ಹೊಸಪೇಟೆ: ತಾಲ್ಲೂಕಿನ ಬಿಳಿಕಲ್ ಸಂರಕ್ಷಿತ ಅರಣ್ಯದ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದ ಎಂಟು ಪ್ರಾಣಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಬುಧವಾರ ಉದ್ಯಾನದಲ್ಲಿ ನಡೆಯಿತು.
ಸಂಡೂರಿನ ವೀರಭದ್ರಪ್ಪ ಸಂಗಪ್ಪ ಗಣಿ ಕಂಪನಿಯು ವಾಯುಪುತ್ರ ಹೆಸರಿನ ಹುಲಿ, ಕುಮಾರಸ್ವಾಮಿ ಮಿನರಲ್ಸ್ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಕೆಸರಿ ಹೆಸರಿನ ಸಿಂಹ ಹಾಗೂ ಪಿ. ಬಾಲಸುಬ್ಬ ಶೆಟ್ಟಿ ಅಂಡ್ ಸನ್ ಕಂಪನಿಯು ಚಾಮುಂಡಿ ಹೆಸರಿನ ಹುಲಿಯನ್ನು ದತ್ತು ತೆಗೆದುಕೊಂಡಿದೆ. ಮೂರೂ ಕಂಪನಿಗಳು ತಲಾ ₹1 ಲಕ್ಷ ಪಾವತಿಸಿವೆ.
ವಿಜಯಾ ಬ್ಯಾಂಕ್ ಶಾಖೆಯು ತಲಾ ಒಂದು ನರಿ ಹಾಗೂ ನೀಲಗಾಯ್, ದೇನಾ ಬ್ಯಾಂಕ್ ಶಾಖೆಯು ತಲಾ ಒಂದು ಗುಳ್ಳೇನರಿ, ನೀಲಗಾಯ್ ಅನ್ನು ತಲಾ ₹30,000 ಕೊಟ್ಟು ದತ್ತು ಸ್ವೀಕರಿಸಿವೆ. ಎಚ್‌ಡಿಎಫ್‌ಸಿ ಬ್ಯಾಂಕ್ ಹೊಸಪೇಟೆ ಶಾಖೆಯು ₹21,000ಕ್ಕೆ ಕತ್ತೆ ಕಿರುಬ ಪ್ರಾಣಿಯನ್ನು ದತ್ತು ತೆಗೆದುಕೊಂಡಿದೆ.
ವೀರಭದ್ರಪ್ಪ ಮತ್ತು ಕುಮಾರಸ್ವಾಮಿ ಗಣಿ ಕಂಪನಿಗಳು 2024ರ ವರೆಗೆ ಪ್ರಾಣಿಗಳನ್ನು ದತ್ತು ತೆಗೆದುಕೊಂಡರೆ, ಬಾಲಸುಬ್ಬ ಶೆಟ್ಟಿ ಕಂಪನಿಯವರು 2022ರ ವರೆಗೆ ದತ್ತು ಸ್ವೀಕರಿಸಿದ್ದಾರೆ. ಎಚ್‌ಡಿಎಫ್‌ಸಿ ಬ್ಯಾಂಕ್, ವಿಜಯಾ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ಒಂದು ವರ್ಷದ ಅವಧಿಗೆ ದತ್ತು ತೆಗೆದುಕೊಂಡಿವೆ.
ದತ್ತು ಸ್ವೀಕರಿಸಿದವರಿಗೆ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ ಅವರು ಪ್ರಮಾಣ ಪತ್ರ ವಿತರಿಸಿದರು. ಬಳ್ಳಾರಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್. ಲಿಂಗರಾಜ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದರಾಮಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.