ಹೂವಿನಹಡಗಲಿ: ತಾಲ್ಲೂಕಿನ ಹಿರೇಹಡಗಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಮಗಾರಿ ಒಂದೂವರೆ ದಶಕವಾದರೂ ಪೂರ್ಣಗೊಂಡಿಲ್ಲ. ಶಾಶ್ವತವಾಗಿ ನನೆಗುದಿಗೆ ಬಿದ್ದಿರುವ ಈ ಕಾಮಗಾರಿಯನ್ನು ಪೂರ್ಣಗೊಳಿಸುವ ಇಚ್ಛಾಶಕ್ತಿ ಯಾರಿಗೂ ಇಲ್ಲ.
ಹಿರೇಹಡಗಲಿಯಲ್ಲಿ ನೂತನ ಆಸ್ಪತ್ರೆ ನಿರ್ಮಿಸಲು 2002–03ರಲ್ಲಿ ಸೋನಿಯಾ ಪ್ಯಾಕೇಜ್ ಅಡಿಯಲ್ಲಿ ಚಾಲನೆ ನೀಡಲಾಗಿತ್ತು. ಕಾಮಗಾರಿ ಏಜೆನ್ಸಿ ಪಡೆದಿದ್ದ ಅಂದಿನ ಭೂ ಸೇನಾ ನಿಗಮವು ಬಿಡುಗಡೆಯಾಗಿದ್ದ ₨17 ಲಕ್ಷ ಅನುದಾನದಲ್ಲಿ ಕಟ್ಟಡ ನಿರ್ಮಿಸಿ, ಆರ್.ಸಿ.ಸಿ .ಮೇಲ್ಛಾವಣಿ ಹಾಕಿ ಕೈ ತೊಳೆದುಕೊಂಡಿದೆ. ಬಾಕಿ ಕಾಮಗಾರಿಗಳಿಗೆ ಸರ್ಕಾರ ಪೂರಕ ಅನುದಾನ ಬಿಡುಗಡೆಗೊಳಿಸದೇ ಇರುವುದರಿಂದ ಕಟ್ಟಡ ಅರೆಬರೆಯಾಗಿದೆ.
16 ವರ್ಷಗಳ ಹಿಂದೆ ಆಸ್ಪತ್ರೆಯ ಕಟ್ಟಡ ನಿರ್ಮಿಸಿ, ಪೂರ್ಣಗೊಳಿಸದೇ ಇರುವುದರಿಂದ ಮೇಲ್ಛಾವಣಿಯ ಸಿಮೆಂಟ್ ಕಳಚಿ ಬೀಳುತ್ತಿದೆ. ಇಡೀ ಕಟ್ಟಡ ಶಿಥಿಲಗೊಂಡಿದ್ದು, ಸೋನಿಯಾ ಪ್ಯಾಕೇಜ್‌ನ ಸ್ಮಾರಕವಾಗಿ ನಿಂತಿದೆ. ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಕ್ಷೇತ್ರದಲ್ಲಿ ಅದೇ ಪಕ್ಷದ ಶಾಸಕರು ಆಯ್ಕೆಯಾಗಿದ್ದರೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೆಸರಿನ ಯೋಜನೆಗಳಿಗೆ ಕಾಯಕಲ್ಪ ದೊರೆಯಲಿಲ್ಲ’ ಎಂದು ಹಿರೇಹಡಗಲಿಯ ಜನತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಆಸ್ಪತ್ರೆ ಕಟ್ಟಡ ಪೂರ್ಣಗೊಳಿಸುವಂತೆ ಪ್ರಗತಿಪರ ಸಂಘಟನೆಗಳು ಹಲವಾರು ಬಾರಿ ಪ್ರತಿಭಟನೆ ನಡೆಸಿವೆ. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿ ಈ ಸಮಸ್ಯೆ ಕುರಿತು ಸಾಕಷ್ಟು ಬಾರಿ ಚರ್ಚೆಯಾಗಿವೆ. ಆದರೂ ಪ್ರಯೋಜನವಾಗಿಲ್ಲ. ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಅವರು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ನಡೆಸಿದ ಕೆ.ಡಿ.ಪಿ. ಸಭೆಯಲ್ಲಿ ಈ ಸಮಸ್ಯೆ ಚರ್ಚೆಯಾಗಿತ್ತು. ಸಭೆಯಲ್ಲಿ ಉಪಸ್ಥಿತರಿದ್ದ ಅಂದಿನ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಆಸ್ಪತ್ರೆ ಕಟ್ಟಡದ ಈಗಿನ ಸ್ಥಿತಿ ಮತ್ತು ಪೂರ್ಣಗೊಳಿಸಲು ಅಗತ್ಯ ಅನುದಾನ ಕುರಿತು ಕ್ರಿಯಾ ಯೋಜನೆ ಸಲ್ಲಿಸಿದಲ್ಲಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದ್ದರು. ಕಾಮಗಾರಿ ಏಜೆನ್ಸಿ ಪಡೆದಿದ್ದ ಭೂ ಸೇನಾ ನಿಗಮವು ₨45 ಲಕ್ಷಗಳಿಗೆ ಅಂದಾಜುಪಟ್ಟಿ ಸಲ್ಲಿಸಿದ್ದರೂ ಈವರೆಗೂ ಅನುದಾನ ಬಿಡುಗಡೆಯಾಗಿಲ್ಲ.
ಅಪೂರ್ಣ ಯೋಜನೆ ಮತ್ತು ಹಳೆಯ ಕಟ್ಟಡಗಳಿಗೆ ಮಂಡಳಿಯಿಂದ ಅನುದಾನ ಬಿಡುಗಡೆಗೊಳಿಸಲು ನಿಯಮಗಳು ಅಡ್ಡಿ ಆಗಿರುವುದರಿಂದ ಹೊಸ ಕ್ರಿಯಾ ಯೋಜನೆ ಕಸದ ಬುಟ್ಟಿ ಸೇರಿದೆ. ಸರ್ಕಾರದ ವಿಶೇಷ ಅನುದಾನ ಅಥವಾ ಶಾಸಕರ ಪ್ರದೇಶಾಭಿವೃದ್ಧಿಯ ಅನುದಾನವನ್ನಾದರೂ ಮಂಜೂರು ಮಾಡಿ ಕಟ್ಟಡ ಪೂರ್ಣಗೊಳಿಸಬಹುದಿತ್ತು. ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸದೇ ಇರುವುದರಿಂದ ಆಸ್ಪತ್ರೆ ಕಟ್ಟಡ ಶಾಶ್ವತವಾಗಿ ನನೆಗುದಿಗೆ ಬೀಳುವಂತಾಗಿದೆ ಎನ್ನುತ್ತಾರೆ ಜನ.
‘ತಾಲ್ಲೂಕಿನಲ್ಲೇ ಹಿರೇಹಡಗಲಿ ದೊಡ್ಡ ಹೋಬಳಿ ಕೇಂದ್ರವಾಗಿದೆ. ಹಿರೇಹಡಗಲಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಚಿಕಿತ್ಸೆಗಾಗಿ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ. ಹೀಗಿರುವ ಹಳೆಯ ಕಟ್ಟಡದಲ್ಲಿ ಸ್ಥಳ ಅಭಾವ ಇರುವುದರಿಂದ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಮರೀಚಿಕೆಯಾಗಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿಗಳಾದ ಉಜ್ಜಿನಿ ಕೊಟ್ರೇಶ್, ಲಕ್ಷ್ಮಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.