ADVERTISEMENT

ಅಳವಿನಂಚಿನ ಹೆಜ್ಜಾರ್ಲೆ ಸಂತಾನೋತ್ಪತ್ತಿ ಯಶಸ್ವಿ

ಅಂಕಸಮುದ್ರದ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ರಕ್ಷಣೆ

ಸಿ.ಶಿವಾನಂದ
Published 24 ಮೇ 2023, 18:35 IST
Last Updated 24 ಮೇ 2023, 18:35 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ಸಂತಾನೋತ್ಪತ್ತಿ ಮಾಡಿರುವ ಹೆಜ್ಜಾರ್ಲೆ (ಸ್ಪಾಟ್ ಬಿಲ್ಡ್ ಪೆಲಿಕಾನ್)
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ಸಂತಾನೋತ್ಪತ್ತಿ ಮಾಡಿರುವ ಹೆಜ್ಜಾರ್ಲೆ (ಸ್ಪಾಟ್ ಬಿಲ್ಡ್ ಪೆಲಿಕಾನ್)   

ಹಗರಿಬೊಮ್ಮನಹಳ್ಳಿ: ಅಳವಿನಂಚಿನಲ್ಲಿರುವ ಹೆಜ್ಜಾರ್ಲೆ (ಸ್ಪಾಟ್ ಬಿಲ್ಡ್ ಪೆಲಿಕಾನ್) ತಾಲ್ಲೂಕಿನ ಅಂಕಸಮುದ್ರದ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ಈ ವರ್ಷ ಸಂತಾನೋತ್ಪತ್ತಿಯನ್ನು ಯಶಸ್ವಿಯಾಗಿ ಪೂರೈಸಿದೆ.

ಐಯುಸಿಎನ್ (ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್)ನ ವರದಿಯಂತೆ ಅಳಿವಿನಂಚಿನಲ್ಲಿರುವ ದೇಶಿಯ ಹೆಜ್ಜಾರ್ಲೆ ಪಕ್ಷಿ ಅಂಕಸಮುದ್ರದಲ್ಲಿ ಬದುಕು ಕಂಡುಕೊಂಡಿವೆ. ಜತೆಗೆ ದೇಶ ವಿದೇಶಗಳ 144ಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ.

ಕಲ್ಯಾಣ ಕರ್ನಾಟದಲ್ಲಿರುವ ಏಕೈಕ ಪಕ್ಷಿಧಾಮ ಎಂದು ಹೆಗ್ಗಳಿಕೆ ಇರುವ ಪಕ್ಷಿಧಾಮದಲ್ಲಿ 2019 ರಲ್ಲಿ ಕೇವಲ ಒಂದು ಗೂಡನ್ನು ಮಾತ್ರ ಕಟ್ಟಿಕೊಟ್ಟಿದ್ದ ಹೆಜ್ಜಾರ್ಲೆ ಈಗ ನಾಲ್ಕು ವರ್ಷಗಳಲ್ಲಿ 5 ಗೂಡುಗಳಿಂದ 20ಕ್ಕೂ ಹೆಚ್ಚು ಮರಿಗಳನ್ನು ಹಾಕಿ ಸಂಖ್ಯೆ ಹೆಚ್ಚಿಸುವ ಮೂಲಕ ಅಳಿವಿನಂಚಿನಿಂದ ಹೊರಬರುವ ಲಕ್ಷಣಗಳು ನಿಧಾನವಾಗಿ ಮೂಡತೊಡಗಿವೆ.

ADVERTISEMENT

ಈ ಬಾನಾಡಿಗೆ ಎತ್ತರವಾದ ಮರ ಗಿಡಗಳೇ ಆವಾಸ ಸ್ಥಾನವಾಗಿದೆ. ಆದರೆ ಅವುಗಳಿಗೆ ಅನುಕೂಲಕರವಾದ ಸ್ಥಳಗಳಲ್ಲಿ ಎತ್ತರದ ಗಿಡಗಳಿರದೇ ಇರುವುದು ಸಂತಾನೋತ್ಪತ್ತಿಗೆ ತೊಡಕಾಗಿದೆ. ಬಾನಾಡಿಗಳಿಗೆ ಅಗತ್ಯವಾದ ಮೀನಿನ ಆಹಾರ ಸಿಗದಿರುವುದು ಅಳಿವಿನಂಚಿನ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಪಕ್ಷಿ ಪ್ರೇಮಿ ವಿಜಯ್ ಇಟ್ಟಿಗಿ. ನದಿಗಳ ಹಿನ್ನೀರು ಪ್ರದೇಶಗಳಲ್ಲಿ ಮೀನು ಇದರ ಮುಖ್ಯ ಆಹಾರ ಆಗಿರುವುದರಿಂದ ಮೀನುಗಾರರು ಪಕ್ಷಿಗಳಿಗೆ ತೊಂದರೆ ಕೊಡುವುದರಿಂದಲೂ ಬಾನಾಡಿಗಳ ಸಂಖ್ಯೆ ಇಳಿಮುಖವಾಗಿದೆ ಎನ್ನುತ್ತಾರೆ. ಆದರೆ ಅಂಕಸಮುದ್ರದ ಕೆರೆ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ಎತ್ತರದ ಮರಗಳಿದ್ದು ಅಲ್ಲಿ ಸಂತಾನೋತ್ಪತ್ತಿ ಆರಂಭಿಸಿದೆ, ಇಲ್ಲಿ ಯಾವುದೇ ತೊಂದರೆ ಇರದ ಕಾರಣಕ್ಕಾಗಿ ನಿರ್ಭಯದಿಂದ ತಮ್ಮ ಸಂಖ್ಯೆಯನ್ನು ನಿಧಾನವಾಗಿ ಹೆಚ್ಚಿಸಿಕೊಂಡಿವೆ. ಕೆರೆಯಲ್ಲಿ ಅಗತ್ಯ ಮೀನು ಆಹಾರ ಪಕ್ಷಿಗಳಿಗೆ ದೊರೆಯುತ್ತಿವೆ, ಮೀನುಗಾರಿಕೆಯನ್ನು ಇಲ್ಲಿ ಸಂಪೂರ್ಣ ನಿಷೇಧಿಸುವ ಮೂಲಕ ಅರಣ್ಯ ಇಲಾಖೆ ಪಕ್ಷಿಗಳ ರಕ್ಷಣೆಗೆ ಮುಂದಾಗಿದೆ. ಪಕ್ಷಿಗಳಿಗೆ ಅಗತ್ಯ ಇರುವ ಮೀನುಗಳ ಮರಿಗಳನ್ನು ಬಿಡಲಾಗುತ್ತಿದೆ.

ಅಂಕಸಮುದ್ರ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ನಿರ್ಭಯವಾಗಿ ವಿಹರಿಸುತ್ತಿರುವ ಹೆಜ್ಜಾರ್ಲೆ
ಕಳೆದ ವರ್ಷದಿಂದ ಕೆರೆಯಲ್ಲಿ 12 ತಿಂಗಳು ನೀರು ಇರುವುದರಿಂದ ಮೀನುಗಳ ಸಂಖ್ಯೆ ಹೆಚ್ಚಾಗಿದೆ ಇದರಿಂದಾಗಿ ಬಾನಾಡಿಗಳಿಗೆ ಯಥೇಚ್ಛ ಆಹಾರ ದೊರಕಿದೆ. ಕೆರೆಯ ಅಲ್ಲಲ್ಲಿ ಐಲ್ಯಾಂಡ್‍ಗಳನ್ನು ನಿರ್ಮಿಸಿ ಗಿಡಮರಗಳನ್ನು ಹಾಕಿರುವುದು ಪಕ್ಷಿಗಳ ಸಂತಾನೋತ್ಪತ್ತಿಗೆ ರಕ್ಷಣೆ ಸಿಕ್ಕಂತಾಗಿದೆ.
ಶಿವಕುಮಾರ್ ಹಿಟ್ನಾಳ್ ವಲಯ ಅರಣ್ಯ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.