ADVERTISEMENT

ಬಳ್ಳಾರಿ | ಮಳೆ ಅಬ್ಬರ: ಮನೆ, ಜಮೀನಿಗೆ ನುಗ್ಗಿದ ನೀರು

ಅವಳಿ ಜಿಲ್ಲೆಗಳಲ್ಲಿ ತುಂಬಿಹರಿದ ಹಳ್ಳ–ಕೊಳ್ಳ: ಕೊಚ್ಚಿಹೋದ ರಸ್ತೆಗಳು: ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 15:36 IST
Last Updated 5 ಅಕ್ಟೋಬರ್ 2024, 15:36 IST
ಬಳ್ಳಾರಿ ನಗರದ ಸತ್ಯನಾರಾಯಣ ಪೇಟೆ ಬಳಿಯ ಅಂಡರ್‌ ಪಾಸ್‌ನಲ್ಲಿ ಮಳೆ ನೀರು ಸಂಗ್ರಹವಾಗಿರುವುದು
ಬಳ್ಳಾರಿ ನಗರದ ಸತ್ಯನಾರಾಯಣ ಪೇಟೆ ಬಳಿಯ ಅಂಡರ್‌ ಪಾಸ್‌ನಲ್ಲಿ ಮಳೆ ನೀರು ಸಂಗ್ರಹವಾಗಿರುವುದು   

ಬಳ್ಳಾರಿ/ಹೊಸಪೇಟೆ: ಅವಳಿ ಜಿಲ್ಲೆಗಳಲ್ಲಿ ಶುಕ್ರವಾರ ತಡರಾತ್ರಿ ಹಾಗೂ ಶನಿವಾರ ನಸುಕಿನ ಜಾವ ಭಾರೀ ಮಳೆಯಾಗಿದ್ದು, ಕೆರೆ, ಹಳ್ಳ–ಕೊಳ್ಳಗಳು ತುಂಬಿಹರಿಯುತ್ತಿವೆ. ಮಳೆಗೆ ಮನೆಗಳು ಧರೆಗುರುಳಿದರೆ, ಇನ್ನೂ ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ರಾತ್ರಿಯಿಡೀ ಪರದಾಡುವಂತಾಯಿತು.

ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಆವರಣ, ಹಳೇ ತಾಲ್ಲೂಕು ಕಚೇರಿ ಆವರಣ, ಶಾಲೆ, ಕಾಲೇಜುಗಳ ಮೈದಾನ ಕೆರೆಯಂತಾದವು. ಕೊಳೆಗೇರಿಗಳಲ್ಲಿ ‌ಚರಂಡಿಗಳು ತುಂಬಿ, ಕೊಳಕು ನೀರು ಮನೆಗಳಿಗೆ ನುಗ್ಗಿದ್ದರಿಂದ, ನಿವಾಸಿಗಳು ನಿದ್ದೆಗೆಟ್ಟು ಚರಂಡಿ ನೀರನ್ನು ಮನೆಯಿಂದ ಹೊರಗೆ ಚೆಲ್ಲುವಂತಾಯಿತು.

ಜಿಲ್ಲಾ ಕ್ರೀಡಾಂಗಣ ರಸ್ತೆ ಹಾಗೂ ಸತ್ಯನಾರಾಯಣಪೇಟೆಯ ರೈಲ್ವೆ ಕೆಳಸೇತುವೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಯಿತು. ವಾಹನ ಸವಾರರು ಪರ್ಯಾಯ ರಸ್ತೆಗಳಲ್ಲಿ ಸಂಚರಿಸಿದರು.

ADVERTISEMENT

ಕಳೆದ ಕೆಲವು ದಿನಗಳಿಂದ ತಾಪಮಾನದಲ್ಲಿ ದಿಢೀರ್ ಏರಿಕೆಯಾಗಿತ್ತು. ಆದರೆ ಈಗ ಸುರಿದಿರುವ ಮಳೆ ವಾತಾವರಣವನ್ನು ತಣಿಸಿದೆ.

ನೀರಿನ ಸೆಳೆತಕ್ಕೆ ಸಿಲುಕಿದ್ದ ವ್ಯಕ್ತಿ ಸಾವು:

ಬಳ್ಳಾರಿ ತಾಲ್ಲೂಕಿನ ಶಂಕರಬಂಡೆ ಗ್ರಾಮದ ಬಳಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ವ್ಯಕ್ತಿಯೊಬ್ಬ ಕಾರು ಚಲಾಯಿಸಲು ಹೋಗಿ, ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮರದಲ್ಲಿ ಸಿಲುಕಿಕೊಂಡಿದ್ದರು. ಕೊನೆಗೆ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ.

ಶಿವು (37) ಮೃತ. ತಡರಾತ್ರಿ ಸುರಿದ ಮಳೆಗೆ ಶಂಕರಬಂಡೆ ಹಳ್ಳ ತುಂಬಿ ಹರಿಯುತ್ತಿತ್ತು. ಅದನ್ನು ಲೆಕ್ಕಿಸದೇ ಶಿವು ಕಾರು ಚಲಾಯಿಸಿದರು. ನೀರಿನ ರಭಸಕ್ಕೆ ಕಾರು ಹಳ್ಳದಲ್ಲಿ ಕೊಚ್ಚಿ ಹೋಯಿತು. ಆಗ ಕಾರಿನಿಂದ ಜಿಗಿದು ಮರದ ಮೇಲೆ ಆಶ್ರಯ ಪಡೆದಿದ್ದರು. ಬೆಳಗ್ಗೆ ನೀರು ತಗ್ಗಿದ ಬಳಿಕ ಅವರನ್ನು ಚಿಕಿತ್ಸೆಗೆಂದು ಆಸ್ಪತ್ರೆ ಸಾಗಿಸಿದರೂ, ಮಾರ್ಗ ಮಧ್ಯೆ ಮೃತಪಟ್ಟರು. ಈ ಕುರಿತು ಪ್ರಕರಣ ದಾಖಲಾಗಿದೆ.

ಬಳ್ಳಾರಿ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ನಿಂತ ನೀರಿನಲ್ಲೇ ಸಾಗಿದ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.