ಅಫ್ ಲೋಡ್ ಮಾಡಲಾಗಿದೆ. ಇದರಂತೆ ತಾಲ್ಲೂಕಿನ 25 ಗ್ರಾಮ ಪಂಚಾಯ್ತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಶುಕ್ರವಾರ ಕೇವಲ 25 ಅರ್ಜಿ ಅಫ್ ಲೋಡ್ ಮಾಡಲು ಸಾಧ್ಯವಾಗಿದೆ.

ADVERTISEMENT

ಆದರೆ ಸರ್ಕಾರ ನೀಡಿರುವ ಸಂಖ್ಯೆಗೆ ಸಂದೇಶ ಕಳಿಸಿದ್ದರೂ ಕೆಲವರಿಗೆ ನಿಗದಿ ಪಡಿಸಿದ ಕೇಂದ್ರ ಹಾಗೂ ದಿನದ ಬಗ್ಗೆ ಮರಳಿ ಸಂದೇಶ ಬಂದಿಲ್ಲ. ಇದು ಕೂಡ ಗೃಹಲಕ್ಷ್ಮಿ ಫಲಾನುಭವಿಗಳಲ್ಲಿ ಚಿಂತೆ ಮೂಡಿಸಿದೆ. ಆದರೆ ಕೆಲವು ಫಲಾನುಭವಿಗಳು ಸಂದೇಶ ಕಳುಹಿಸದೇ ಇದ್ದರು ಅವರ ಸ್ವಯಂ ಚಾಲಿತವಾಗಿ ಅರ್ಜಿ ಸಲ್ಲಿಕೆ ಕೇಂದ್ರ ಮತ್ತು ದಿನ ನಿಗದಿಪಡಿಸಿ ಸಂದೇಶ ಬಂದಿವೆ.

‘ಕೆಲಸ ಬಿಟ್ಟು ಬೆಳಿಗ್ಗೆಯಿಂದಲೂ ಕಾಯುತ್ತಿದ್ದೇವೆ. ಅರ್ಜಿ ಸಲ್ಲಿಕೆ ಮಾತ್ರ ಸಾಧ್ಯವಾಗುತ್ತಿಲ್ಲ. ಸಿಬ್ಬಂದಿ ವಿಚಾರಿಸಿದರೆ ಸರ್ವರ್ ಸಮಸ್ಯೆ ಇದೆ ಎನ್ನುತ್ತಿದ್ದಾರೆ' ಎಂದು ಪಟ್ಟಣದ ಫಲಾನುಭವಿಯೊಬ್ಬರು ದೂರಿದರು.

ತಾಲ್ಲೂಕಿನಲ್ಲಿ ಗುರುವಾರ 113 ಹಾಗೂ ಶುಕ್ರವಾರ 503 ಜನ ಸೇರಿ 616 ಫಲಾನುಭವಿಗಳು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ಸರ್ವರ್ ಸಮಸ್ಯೆಯಿಂದ ಅರ್ಜಿಗಳನ್ನು ಅಫ್ ಲೋಡ್ ಮಾಡಲು ವಿಳಂಭವಾಗುತ್ತಿದೆ. ಆದರೆ ಫಲಾನುಭವಿಗಳಿಗೆ ಸಮಯ ನಿಗದಿ ಮಾಡಿ ಕಳಿಸಲಾಗುತ್ತಿದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಫಿರೋಜ್ ಖಾನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.