ಹಗರಿಬೊಮ್ಮನಹಳ್ಳಿ: 2 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ತಾಲ್ಲೂಕಿನ ಮಾಲವಿ ಜಲಾಶಯಕ್ಕೆ 23 ಅಡಿಯಷ್ಟು ನೀರು ಹರಿದು ಬಂದಿದ್ದು, ಅಪಾಯದ ಆತಂಕ ಎದುರಾಗಿದೆ.
7,326 ಎಕರೆ ಪ್ರದೇಶಕ್ಕೆ ನೀರುಣಿಸುವ, ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಲು ಕಾರಣವಾಗಿರುವ ಜಲಾಶಯ ರೈತರ ಜೀವನಾಡಿಯೇ ಆಗಿದೆ. ಎಡ ಮತ್ತು ಬಲದಂಡೆ ಕಾಲುವೆಗಳ ಮೂಲಕ ಪಟ್ಟಣ ಸೇರಿದಂತೆ ಮಾಲವಿ, ಹರೇಗೊಂಡನಹಳ್ಳಿ, ಚಿಂತ್ರಪಳ್ಳಿ, ಕಡಲಬಾಳು, ಬಾಚಿಗೊಂಡನಹಳ್ಳಿ, ಬ್ಯಾಸಿಗಿದೇರಿ, ಹಿರೇಸೊಬಟಿಗೆ ನೀರಿನ ಸೌಲಭ್ಯ ಸಿಗುತ್ತಿದೆ.
ಜಲಾಶಯದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ನೀರು ಹರಿಸುವ ಯೋಜನೆಯೂ ಆರಂಭಗೊಂಡಿದೆ. ಇದರಿಂದಾಗಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ಜಲಾಶಯದ ಸಾಮರ್ಥ್ಯ ಗರಿಷ್ಠ 25 ಅಡಿ ಇದ್ದು, ನೀರು ಹಿಡಿದಿಟ್ಟುಕೊಳ್ಳಲು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ.
ಜಲಾಶಯದ 10 ಕ್ರಸ್ಟ್ ಗೇಟ್‍ಗಳಲ್ಲಿ ಒಂದೂ ಸರಿ ಇಲ್ಲ. ಎರಡು ತಿಂಗಳಲ್ಲಿ ಎರಡು ಬಾರಿ ದುರಸ್ತಿ ಮಾಡಿದ್ದರೂ ಸೋರಿಕೆ ಮಾತ್ರ ಸಂಪೂರ್ಣ ನಿಂತಿಲ್ಲ. ಕಳೆದ ಬಾರಿ ಜಲಾಶಯ ಭರ್ತಿಯಾಗಿದ್ದಾಗ ಕ್ರಸ್ಟ್ ಗೇಟ್‍ಗಳ ಮೂಲಕ ನೀರು ಸೋರಿಕೆಯಾಗಿತ್ತು. ದುರಸ್ತಿಗೆ ₹4 ಕೋಟಿ ಮೊತ್ತದ ಟೆಂಡರ್ ಕರೆದಿದ್ದರೂ, ಪ್ರಗತಿ ಮಾತ್ರ ಶೂನ್ಯ ಎನ್ನುವಂತಾಗಿದೆ.
ಸೂಕ್ತ ನಿರ್ವಹಣೆ ಇಲ್ಲದ ಕಾರಣ ಜಲಾಶಯದ ಸುತ್ತಲಿನ ಏರಿ ಮೇಲೆ ಮತ್ತು ಕ್ರಸ್ಟ್ ಗೇಟ್‍ಗಳಲ್ಲಿ ಗಿಡ, ಮುಳ್ಳಿನ ಕಂಟಿಗಳು ಬೆಳೆದಿವೆ. ಇದರಿಂದ ಅಪಾಯ ಇದ್ದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಲಕ್ಷಾಂತರ ರೂಪಾಯಿ ವ್ಯಯಸಿ ಅಳವಡಿಸಿದ 7 ಸಿಸಿಟಿವಿ ಕ್ಯಾಮೆರಾಗಳು ಮೂಲೆ ಸೇರಿವೆ. ಜಲಾಶಯ ವೀಕ್ಷಿಸಲು ಬರುವವರು ಕ್ರಸ್ಟ್ ಗೇಟ್‌ಗಳಿಗೆ ಅಳವಡಿಸಿದ ಯಂತ್ರಗಳ ಮೇಲೆ ಓಡಾಡಿದರೂ ಕೇಳುವವರೇ ಇಲ್ಲ.
ಜಲಾಶಯದ ಶಾಖಾಧಿಕಾರಿ ಕಚೇರಿ ಇಲ್ಲಿದ್ದರೂ ಪ್ರಯೋಜನ ಇಲ್ಲವಾಗಿದೆ. ಎಂಜಿನಿಯರ್‌ಗಳು ಮುನಿರಾಬಾದ್‍ನಲ್ಲಿದ್ದಾರೆ. ಈ ಕುರಿತು ಮಾಹಿತಿ ಪಡೆಯಲು ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಶಾಖಾಧಿಕಾರಿಗೆ ದೂರವಾಣಿ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.
ಜಲಾಶಯದ ರಕ್ಷಣೆಗೆ ಸಿಬ್ಬಂದಿ ನಿಯೋಜಿಸಬೇಕು. ಏರಿ ಮೇಲೆ ಕ್ರಸ್ಟ್ ಗೇಟ್‍ಗಳ ಬಳಿ ಬೆಳೆದಿರುವ ಗಿಡಗಂಟಿಗಳನ್ನು ಸ್ವಚ್ಛಗೊಳಿಸಬೇಕು. ಸಿಸಿ ಕ್ಯಾಮೆರಾ ದುರಸ್ತಿಗೊಳಿಸಬೇಕು-ಪೂಜಾರ ಸಿದ್ದಪ್ಪ ಬಾಬು ಸ್ಥಳೀಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.