ADVERTISEMENT

ಕಂಪ್ಲಿ | ಪಿಡಿಒ ಲಂಚ ಪ್ರಕರಣ ಆರೋಪ ರದ್ದುಪಡಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 16:18 IST
Last Updated 29 ಜೂನ್ 2024, 16:18 IST

ಕಂಪ್ಲಿ: ತಾಲ್ಲೂಕಿನ ನಂ.10 ಮುದ್ದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಬೀರಲಿಂಗ ಅವರು ಲಂಚ ಸ್ವೀಕಾರ ಆರೋಪದ ಕುರಿತು ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಪ್ರಸ್ತುತ ಪ್ರಕರಣವನ್ನು ರದ್ದುಪಡಿಸಿ ತೀರ್ಪು ನೀಡಿದ್ದಾರೆ.

ಈ ಕುರಿತು ವಾದ ಮಂಡಿಸಿದ ಹೈಕೋರ್ಟ್ ವಕೀಲ ವಿಶ್ವನಾಥ.ಎಸ್.ಬಿಚಗತ್ತಿ ಪತ್ರಿಕಾ ಪ್ರಕಟಣೆ ನೀಡಿ, ಪಟ್ಟಣದ ಎಂ.ನಾರಾಯಣಸ್ವಾಮಿ ಎಂಬುವವರು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ 2.15 ಎಕರೆ ಜಮೀನಿಗೆ ತಾಂತ್ರಿಕ ಅನುಮೋದನೆಗಾಗಿ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯಲು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಲೇವರಿಗಾಗಿ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಎಸಿಬಿ ಜಿಲ್ಲಾ ಪೊಲೀಸ್ ಉಪ ಅಧೀಕ್ಷಕರಿಗೆ ಜೂನ್ 30, 2022 ರಂದು ಅವರು ದೂರು ದಾಖಲಿಸಿದ್ದರು. ಅದೇ ದಿನ ಎ.ಸಿ.ಬಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಕಕ್ಷಿದಾರರು (ಪಿಡಿಒ) ಮಹಜರು ಮಾಡಿದ ಸ್ಥಳದಲ್ಲಿ ಇರಲಿಲ್ಲ.

ADVERTISEMENT

ಕಕ್ಷಿದಾರರು ಲಂಚಕ್ಕೆ ಬೇಡಿಕೆ ಇಡಲು ಅವರ ಮೇಜಿನ ಮೇಲೆ ಯಾವುದೇ ಕೆಲಸ ಬಾಕಿ ಉಳಿದಿಲ್ಲ. ಅಲ್ಲದೇ ಕೆಲಸ ಮುಗಿದ 64 ದಿನಗಳ ನಂತರ ಕಕ್ಷಿದಾರರ ಮೇಲೆ ದೂರು ದಾಖಲಾಗಿರುತ್ತದೆ ಎಂದು ಕೋರ್ಟ್‍ಗೆ ವಿವರಿಸಿದ್ದಾಗಿ ತಿಳಿಸಿದ್ದಾರೆ.

ಪ್ರಸ್ತುತ ಪ್ರಕರಣದ ಕಕ್ಷಿದಾರ ಪಿಡಿಒ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1988ರ ಕಾಯ್ದೆಯ ಸೆಕ್ಷನ್ 7 ಮತ್ತು 7ಎ ಅಡಿಯಲ್ಲಿ ಯಾವುದೇ ಬೇಡಿಕೆಯೂ ಇಲ್ಲ ಮತ್ತು ಸ್ವೀಕಾರವೂ ಇಲ್ಲ ಎಂದು ಕೋರ್ಟ್‍ಗೆ ದಾಖಲೆ ಮೂಲಕ ಮನವರಿಕೆ ಮಾಡಿದ್ದಾಗಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‍ನಲ್ಲಿನ ‘ನೀರಜ್' ದತ್ತ ಪ್ರಕರಣ ಮತ್ತು ಸ್ಟೇಟ್ ಆಫ್ ಹರಿಯಾಣ ವಿರುದ್ಧದ `ಭಜನ್' ಪ್ರಕರಣಗಳನ್ನು ಉಲ್ಲೇಖಿಸಿ ಕಕ್ಷಿದಾರರ ಮೇಲಿನ ಸಂಪೂರ್ಣ ದೋಷಾರೋಪಗಳು ಕಾಯ್ದೆಯ ವಿರುದ್ಧವಾಗಿರುವುದರಿಂದ ಹೈಕೋರ್ಟ್ ಪೀಠ ಈ ಪ್ರಕರಣವನ್ನು ರದ್ದುಗೊಳಿಸಿದೆ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.