ಹಗರಿಬೊಮ್ಮನಹಳ್ಳಿ: ಎರಡು ವರ್ಷಗಳ ಹಿಂದೆ ಉದ್ಯೋಗ ಅರಸಿಕೊಂಡು ಹಾವೇರಿಯ ರಾಣೆಬೆನ್ನೂರಿನಿಂದ ತಾಲ್ಲೂಕಿಗೆ ವಲಸೆ ಬಂದಿದ್ದ ಸುದರ್ಶನ್ ಈಗ ಸ್ವತಃ ಉದ್ಯಮಿಯಾಗಿ ಬದಲಾಗಿದ್ದಾರೆ. ಬೇರೆಯವರಿಗೆ ಕೆಲಸ ನೀಡುವಷ್ಟರ ಮಟ್ಟಿಗೆ ಬೆಳೆದು ದೊಡ್ಡವರಾಗಿದ್ದಾರೆ.
ಕಡಿಮೆ ಖರ್ಚಿನಲ್ಲಿ ಶೌಚಾಲಯ ನಿರ್ಮಿಸುವ ಉಪಾಯ ಕಂಡುಕೊಂಡು, ಅದಕ್ಕೆ ಬೇಕಿರುವ ವಸ್ತುಗಳನ್ನು ತಯಾರಿಸಿ ಪೂರೈಸುತ್ತಿದ್ದಾರೆ. ಸಿಮೆಂಟ್, ಕಾಂಕ್ರೀಟ್ ಉಪಯೋಗಿಸಿ, ಕಿಟಕಿ, ಬಾಗಿಲು, ಕದದ ಸ್ಲ್ಯಾಬ್ ಮತ್ತು ಗುಂಡಿಗೆ ಅಗತ್ಯವಾದ ರಿಂಗ್‌ಗಳು ಇವರ ಘಟಕದಲ್ಲಿ ತಯಾರಾಗುತ್ತವೆ. ಅಷ್ಟೇ ಅಲ್ಲ, ಬೇಡಿಕೆ ಸಲ್ಲಿಸಿದರೆ ಅವರ ಕೂಲಿ ಆಳುಗಳಿಂದಲೇ ಶೌಚಾಲಯ ಕೂಡ ನಿರ್ಮಿಸಿಕೊಡುತ್ತಾರೆ.
ಅಂದಹಾಗೆ ಒಂದು ಶೌಚಾಲಯ ನಿರ್ಮಾಣದ ಕೂಲಿ ಹಾಗೂ ಅದಕ್ಕೆ ಬೇಕಿರುವ ಎಲ್ಲ ಸಾಮಗ್ರಿ ಸೇರಿ ₨8,500 ಖರ್ಚು ಬರುತ್ತದೆ. ಅದನ್ನವರು ₨10,500ಕ್ಕೆ ಮಾರಾಟ ಮಾಡುತ್ತಾರೆ. ತಾಲ್ಲೂಕಿನ ವಲ್ಲಭಾಪುರದಲ್ಲಿ ನೀರಿಗೆ ಕೊರತೆ ಇದೆ. ಹೀಗಿದ್ದರೂ ಹಗರಿಬೊಮ್ಮನಹಳ್ಳಿ ಪಟ್ಟಣದಿಂದ ಟ್ರಾಕ್ಟರ್‌ನಲ್ಲಿ ನೀರು ತರಿಸಿಕೊಂಡು, ಕೆಲಸ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ.
ಇವರು ತಯಾರಿಸಿದ ಸಿಮೆಂಟಿನ ವಸ್ತುಗಳಿಗೆ ಪಟ್ಟಣ ಸೇರಿದಂತೆ ಜಿಲ್ಲೆಯ ಕೂಡ್ಲಿಗಿ, ಹೂವಿನಹಡಗಲಿಯಲ್ಲೂ ಬೇಡಿಕೆ ಇದೆ. ಇತ್ತೀಚಿನ ಕೆಲವು ತಿಂಗಳಿಂದ ಅನ್ಯ ಜಿಲ್ಲೆಗಳಿಂದಲೂ ಬೇಡಿಕೆ ಬರುತ್ತಿದೆ ಎನ್ನುತ್ತಾರೆ ಸುದರ್ಶನ್.
‘ಪ್ರತಿಯೊಬ್ಬರೂ ಶೌಚಾಲಯ ನಿರ್ಮಿಸಿಕೊಳ್ಳಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೊಡ್ಡ ಮಟ್ಟದಲ್ಲಿ ಅಭಿಯಾನ ನಡೆಸುತ್ತಿವೆ. ಇದರಿಂದಾಗಿ ಎಲ್ಲರಿಗೂ ಸ್ವಲ್ಪ ತಿಳಿವಳಿಕೆ ಬಂದಿದೆ. ಹಾಗಾಗಿ ವಿವಿಧ ಕಡೆಗಳಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. ಶೌಚಾಲಯದ ಜತೆಗೆ ಕುರಿ, ಕೋಳಿ ಸಾಕಾಣಿಕೆಗೆ ಶೆಡ್‌ಗಳನ್ನು ನಿರ್ಮಿಸಲು ಬೇಡಿಕೆ ಸಲ್ಲಿಸುತ್ತಾರೆ’ ಎಂದು ವಿವರಿಸಿದರು.
‘ಸಿಮೆಂಟಿನಿಂದ ತಯಾರಿಸುವ ವಸ್ತುಗಳಿಗೆ ಸರಿಯಾಗಿ ಕ್ಯೂರಿಂಗ್ ಮಾಡಬೇಕು. ಇಲ್ಲವಾದಲ್ಲಿ ಅವುಗಳು ಬಹಳ ಬೇಗ ಹಾಳಾಗುತ್ತವೆ. ಕನಿಷ್ಠ 21 ದಿನ ನೀರು ಹಾಕಬೇಕು. ನೀರಿನ ಸಮಸ್ಯೆ ಇದೆ. ಆದಕಾರಣ ಹಗರಿಬೊಮ್ಮನಹಳ್ಳಿಯಿಂದ ಹಣ ಪಾವತಿಸಿ, ನೀರು ತರಿಸಿಕೊಳ್ಳುತ್ತೇನೆ. ನನ್ನ ಘಟಕ ಕೂಡ ಅರ್ಧ ಎಕರೆ ಬಾಡಿಗೆ ಜಮೀನಿನಲ್ಲಿ ನಡೆಸುತ್ತಿದ್ದೇನೆ. ₨75 ಸಾವಿರ ಬಂಡವಾಳ ಹಾಕಿ ಆರಂಭಿಸಿದ್ದೇನೆ. ಆರು ಜನ ಕೆಲಸ ನಿರ್ವಹಿಸುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.