ADVERTISEMENT

ಹೈ–ಕ ವಿಮೋಚನೆಯ ಹೋರಾಟ ಅನನ್ಯ: ಚನ್ನಬಸವಣ್ಣ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2018, 10:13 IST
Last Updated 17 ಸೆಪ್ಟೆಂಬರ್ 2018, 10:13 IST
ಬಳ್ಳಾರಿಯ ಇಂದಿರಾ ವೃತ್ತದಲ್ಲಿ ಸೋಮವಾರ ರಂಗತೋರಣ ಸಂಸ್ಥೆ ಹಾಗೂ ಕಲ್ಯಾಣ ಜನ ಪರಿಷತ್ತು ಏರ್ಪಡಿಸಿದ್ದ ಹೈ–ಕ ವಿಮೋಚನಾ ದಿನಾಚರಣೆಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಸರ್ದಾರ್‌ ವಲ್ಲಭಾಬಾಯಿ ಪಟೇಲ್‌ ಅವರ ಭಾವಚಿತ್ರಕ್ಕೆ ಚಿಂತಕ ಸಿ.ಚನ್ನಬಸವಣ್ಣ ಪುಷ್ಪನಮನ ಸಲ್ಲಿಸಿದರು,
ಬಳ್ಳಾರಿಯ ಇಂದಿರಾ ವೃತ್ತದಲ್ಲಿ ಸೋಮವಾರ ರಂಗತೋರಣ ಸಂಸ್ಥೆ ಹಾಗೂ ಕಲ್ಯಾಣ ಜನ ಪರಿಷತ್ತು ಏರ್ಪಡಿಸಿದ್ದ ಹೈ–ಕ ವಿಮೋಚನಾ ದಿನಾಚರಣೆಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಸರ್ದಾರ್‌ ವಲ್ಲಭಾಬಾಯಿ ಪಟೇಲ್‌ ಅವರ ಭಾವಚಿತ್ರಕ್ಕೆ ಚಿಂತಕ ಸಿ.ಚನ್ನಬಸವಣ್ಣ ಪುಷ್ಪನಮನ ಸಲ್ಲಿಸಿದರು,   

ಬಳ್ಳಾರಿ:‘ಹೈದರಾಬಾದ್‌ ಕರ್ನಾಟಕ ಪ್ರದೇಶ ವಿಮೋಚನೆಗಾಗಿ ನಡೆದ ಹೋರಾಟ ಅನನ್ಯವಾದದು’ ಎಂದು ಚಿಂತಕ ಸಿ.ಚನ್ನಬಸವಣ್ಣ ಅಭಿಪ್ರಾಯಪಟ್ಟರು.

ವಿಮೋಚನೆಯ ದಿನದ ಪ್ರಯುಕ್ತ ನಗರದ ಇಂದಿರಾ ವೃತ್ತದಲ್ಲಿ ಸೋಮವಾರ ರಂಗತೋರಣ ಮತ್ತು ಕಲ್ಯಾಣ ಜನ ಪರಿಷತ್ತು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದ ಇತರೆ ಪ್ರದೇಶಗಳಿಗಿಂತ ಭಿನ್ನವಾಗಿ ಹೈ–ಕ ಪ್ರದೇಶ ಭಿನ್ನ ರೀತಿಯಲ್ಲಿ ಸ್ವಾತಂತ್ರ್ಯ ಪಡೆಯಿತು. ಅದರಲ್ಲೂ ಬಳ್ಳಾರಿ ಜಿಲ್ಲೆಯು ಮದ್ರಾಸ್‌ ಪ್ರೆಸಿಡೆನ್ಸಿಗೆ ಸೇರಿದ್ದ ಸಂದರ್ಭದಲ್ಲಿ ರಜಾಕಾರರ ವಿರುದ್ಧ ಹೈದರಾಬಾದ್‌ ನಿಜಾಮರು ಹೋರಾಟ ಮಾಡದೇ ಇದ್ದರೂ, ಹೋರಾಟವನ್ನು ನಿರಂತರವಾಗಿ ಸ್ಮರಿಸುತ್ತಿರುವುದು ವಿಶೇಷ’ ಎಂದರು.

‘ಇಡೀ ದೇಶ ಸ್ವಾತಂತ್ರ್ಯ ಪಡೆದರೂ, ನಿಜಾಮರ ಆಳ್ವಿಕೆ ತಪ್ಪಲಿಲ್ಲ ಎಂಬುದು ಜನರ ವ್ಯಥೆಯಾಗಿತ್ತು. ಅದೇ ವೇಳೆ ರಜಾಕಾರರೂ ಹುಟ್ಟಿಕೊಂಡು ಜನರನ್ನು ಸಂಕಷ್ಟಕ್ಕೆ ದೂಡಿದ್ದರು. ಅವರನ್ನು ಸದೆಬಡಿಯಬೇಕಾಗಿದ್ದ ನಿಜಾಮರು ಮಾತ್ರ ಸುಮ್ಮನಿದ್ದರು’ ಎಂದು ಸ್ಮರಿಸಿದರು.

ADVERTISEMENT

‘ಜನಸಾಮಾನ್ಯರಾದ ರಮಾನಂದ ತೀರ್ಥ, ಶರಣಗೌಡ ಇನಾಂದಾರ, ಕೊಪ್ಪಳದ ಶಿವಮೂರ್ತಿಸ್ವಾಮಿ ಅಳವುಂಡಿ ಮಠ, ವಿದ್ಯಾಧರ ಗುರೂಜಿ, ರಾಮಚಂದ್ರ ವೀರಪ್ಪ, ಕುಷ್ಟಗಿಯ ಪುಂಡಲೀಕಪ್ಪ ರಜಾಕಾರರ ವಿರುದ್ಧ ಜನರನ್ನು ಸಂಘಟಿಸಿ ಹೋರಾಡಿದರು. ಬಳ್ಳಾರಿಯ ಜನತೆ ಹೋರಾಟದಲ್ಲಿ ಪ್ರಮುಖವಾಗಿ ಪಾಲ್ಗೊಂಡಿರಲಿಲ್ಲ’ ಎಂದರು.

‘ದೇಶದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭಾಬಾಯಿ ಪಟೇಲ್‌ ಅವರ ದೂರದೃಷ್ಟಿ ಮತ್ತು ದೃಢ ಸಂಕಲ್ಪಗಳ ಪರಿಣಾಮವಾಗಿ ಹೈ–ಕ ಭಾಗಕ್ಕೆ ಸೆ.17ರಂದು ನಿಜಾಮರಿಂದ ಮುಕ್ತಿ ದೊರೆಯಿತು’ ಎಂದರು.

‘ಸ್ವಾತಂತ್ರ್ಯದ ನಂತರ ಹೈದರಾಬಾದ್‌ ಕರ್ನಾಟಕದ ಅಭಿವೃದ್ಧಿಗಾಗಿ ವೈಜನಾಥ ಪಾಟೀಲರಂಥ ನಾಯಕರ ದಿಟ್ಟ ಹೋರಾಟದಿಂದಾಗಿ ಇಂದು 371 ಜೆ ವಿಶೇಷ ಮೀಸಲಾತಿ ದೊರಕಿದೆ. ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಯ ವಿಶೇಷ ಸೌಲಭ್ಯಗಳು ಜಿಲ್ಲೆಗೆ ದೊರಕುವಲ್ಲಿ ಬೀದರ್‌ , ಕಲಬುರ್ಗಿ, ರಾಯಚೂರು, ಕೊಪ್ಪಳದ ಜನತೆ ಔದಾರ್ಯವೇ ಕಾರಣ. ಅವರಿಗೆ ಜಿಲ್ಲೆಯ ಜನ ಋಣಿಯಾಗಿರಬೇಕು’ ಎಂದರು.

ಪ್ರೊ.ಅಬ್ದುಲ್‌ ಮುತಾಲಿಬ್‌, ವಿವೇಕ ತೋರಣ ಅಧ್ಯಕ್ಷ ಡಾ.ಜಿ.ಆರ್‌.ವಸ್ತ್ರದ, ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು, ಅಡವಿ ಸ್ವಾಮಿ, ಗಿರೀಶ ಕಾರ್ನಾಡ, ಮಲ್ಲೇಶ ಕುದೂರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.