ಹರಪನಹಳ್ಳಿ: ಕಣ್ಣು ಹಾಯಿಸಿದಷ್ಟು ದೂರ ಮುಳ್ಳಿನ ಗಿಡಗಳಲ್ಲಿ ಆಶ್ರಯ ಪಡೆದಿರುವ ಹಕ್ಕಿಗಳ ಚಿಲಿಪಿಲಿ ಸದ್ದು, ಸೂರ್ಯಾಸ್ತದ ಹೊತ್ತಿಗೆ ಹಿಂಡು ಹಿಂಡಾಗಿ ಗೂಡಿಗೆ ಮರಳುವ ಬಾನಾಡಿಗಳ ಕಲರವ, ಇಲ್ಲಿ ಪಕ್ಷಿಗಳದ್ದೇ ಜಾತ್ರೆ ಎನ್ನುವಂತೆ ಭಾಸವಾಗುವ ದೃಶ್ಯಗಳಿಗೆ ಪಟ್ಟಣದ ಐತಿಹಾಸಿಕ ಹಿರೆಕೆರೆ ಈಗ ಸಾಕ್ಷಿಯಾಗಿದೆ.
ಮುಕ್ಕಾಲು ಭಾಗ ಕೆರೆ ಪ್ರದೇಶ ಮುಳ್ಳಿನ ಗಿಡಗಳಿಂದ ತುಂಬಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಕೆರೆ ಭರ್ತಿಯಾಗಿ, ತೇವಾಂಶ ಹೆಚ್ಚಳವಾಗಿ ಒಣಗಿ ನಿಂತಿರುವ ಮುಳ್ಳಿನ ಗಿಡಗಳೀಗ ವಿವಿಧ ಜಾತಿ ದೇಸಿ ಮತ್ತು ವಿದೇಶಿ ಬಾನಾಡಿಗಳಿಗೆ ಆಶ್ರಯ ತಾಣವಾಗಿದೆ.
ಬೆಳಿಗ್ಗೆ ಮತ್ತು ಸಂಜೆಯಾದರೆ ಸಾಕು ಪಾದಚಾರಿಗಳು, ಬೈಕ್ ಸವಾರರು ಸ್ವಲ್ಪ ಹೊತ್ತು ಕೆರೆದಡದಲ್ಲಿ ವಿರಮಿಸಿ ಪಕ್ಷಿಗಳ ಇಂಪಾದ ಚಿಲಿಪಿಲಿ ನಾದ ಆಲಿಸುತ್ತಾರೆ, ಗುಂಪು ಗುಂಪಾಗಿ ಬಾನಿಗೆ ಹಾರುವಾಗ ಮೂಡಿಸುವ ಚಿತ್ತಾರ ಕಣ್ತುಂಬಿಕೊಂಡು ಖುಷಿ ಪಡುತ್ತಾರೆ. ದೇಸಿ ತಳಿಯ ಕೆಂಬರಲು, ಕರಿಯ ಕೆಂಬರಲು, ದೊಡ್ಡ ಬೆಳ್ಳಕ್ಕಿ, ಕೊಕ್ಕರೆ, ಗೀಜಗ, ಕೃಷ್ಣವಾಹನ ಪಕ್ಷಿ, ಚಿಟಗುಬ್ಬಿ, ಗುಣಮಣಕ, ಹೆಬ್ಬಾತು, ಬಾತುಕೋಳಿ, ನೀರುಕೋಳಿ, ನೀರು ಕಾಗೆ, ಮೈನಾ, ಬೆಳ್ಳಕ್ಕಿ, ಕಿಂಗ್ ಪಿಷರ್ ಮತ್ತು ಗರುಡ ಪಕ್ಷಿಗಳು ಅಲಗಿಲವಾಡ, ಗರ್ಭಗುಡಿ, ಹರಪನಹಳ್ಳಿ, ಮುತ್ತಿಗಿ, ನಂದಿಬೇವೂರು, ಅರಸಿಕೆರೆ, ಕಂಚಿಕೆರೆ ಸೇರಿ ಹಲವೆಡೆ ಕಾಣ ಸಿಗುತ್ತವೆ.
ಮಂಗೋಲಿಯಾ ದೇಶದ ಬಾರ್ ಹೆಡೆಡ್ ಗೂಸ್(ಪಟ್ಟೆ ಬಾತು), ಪೇಂಟೆಡ್ ಸ್ಟಾರ್ಕ್(ದಾಸ ಕೊಕ್ಕರೆ), ಉತ್ತರ ಯುರೋಪ್‌ನ ಮರಳು ಪೀಪ್(ಸ್ಯಾಂಡ್ ಪೈಪರ್), ಲಿಟ್ಲ್ ಕಾರ್ಮೊರೆಂಟ್, ನೈಜೇರಿಯಾದ ಬ್ಲಾಕ್ ಟೇಲರ್, ಗಾಡ್ ವಿಟ್ ಪಕ್ಷಿಗಳು ಹರಪನಹಳ್ಳಿ, ಯಲ್ಲಾಪುರ ಕೆರೆಯಲ್ಲಿ ಕಾಣಿಸಿಕೊಂಡಿವೆ. ಪೂರ್ವ ಯುರೋಪ್ ಮತ್ತು ಮದ್ಯ ಏಷ್ಯಾದಿಂದ ಬಂದಿರುವ ಮೈ ಜುಮ್ಮೆನಿಸುವ ರೋಜಿ ಫ್ಯಾಸ್ಟರ್(ಗುಲಾಬಿ ಕಬ್ಬಕ್ಕಿ, ಕೇಸರಿ ಮೈನಾ) ದಂಡು ದಾಂಗುಡಿ ಇಟ್ಟಿವೆ. ಇವು ಆಗಸ್ಟ್‌ಗೆ ಆಗಮಿಸಿ ಏಪ್ರಿಲ್ ತಿಂಗಳಿಗೆ ಹೊರಟು ಬಿಡುತ್ತವೆ ಎನ್ನುತ್ತಾರೆ ಪರಿಸರ ಪ್ರೇಮಿ ಬಿ.ಎಚ್.ಚಂದ್ರಪ್ಪ.
ಚಳಿಗಾಲಕ್ಕೆ ಬರುವ ವಿದೇಶಿ ಪಕ್ಷಿಗಳು ಮೊಟ್ಟೆ ಇಟ್ಟು ಮರಿ ಮಾಡಿಸಿಕೊಂಡು ಹೊರಟು ಬಿಡುವ ಸಮಯ ಹತ್ತಿರ ಬಂದಿದೆ. ದಾಂಗುಡಿ ಇಟ್ಟಿರುವ ಪಕ್ಷಿಗಳನ್ನು ವೀಕ್ಷಿಸಲು ಕೆರೆ ಅಂಗಳಕ್ಕೊಮ್ಮೆ ಬೇಟಿಕೊಟ್ಟು ಇಂಪಾದ ನಾದ ತಮ್ಮ ಕಿವಿಗೂ ತಾಗಿಸಿಕೊಳ್ಳಿ.
ಹಿಂಡಾಗಿ ಬಂದಿರುವ ರೋಜಿ ಸ್ಟಾರ್‌ಲಿಂಗ್ ಪಕ್ಷಿಗಳು ಆಕಾಶಕ್ಕೆ ಹಾರಿದಾಗ ಮೂಡುವ ಚಿತ್ತಾರಗಳನ್ನು ಕಣ್ತುಂಬಿಕೊಳ್ಳುವುದೇ ಖುಷಿ. ಮಂಗಳವಾರ ಹರಪನಹಳ್ಳಿ ಕೆರೆಯಲ್ಲಿ ಭಾರತದ್ದೇ ‘ಗ್ರೇ ಬಿಲ್ಲೀಡ್ ಕುಕ್ಕು’ ಹಕ್ಕಿ ಕಾಣಿಸಿಕೊಂಡಿದೆ.ಬಿ.ಎಚ್.ಚಂದ್ರಪ್ಪ., ಪರಿಸರ ಪ್ರೇಮಿ ಹರಪನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.