ಹರಪನಹಳ್ಳಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಜಯನಗರ ಜಿಲ್ಲೆಯ 850 ಅತಿಥಿ ಶಿಕ್ಷಕರಿಗೆ 4 ತಿಂಗಳಿನಿಂದಲೂ ಗೌರವಧನ ಸಿಗದೆ ಪರದಾಡುವಂತಾಗಿದೆ.
ಶಾಲಾ ಶಿಕ್ಷಣ ಇಲಾಖೆ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ₹10,000 ಹಾಗೂ ಪ್ರೌಢಶಾಲೆಯ ಅತಿಥಿ ಶಿಕ್ಷಕರಿಗೆ ₹10,500 ಕೊಡುವುದಾಗಿ ಹೇಳಿ ಅಗತ್ಯವಿರುವ ಶಾಲೆಗಳಿಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಪ್ರಾಥಮಿಕ 655 ಮತ್ತು ಪ್ರೌಢಶಾಲೆಯಲ್ಲಿ 195 ಒಟ್ಟು 850 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.
2024-25ನೇ ಶೈಕ್ಷಣಿಕ ವರ್ಷ ಆರಂಭವಾಗಿ ಜೂನ್ ತಿಂಗಳಲ್ಲಿ ಕರ್ತವ್ಯಕ್ಕೆ ಶಾಲೆಗೆ ಬಂದಿರುವ ಅತಿಥಿ ಶಿಕ್ಷಕರಿಗೆ ಸೆಪ್ಟಂಬರ್ ತಿಂಗಳು ಮುಕ್ತಾಯವಾದರು ಗೌರವಧನ ಪಾವತಿಸಿಲ್ಲ. ಪರಿಣಾಮ ಅತಿಥಿ ಶಿಕ್ಷಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಹಳ್ಳಿಯಿಂದ ನಗರಕ್ಕೆ, ಪಟ್ಟಣದಿಂದ ಹಳ್ಳಿಯಲ್ಲಿರುವ ಶಾಲೆಗಳಿಗೆ ಪ್ರಯಾಣ ಮಾಡುವ ಅತಿಥಿ ಶಿಕ್ಷಕರು ತೊಂದರೆ ಅನುಭವಿಸುತ್ತಿದ್ದಾರೆ. ಸಾರಿಗೆ ವೆಚ್ಚಕ್ಕೂ ಹಣ ಭರಿಸಲಾಗದಷ್ಟು ತೊಂದರೆ ಅನುಭವಿಸುವಂತಾಗಿದೆ.
ಏಕೋಪಾಧ್ಯಾಯ ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರು ಇಲ್ಲದಿದ್ದಾಗ ಶಾಲೆಯ ವ್ಯವಸ್ಥೆ ಅಚ್ಚುಕಟ್ಟಾಗಿ ತೂಗಿಸುವ ನಮಗೆ, ಸಕಾಲಕ್ಕೆ ಮಾಸಿಕ ಗೌರವಧನ ಸಿಗದಿರುವುದು ಚಿಂತೆಗೀಡು ಮಾಡಿದೆ ಎಂದು ಅತಿಥಿ ಶಿಕ್ಷಕರು ಬೇಸರ ವ್ಯಕ್ತಪಡಿಸಿದರು.
‘ನಿರ್ಲಕ್ಷ್ಯ ಧೋರಣೆ ತಾಳಿರುವ ಆಳುವ ಸರ್ಕಾರದ ಅನುದಾನ ಬಿಡುಗಡೆ ವಿಳಂಬದಿಂದಾಗಿ ಗೌರವ ಸಂಭಾವನೆ ಸಕಾಲಕ್ಕೆ ದೊರಕದೇ ತೀವ್ರ ನೋವು ಅನುಭವಿಸುತ್ತಿದ್ದೇವೆ. ಗೌರವಧನ ಪ್ರಾಥಮಿಕ ಶಾಲೆ ಶಿಕ್ಷಕರಿಗೆ ₹15,000 ಹಾಗೂ ಪ್ರೌಢಶಾಲೆ ಶಿಕ್ಷಕರಿಗೆ ₹16,000 ಪರಿಷ್ಕರಿಸಿ, ಜೂನ್ ತಿಂಗಳಿನಿಂದ ಅನ್ವಯಿಸಿ ಪಾವತಿಸುವ ಬೇಡಿಕೆಯನ್ನೂ ಈಡೇರಿಸಿಲ್ಲ’ ಎಂದು ರಾಜ್ಯ ಅತಿಥಿ ಶಿಕ್ಷಕರ ಸಂಘದ ಹರಪನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.