ಹಂಪಿ (ವಿಜಯನಗರ ): ಸೂರ್ಯ ರಶ್ಮಿಯಂತೆ ಮಿಂಚುತ್ತಿದ್ದ ವಿದ್ಯುತ್ ದೀಪದ ಬಣ್ಣ ಬಣ್ಣದ ಬೆಳಕಿನಲ್ಲಿ ಚಿನ್ನದಂತೆ ಹೊಳೆಯುತ್ತಿದ್ದ ಬಂಡೆಗಳ ನಡುವೆ, ಮಾರ್ದನಿಸಿದ ತಮಟೆಗಳ ಸದ್ದಿನಲ್ಲಿ ಹಗಲುವೇಷ ಕಲಾವಿದರು ಪ್ರದರ್ಶಿಸಿದ ಹನುಮಾಯಣ ರೂಪಕ ನೆರೆದಿದ್ದ ಪ್ರೇಕ್ಷಕರ ಚಳಿ ಮರೆಸಿತು.
ಇದು ಹಂಪಿಯ ಎದುರು ಬಸವಣ್ಣ ಎರಡನೇ ವೇದಿಕೆಯಲ್ಲಿ ಶುಕ್ರವಾರ ರಾತ್ರಿ ಕಡ್ಡಿರಾಂಪುರ ಹಂಪಿ ವಿರುಪಾಕ್ಷೇಶ್ವರ ಬುಡ್ಗ ಜಂಗಮ ಕಲಾವಿದರು ತೆರೆಯ ಮೇಲೆ ಹನುಮ, ರಾಮ ಲಕ್ಷ್ಮಣರ ಸಂಭಾಷಣೆ, ಹನುಮ ರಾಕ್ಷಸಿಯರ ಕಾದಾಟ, ವಾನರ ವೇಷದಾರಿ ಕುಣಿತ ಪ್ರಸ್ತುತಪಡಿಸಿ ಕಲಾಸಕ್ತರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
ಕುಷ್ಟಗಿಯ ದುರುಗಪ್ಪ ಹಿರೆಮನಿ ಕಂಠಸಿರಿಯಲ್ಲಿ ಹೊರಹೊಮ್ಮಿಸಿದ ಅಲ್ಲಮಪ್ರಭುವಿನ
‘ನಾನು ಬಂದ ಕಾರ್ಯಕ್ಕೆ ನೀ ಬಂದೆ’ ವಚನ, ‘ಹೂವು ತೋಟದ ಚೆಲುವಿನಾಗೆ’, ‘ಮಾತಾಡೇ ನೀರೆ ಮಾತಾಡೆ’ ಭಾವಗೀತೆಗಳಿಗೆ ನೆರೆದವರು ಮಂತ್ರಮುಗ್ಧರಾದರು.
ಬೆಂಗಳೂರಿನ ಸೃಷ್ಟಿ ಅಭಿನಯ ಕಲಾಕೇಂದ್ರದ ಡಾ.ಎ.ವಿ.ಸತ್ಯನಾರಾಯಣ ನೇತೃತ್ವದಲ್ಲಿ ಅಂಗುಲಿಮಾಲನ ಮನಸ್ಸು ಪರಿವರ್ತಿಸಿದ ಬುದ್ದನ ಕುರಿತಾದ ನೃತ್ಯರೂಪಕ ಯೋಚನೆ ಲಹರಿಗೆ ಕರೆದೊಯ್ಯಿತು.
ಬೆಂಗಳೂರಿನ ಕಲಾವಿದೆ ವಿಶಾಲ್ ಹರಿಕಿರಣ್ ತಂಡದವರಿಂದ ಕುಚಪುಡಿ ನೃತ್ಯ ಪ್ರದರ್ಶನ, ಕೊಟ್ಟೂರು, ಕೂಡ್ಲಿಗಿ ಸರ್ಕಾರಿ ನೌಕರರ ಸಾಕ್ರೆಟಿಸ್ ನಾಟಕ ಗಮನ ಸೆಳೆದವು.
ಬಳ್ಳಾರಿಯ ಮೇದಾ ಮ್ಯುಸಿಕಲ್ ಸ್ಕೂಲ್ ನ ಡಾ.ಕೆ.ರಾಮಕರಣ್ ಅವರ ವೀಣಾವಾದನ, ಬಳ್ಳಾರಿ ಎಸ್ . ಪ್ರಗತಿ ತಂಡ, ಧಾರವಾಡ ವಿಶ್ವನಾಥ ಹಾವೇರಿ ತಂಡ, ಬೀದರ್ ಪವಿತ್ರ ವಿಶ್ವನಾಥ, ಕಲಬುರಗಿ ಶಂಕ್ರಪ್ಪ ಭಗವಂತಪ್ಪ ಹೂಗಾರ್ ಅವರ ಸಂಗೀತ ಕಾರ್ಯಕ್ರಮಗಳು ಉತ್ಸವದ ಮೆರುಗು ಹೆಚ್ಚಿಸಿದವು.
ತಹಶೀಲ್ದಾರ್ ಚಂದ್ರಶೇಖರ ಗಾಳಿ ಉದ್ಘಾಟಿಸಿದರು, ಶಿಕ್ಷಕ ಕೆ.ಎಂ.ಶಿವಶಂಕರಯ್ಯ ಮತ್ತು ಕವಯತ್ರಿ ಮಂಡ್ಯದ ಭವಾನಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.