ಹೊಸಪೇಟೆ (ವಿಜಯನಗರ): ಹಂಪಿ ಉತ್ಸವ ಯಶಸ್ವಿಯಾಗಿ ಕೊನೆಗೊಂಡಿದೆ. ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರ ಕುಣಿತವನ್ನೇ ಮೆಲುಕು ಹಾಕುತ್ತ ಪ್ರೇಕ್ಷಕರು ಮಧ್ಯರಾತ್ರಿ ಮನೆಯತ್ತ ತೆರಳಿದ್ದರೆ ಇತ್ತ ಕಾಂಗ್ರೆಸ್ ಮನೆಯಲ್ಲಿ ಬೇಗುದಿಯ ಹೊಗೆ ಆಡಿತ್ತು. ಕೊನೆ ಕ್ಷಣದಲ್ಲಿ ಏಕಾಏಕಿಯಾಗಿ ಮಾಜಿ ಸಚಿವ ಆನಂದ್ ಸಿಂಗ್ ಅವರು ವೇದಿಕೆ ಏರಿದ ಪ್ರಸಂಗ ಬೂದಿ ಮುಚ್ಚಿದ್ದ ಕಾಂಗ್ರೆಸ್ ಪಕ್ಷದ ಕೆಂಡಕ್ಕೆ ತುಪ್ಪ ಸುರಿದಿತ್ತು.
ಇದೆಲ್ಲ ಏಕಾಏಕಿಯಾಗಿ ನಡೆದಿದ್ದ ಪ್ರಸಂಗವಾಗಿತ್ತು. ಶಾಸಕ ಎಚ್.ಆರ್.ಗವಿಯಪ್ಪ ಅವರಿಗೆ ವಿಷಯ ತಿಳಿಯುತ್ತಲೇ ಸಮಾರೋಪ ಸಮಾರಂಭದ ವೇದಿಕೆ ಏರದೆ ನೇರವಾಗಿ ಮನೆಯತ್ತ ತೆರಳಿದರು. ಈ ಎಲ್ಲ ಬೆಳವಣಿಗೆ ಸಹಜವಾಗಿಯೇ ಅವರ ಪುತ್ರರು ಹಾಗೂ ಅಭಿಮಾನಿಗಳು, ಕಾರ್ಯಕರ್ತರು ಸಿಟ್ಟಾಗುವಂತೆ ಮಾಡಿತ್ತು.
ರಾತ್ರಿ 12ರ ಸುಮಾರಿಗೆ ರಸಮಂಜರಿ, ನೃತ್ಯ ಕಾರ್ಯಕ್ರಮ ಕೊನೆಗೊಂಡ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸಹಿತ ಇತರ ಗಣ್ಯರು ವೈಕುಂಠ ಅತಿಥಿಗೃಹದತ್ತ ತೆರಳಿದ್ದರು. ಅಲ್ಲಿಗೆ ಹೋದ ಶಾಸಕರ ಅಭಿಮಾನಿಗಳು ಸಚಿವರನ್ನು ತೀವ್ರವಾಗಿ ತರಾಟೆಗ ತೆಗೆದುಕೊಂಡರು, ಸಚಿವರು ತಮ್ಮಿಂದ ತಪ್ಪಾಗಿದೆ ಎಂದು ಹೇಳಿದ ಮೇಲಷ್ಟೇ ಅವರೆಲ್ಲ ಅಲ್ಲಿಂದ ನಿರ್ಗಮಿಸಿದರು ಎಂದು ಪಕ್ಷದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ರೊಚ್ಚಿಗೆದ್ದಿದ್ದ ಅಭಿಮಾನಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಕ್ಕೂ ಮುಂದಾಗಿದ್ದರು. ಆದರೆ ಶಾಸಕರು ಸಮಾಧಾನಪಡಿಸಿದ್ದರಿಂದ ಸದ್ಯ ಪರಿಸ್ಥಿತಿ ಶಾಂತವಾಗಿದೆ. ಇಷ್ಟಕ್ಕೂ ತೃಪ್ತರಾಗದ ಅವರ ಅನುಯಾಯಿಗಳು ಶಾಸಕರಿಂದ ಹೇಳಿಕೆ ನೀಡುವ ಸಲುವಾಗಿ ಸಂಜೆ ತುರ್ತು ಪತ್ರಿಕಾಗೋಷ್ಠಿ ಕರೆಯಲು ಸಹ ತೀರ್ಮಾನಿಸಿ ಪತ್ರಕರ್ತರಿಗೆ ಕರೆಯನ್ನೂ ಕಳುಹಿಸಿದ್ದರು. ಇದಕ್ಕೂ ಶಾಸಕರು ಒಪ್ಪಿಗೆ ಸೂಚಿಸಲಿಲ್ಲ.
ಗೊಂದಲ ಮುಗಿದಿದೆ
ಈ ಗೊಂದಲ, ರಂಪಾಟದ ಬಗ್ಗೆ ಶಾಸಕ ಗವಿಯಪ್ಪ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಈಗ ಅದೆಲ್ಲ ಮುಗಿದ ಅಧ್ಯಾಯ, ಎಲ್ಲವೂ ಸರಿ ಹೋಗಿದೆ. ಅಸಮಾಧಾನ ಆದಾಗ ಸಚಿವರನ್ನು ಭೇಟಿ ಮಾಡಿ ಹೇಳಬೇಕಾಗುತ್ತದೆ, ಅದು ಆಗಿದೆ ಅಷ್ಟೇ’ ಎಂದಷ್ಟೇ ಹೇಳಿದರು.
ತಮ್ಮ ಮಾತಿಗೆ ಪೂರಕ ಎಂಬಂತೆ ಸೋಮವಾರ ಬೆಳಿಗ್ಗೆ ಅವರು ಸಚಿವ ಜಮೀರ್ ಜತೆಯಲ್ಲೇ ಈಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ರೈತ ಸಂಘದ ನಾಯಕ ಕಾರ್ತಿಕ್ ಅವರ ಮನೆಗೆ ತೆರಳಿದ್ದರು.
ಅಸಮಾಧಾನಕ್ಕೆ ಏನು ಕಾರಣ?:
ಹಂಪಿ ಉತ್ಸವಕ್ಕೆ ಈ ಹಿಂದೆ ಮಾಜಿ ಶಾಸಕರನ್ನು ವೇದಿಕೆಗೆ ಕರೆಸಲಾಗುತ್ತಿತ್ತು. ಆದರೆ ಆನಂದ್ ಸಿಂಗ್ ಅವರು ಶಾಸಕರಾಗಿದ್ದ ವೇಳೆ ಈ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟಿದ್ದರು. ಗವಿಯಪ್ಪ ಅವರು ಮಾಜಿ ಶಾಸಕರಾಗಿದ್ದರೂ ಅವರನ್ನು ಒಂದು ಬಾರಿಯೂ ವೇದಿಕೆಗೆ ಕರೆಸಿರಲಿಲ್ಲ. ಇದೇ ಕಾರಣಕ್ಕೆ ಗವಿಯಪ್ಪ ಅವರು ಹಠಾತ್ ಬೆಳವಣಿಗೆಯಿಂದ ಬೇಸರಗೊಂಡರು ಎಂದು ಹೇಳಲಾಗುತ್ತಿದೆ.
ಕಾರ್ಯಕರ್ತರಿಗೆ ಕರೆ ಇರಲಿಲ್ಲ: ಈ ಬಾರಿ ಹಂಪಿ ಉತ್ಸವ ಏರ್ಪಡಿಸುವಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಾಗಿರುವ ಗವಿಯಪ್ಪ ಅವರು ಬಹಳಷ್ಟು ಶ್ರಮ ಪಟ್ಟಿದ್ದಾರೆ. ಆದರೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಇತರ ಪದಾಧಿಕಾರಿಗಳಿಗೇ ಹಂಪಿ ಉತ್ಸವದ ಕರೆಯೋಲೆ ನೀಡಿಲ್ಲ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.
‘ಶಾಸಕರು ತಮಗೆ ಇಷ್ಟವಾದ ರೀತಿಯಲ್ಲಿ ಕೆಲಸ ಮಾಡುತ್ತ ಹೋಗುತ್ತಿದ್ದಾರೆ. ಅವರಿಗೆ ಎಲ್ಲರನ್ನೂ ಸೇರಿಸಿಕೊಂಡು ಹೋಗುವ ಅಭ್ಯಾಸ ಇದ್ದಂತಿಲ್ಲ. ಅವರ ಜತೆಗೆ ಕಾರ್ಯಕರ್ತರಿಲ್ಲ. ಪಕ್ಷದಲ್ಲಿ ಮೂರು, ನಾಲ್ಕು ಗುಂಪುಗಳು ಈಗಾಗಲೇ ಸೃಷ್ಟಿಯಾಗಿವೆ. ಅದು ಮತ್ತಷ್ಟು ವಿಘಟನೆಗೊಳ್ಳುವ ಲಕ್ಷಣ ಕಾಣಿಸುತ್ತಿದೆಯೇ ಹೊರತು ಒಂದುಗೂಡುವ ಲಕ್ಷಣವಂತೂ ಕಾಣಿಸುತ್ತಿಲ್ಲ’ ಎಂದು ಪಕ್ಷದ ಚಟುವಟಿಕೆಗಳನ್ನು ಹತ್ತಿರದಿಂದ ಬಲ್ಲ ಇನ್ನೊಬ್ಬ ಮುಖಂಡರು ಹೇಳಿದರು.
ಹಂಪಿ ಉತ್ಸವಕ್ಕೆ 5 ಲಕ್ಷ ಮಂದಿ
ಈ ಬಾರಿಯ ಹಂಪಿ ಉತ್ಸವಕ್ಕೆ ಮೂರೂ ದಿನ ಸೇರಿ 4ರಿಂದ 5 ಲಕ್ಷ ಮಂದಿ ಭೇಟಿ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಹಂಪಿಯ ಕಿರಿದಾದ ರಸ್ತೆಯಿಂದಾಗಿ ಇಷ್ಟು ಮಂದಿ ಭೇಟಿ ನೀಡಿದಾಗ ಸಂಚಾರ ದಟ್ಟಣೆ ಆಗುವುದು ಸಹಜ. ಮೊದಲ ದಿನ 75 ಸಾವಿರದಿಂದ 1 ಲಕ್ಷ, ಎರಡನೇ ದಿನ ಸುಮಾರು ಎರಡರಿಂದ ಎರಡೂವರೆ ಲಕ್ಷ ಹಾಗೂ ಮೂರನೇ ದಿನ ಒಂದೂವರೆಯಿಂದ ಎರಡು ಲಕ್ಷ ಮಂದಿ ಬಂದಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಹಂಪಿ–ಕಮಲಾಪುರ ಮತ್ತೊಂದು ರಸ್ತೆ?
ಹಂಪಿ ಉತ್ಸವದಲ್ಲಿ ಈ ಬಾರಿ ಜನದಟ್ಟಣೆ, ವಾಹನ ದಟ್ಟಣೆ ಉಂಟಾದ ಕಾರಣ ಹಂಪಿಯಿಂದ ಕಮಲಾಪುರಕ್ಕೆ ಇನ್ನೊಂದು ಬದಲಿ ಮಾರ್ಗ ನಿರ್ಮಿಸುವ ಕುರಿತು ಯೋಜನೆ ರೂಪಿಸಲಾಗುತ್ತಿದೆ.
‘ಇದು ಜೋಡಿ ರಸ್ತೆಯಲ್ಲ, ಅಲ್ಲಿನ ಪರಂಪರೆ, ಪ್ರಾಕೃತಿಕ ಸನ್ನಿವೇಶಗಳಿಗೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ಇನ್ನೊಂದು ಬದಲಿ ರಸ್ತೆ ನಿರ್ಮಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ’ ಎಂದು ಶಾಸಕ ಎಚ್.ಆರ್.ಗವಿಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಇನ್ನು ಫೆಬ್ರುವರಿ ಮೊದಲ ವಾರವೇ ಹಂಪಿ ಉತ್ಸವ
‘ಈ ಬಾರಿಯ ಹಂಪಿ ಉತ್ಸವ ಹಲವು ಬಗೆಯಲ್ಲಿ ಯಶಸ್ವಿಯಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಳ ಖುಷಿಯಾಗಿದ್ದಾರೆ. ಫೆಬ್ರುವರಿಯಲ್ಲಿ ಅಷ್ಟಾಗಿ ಚಳಿ ಇಲ್ಲ, ಬಿಸಿಲೂ ಇರುವುದಿಲ್ಲ. ಉತ್ಸವಕ್ಕೆ ಇದುವೇ ಸೂಕ್ತ ಸಮಯ ಎಂಬ ಅಭಿಪ್ರಾಯ ಅಡುಗೆ ಮಾಡುವವರು, ಕಲಾವಿದರಿಂದ ಬಂದಿದೆ. ಹೀಗಾಗಿ ಇನ್ನು ಮುಂದೆ ಫೆಬ್ರುವರಿ ಮೊದಲ ವಾರದಲ್ಲೇ ಉತ್ಸವ ಹಮ್ಮಿಕೊಳ್ಳಲಾಗುವುದು ಎಂಬ ಸಂದೇಶವನ್ನು ಸ್ವತಃ ಮುಖ್ಯಮಂತ್ರಿ ಅವರೇ ರವಾನಿಸಿದ್ದಾರೆ’ ಎಂದು ಶಾಸಕ ಗವಿಯಪ್ಪ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.