ಹರಪನಹಳ್ಳಿ: ಆಧುನಿಕ ಯಂತ್ರಗಳ ಭರಾಟೆಯಲ್ಲಿ ಕತ್ತರಿ ಸಾಣೆ ಹಿಡಿಯುವ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಲ್ಲಿಯ ರಹಮತ್ ನಗರ, ಗುಡಿಕೇರಿ, ಆಂಜನೇಯ ಬಡಾವಣೆಗಳಲ್ಲಿ 8 ರಿಂದ 10 ಕಾರ್ಮಿಕರು ಸಾಣೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. 25 ಕಿಲೊ ಗ್ರಾಂ ತೂಗುವ ಅವರೇ ಸಿದ್ದಪಡಿಸಿದ ಯಂತ್ರ ಹೆಗಲ ಮೇಲೆ ಹೊತ್ತು ಸಾಗುವ ಕಾರ್ಮಿಕರು ಊರೂರು ಸುತ್ತಿ ಕತ್ತರಿ, ಚಾಕು, ತರಕಾರಿ, ಭತ್ತ, ರಾಗಿ ಕೊಯ್ಯುವ ಕತ್ತರಿಗಳನ್ನು ಸಾಣೆ ಹಿಡಿದು ಚೂಪು ಮಾಡಿಕೊಡುತ್ತಾರೆ.
ಸಾಣೆ ಮಾಡಿದ ಒಂದು ಕತ್ತರಿಗೆ ₹15 ರಿಂದ ₹20 ಮಾತ್ರ ಕೂಲಿ ಪಡೆಯುತ್ತಾರೆ. ಹೀಗೆ ಸಂಗ್ರಹಿಸಿದ ಹಣದಲ್ಲಿಯೇ ಅವರ ಕುಟುಂಬ ನಿರ್ವಹಿಸಬೇಕು. ಸಾಣೆ ಯಂತ್ರ ಹೊತ್ತು ಸಾಗಿ ಹೆಗಲು ಕಲ್ಲಿನಂತೆ ಗಟ್ಟಿಯಾಗಿದೆ, ಆದರೆ ಕುಟುಂಬದ ಆರ್ಥಿಕತೆ ಮಾತ್ರ ಗಟ್ಟಿಯಾಗಿಲ್ಲ. ರಹಮತ್ ನಗರದ 65 ವರ್ಷ ವಯಸ್ಸಿನ ಕೆ.ಖಾಸೀಂಅಲಿ 45 ವರ್ಷದಿಂದ ಸಾಣೆ ಕೆಲಸ ಮಾಡುತ್ತಿದ್ದಾರೆ. ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಕೊಟ್ಟೂರು ಭಾಗದ ನೂರಾರು ಹಳ್ಳಿ ಸುತ್ತಾಡಿದ್ದಾರೆ.
‘ಈ ಹಿಂದೆ ಊರೂರಿಗೆ ಹೋದಾಗ, ಸಾಣೆ ಹಿಡಿಸುತ್ತಿದ್ದ ಜನ ಕೂಲಿ ಕೊಟ್ಟು, ಊಟ ಮಾಡಿಸಿ ಕಳಿಸುತ್ತಿದ್ದರು. ಆದರೆ ಈಗ ಅದೇ ಊರಿನಲ್ಲಿ 20 ರಿಂದ 30 ಕತ್ತರಿಗಳು ಸಾಣೆ ಹಿಡಿಯಲು ಇರುವುದಿಲ್ಲ. ಹಾಗಾಗಿ ಊರು ಸುತ್ತುವುದನ್ನು ಬಿಟ್ಟು, ಅವಶ್ಯವಿರುವ ಕಡೆ ಸುತ್ತಾಡಿ ದಿನವೊಂದಕ್ಕೆ ₹300 ರಿಂದ ₹400 ಕೂಲಿ ಹಣ ಪಡೆದು ಕುಟುಂಬ ಸಾಗಿಸುತ್ತಿದ್ದೇವೆ’ ಎಂದರು ಖಾಸೀಂಅಲಿ ಅವರು.
ರಹಮತ್ ನಗರ ಕೆ.ಖಾಸೀಂಅಲಿ, ಗುಡಿಕೇರಿ, ಆಂಜನೇಯ ಬಡಾವಣೆ ಶರೀಫ್ ಮತ್ತು ಹಲಿ ಸಾಬ್ ಅವರು ಜೀವನ ಕಷ್ಟದಿಂದ ಕೂಡಿದೆ. ಕತ್ತರಿ ಚೂಪು ಮಾಡಿ ಇನ್ನೊಬ್ಬರ ಬದುಕು ಹಸನವಾಗಿಸುವ ಸಾಣೆ ಹಿಡಿಯುವರ ಕುಟುಂಬಗಳ ಬದುಕು ಗಟ್ಟಿಯಾಗಿ ಆರ್ಥಿಕವಾಗಿ ಚೇತರಿಸಿಕೊಳ್ಳಲು ವೃತ್ತಿಯಲ್ಲಿ ಹೊಸತನ ಕಂಡುಕೊಳ್ಳಲು ಸರ್ಕಾರಿ ಸವಲತ್ತುಗಳ ಅಗತ್ಯವಿದೆ.
‘ಕಾರ್ಮಿಕರಿಗೆ ಗುರುತಿನ ಚೀಟಿ, ವೃದ್ದಾಪ್ಯ ವೇತನದಂತಹ ಸವಲತ್ತುಗಳ ಅಗತ್ಯವಿದೆ’ ಎನ್ನುತ್ತಾರೆ ಕಾರ್ಮಿಕ ಸಂಘಟನೆ ಮುಖಂಡ ಸಂದೇರ ಪರಶುರಾಮ್ ಮತ್ತು ಟೈಲರ್ ಶಮಿವುಲ್ಲಾ.
ಸಾಲ ಪಡೆದು ಮಕ್ಕಳಿಗೆ ಶಿಕ್ಷಣ ಕೊಡಿಸಿ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದೇವೆ. ಈ ವೃತ್ತಿ ನಮ್ಮ ಮಕ್ಕಳಿಗೆ ಕಲಿಸಿಲ್ಲ ಇದು ನಮ್ಮ ಪೀಳಿಗೆಗೆ ಕೊನೆಯಾಗುತ್ತದೆ
-ಕೆ.ಖಾಸೀಂಅಲಿ ಸಾಣೆ ಹಿಡಿಯುವ ಕಾರ್ಮಿಕ
ಹುಬ್ಬಳ್ಳಿಯಿಂದ ಗ್ರಾಂಡಿಂಗ್ ಕಲ್ಲು
ದೂರದ ಹುಬ್ಬಳ್ಳಿಗೆ ತೆರಳಿ ₹5 ಸಾವಿರದಿಂದ ₹8 ಸಾವಿರ ತನಕ ಸಿಗುವ ಗ್ರಾಂಡಿಂಗ್ ಕಲ್ಲು ತರಬೇಕು. ಇದನ್ನು ಸೈಕಲ್ ಗಾಲಿಗೆ ಜೋಡಿಸಿದಾಗ ಒಟ್ಟು 25 ಕಿಲೊ ಗ್ರಾಂ ತೂಕದ ಯಂತ್ರ ಸಿದ್ದವಾಗುತ್ತದೆ. ಇದನ್ನು ಹೆಗಲ ಮೇಲೆ ಹೊತ್ತು ಊರೂರು ಸುತ್ತುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.