ADVERTISEMENT

ಹೊನ್ನಳ್ಳಿ ಘಟನೆ: ದೂರು, ಪ್ರತಿ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 26 ಮೇ 2024, 15:45 IST
Last Updated 26 ಮೇ 2024, 15:45 IST

ಕಂಪ್ಲಿ: ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕೆಲವರ ನಡುವೆ ನಡೆದ ಘರ್ಷಣೆ ಕುರಿತಂತೆ ಶನಿವಾರ ರಾತ್ರಿ ಕುಡಿತಿನಿ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರು ದಾಖಲಾಗಿದೆ.

ಗ್ರಾಮದ ಹುಲುಗಪ್ಪ ಎಂಬುವವರು ಆಂಜನೇಯ ದೇವಸ್ಥಾನ ಒಳಗೆ ಪೂಜೆ ಸಲ್ಲಿಸಲು ಹೋಗುತ್ತಿದ್ದಾಗ ಅಲ್ಲಿಯೇ ಇದ್ದ ಛಾಯಾಪ್ಪ, ವಿಶಾಲಾಕ್ಷಿ, ಝಂಡಾಕಟ್ಟೆ ಶೇಷಾವಲಿ ಅವರು ಜಾತಿ ನಿಂದನೆ ಮಾಡಿ, ಅವಾಚ್ಯವಾಗಿ ಬಯ್ದು ದೇವಸ್ಥಾನ ಪ್ರವೇಶಿಸುವುದನ್ನು ತಡೆದರು. ಅಲ್ಲಿನ ಕೆಲವರು ಅವರ ಮೇಲೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುವುದಾಗಿ ದೊಡ್ಡ ರಾಮಲಿಸ್ವಾಮಿ ದೂರು ದಾಖಲಿಸಿದ್ದಾರೆ.

ಪ್ರತಿ ದೂರು ದಾಖಲು: ಗ್ರಾಮದ ಆಂಜನೇಯ ದೇವಸ್ಥಾನದ ಒಳ ಭಾಗ ಸ್ವಚ್ಛ ಗೊಳಿಸುತ್ತಿದ್ದ ಕಾರಣ ಸ್ವಲ್ಪ ತಡೆದು ಒಳಗಡೆ ಬಾ ಎಂದು ಹುಲುಗಪ್ಪ ಎಂಬುವವರಿಗೆ ತಿಳಿಸಲಾಗಿತ್ತು. ಅದಕ್ಕೆ ಹುಲುಗಪ್ಪ ಅವರು ಜಗಳ ತೆಗೆದು ಅವಾಚ್ಯವಾಗಿ ನಿಂದಿಸಿದ್ದಾರೆ. ಮೈಮೇಲಿನ ಬಟ್ಟೆ ಎಳೆದಾಡಿ ಮಾರ್ಯಾದೆಗೆ ಧಕ್ಕೆ ಉಂಟು ಮಾಡಿ, ಪ್ರಾಣ ಬೆದರಿಕೆ ಹಾಕಿದ್ದಾರೆ. ಈ ಘಟನೆಯಲ್ಲಿ ಗಾದಿಲಿಂಗಪ್ಪ ಅವರ ಮೇಲೆಯೂ ಹಲ್ಲೆ ನಡೆದಿದೆ ಎಂದು ವಿಶಾಲಾಕ್ಷಿ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಎರಡು ದೂರುಗಳ ಕುರಿತು ತನಿಖೆ ನಡೆಯುತ್ತಿದೆ. ಗ್ರ್ರಾಮದಲ್ಲಿ ಸಹಜ ಸ್ಥಿತಿ ಇದ್ದು, ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ. ಡಿವೈಎಸ್‍ಪಿ ಪ್ರಸಾದ್ ಗೋಖಲೆ ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ್ದರು’ ಎಂದು ಸಿಪಿಐ ವಿಶ್ವನಾಥ ಹಿರೇಗೌಡರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.